ಭಾನುವಾರ ಯೆಲ್ಲೋ ಮೆಟ್ರೋ ಮಾರ್ಗ ಉದ್ಘಾಟನೆ – ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಸಂಚಾರ ಬದಲಾವಣೆ

Public TV
3 Min Read

ಬೆಂಗಳೂರು: ಭಾನುವಾರ ಹಳದಿ ಮೆಟ್ರೋ ಮಾರ್ಗ (Yellow Line Metro) ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ (Narendra Modi) ಸೇರಿದಂತೆ ಗಣ್ಯ ವ್ಯಕ್ತಿಗಳು ಹಾಗೂ ಸಾವಿರಾರು ಜನ ಸೇರುವ ಹಿನ್ನೆಲೆ ಬೆಂಗಳೂರಿನ (Bengaluru) ಕೆಲವು ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.

ಬಹಳ ದಿನಗಳ ಕನಸು, ಬೆಂಗಳೂರಿನ ಯೆಲ್ಲೋ ಮೆಟ್ರೋ ಲೈನ್ ಅನ್ನು ನಾಳೆ (ಆ. 10) ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿಯವರನ್ನು ಬೆಂಗಳೂರಿನ ಮೇಖ್ರಿ ವೃತ್ತ, ಚಾಲುಕ್ಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸೌತ್‌ಎಂಡ್ ಸರ್ಕಲ್, ರಾಗಿಗುಡ್ಡ, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್‌ಗಳ ಬಳಿ ಮತ್ತು ಮೆಟ್ರೋ ಹಳದಿ ಮಾರ್ಗದ ಎಲ್ಲಾ ಮೆಟ್ರೋ ಸ್ಟೇಷನ್‌ಗಳಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಸ್ವಾಗತಿಸಲಿದ್ದಾರೆ. ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಹಾಗೂ ಕಾರ್ಯಕರ್ತರು ಸೇರುವ ಹಿನ್ನೆಲೆ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಬೆಳಗ್ಗೆ 8:30 ರಿಂದ 12ರವರೆಗೆ ಸಂಚಾರ ನಿರ್ಬಂಧ ಮಾರ್ಗಗಳು:
* ಮಾರೇನಹಳ್ಳಿ ಮುಖ್ಯ ರಸ್ತೆಯ ರಾಜಲಕ್ಷ್ಮೀ ಜಂಕ್ಷನ್‌ನಿಂದ ಮಾರೇನಹಳ್ಳಿ 18ನೇ ಮುಖ್ಯ ರಸ್ತೆಯವರೆಗೆ.
* ಮಾರೇನಹಳ್ಳಿ ಈಸ್ಟ್ ಎಂಡ್ ಮುಖ್ಯ ರಸ್ತೆ ಜಂಕ್ಷನ್‌ನಿಂದ ಅರವಿಂದ ಜಂಕ್ಷನ್‌ವರೆಗೆ.

ಬೆಳಗ್ಗೆ 9:30ರಿಂದ ಮಧ್ಯಾಹ್ನ 2:30ರವರೆಗೆ ನಿರ್ಬಂಧಿತ ರಸ್ತೆಗಳು:
* ಸಿಲ್ಕ್ ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮತ್ತು ಹೊಸೂರು ರಸ್ತೆಯ ಮೂಲಕ ಹೊಸೂರು ಕಡೆಗೆ.
* ಹೊಸೂರು ಕಡೆಯಿಂದ ಬೆಂಗಳೂರು ನಗರದ ಕಡೆಗೆ.
* ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದ ಇನ್‌ಫೋಸಿಸ್ ಅವೆನ್ಯೂ, ವೇಲಾಂಕಣಿ ರಸ್ತೆ, ಹೆಚ್.ಪಿ. ಅವೆನ್ಯೂ ರಸ್ತೆಗಳಲ್ಲಿ ನಿರ್ಬಂಧ.

ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗಗಳು:
ಮಾರೇನಹಳ್ಳಿ ಮುಖ್ಯ ರಸ್ತೆಯ ರಾಜಲಕ್ಷ್ಮಿ ಜಂಕ್ಷನ್‌ನಿಂದ ಮಾರೇನಹಳ್ಳಿ 18ನೇ ಮುಖ್ಯ ರಸ್ತೆಯ ಮಾರ್ಗವಾಗಿ ಜಯದೇವ ಕಡೆಗೆ ಸಂಚರಿಸುವ ವಾಹನ ಸವಾರರು ಬನಶಂಕರಿ ಬಸ್ ನಿಲ್ದಾಣದ ಕಡೆಯಿಂದ ಸಾರಕ್ಕಿ ಮಾರ್ಕೆಟ್ ರಸ್ತೆ/9ನೇ ಕ್ರಾಸ್ ರಸ್ತೆಯಲ್ಲಿ ಎಡ ತಿರುವು ಪಡೆದು ಐ.ಜಿ ಸರ್ಕಲ್, ಆರ್.ವಿ. ಡೆಂಟಲ್ ಜಂಕ್ಷನ್ ಮಾರ್ಗವಾಗಿ 8ನೇ ಮುಖ್ಯ ರಸ್ತೆ 9ನೇ ಕ್ರಾಸ್ ರಸ್ತೆ ಜಂಕ್ಷನ್ ಮೂಲಕ ಜಯದೇವ ಕಡೆಗೆ ಸಂಚರಿಸಬಹುದಾಗಿರುತ್ತದೆ ಹಾಗೂ ಸಾರಕ್ಕಿ ಜಂಕ್ಷನ್ ಔಟರ್ ರಿಂಗ್ ರಸ್ತೆಯ ಮೂಲಕ ಸಹ ಬನ್ನೇರುಘಟ್ಟ ರಸ್ತೆ ಕಡೆಗೆ ಚಲಿಸಬಹುದು.

ನಾಲ್ಕನೇ ಮುಖ್ಯ ರಸ್ತೆ ಕಡೆಯಿಂದ ಜಯದೇವ ಕಡೆಗೆ ಸಂಚರಿಸುವ ವಾಹನ ಸವಾರರು ರಾಜಲಕ್ಷ್ಮೀ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಸಾರಕ್ಕಿ ಮುಖ್ಯರಸ್ತೆಯಲ್ಲಿ ಎಡ ತಿರುವು ಪಡೆದುಕೊಂಡು ಐ.ಜಿ ಸರ್ಕಲ್ ಆರ್.ವಿ. ಡೆಂಟಲ್ ಮಾರ್ಗವಾಗಿ 8ನೇ ಮುಖ್ಯ ರಸ್ತೆ 9ನೇ ಕ್ರಾಸ್ ರಸ್ತೆ ಜಂಕ್ಷನ್ ಮೂಲಕ ಜಯದೇವ ಕಡೆಗೆ/ಬನ್ನೇರುಘಟ್ಟ ರಸ್ತೆ ಕಡೆಗೆ ಸಂಚರಿಸಬಹುದು.

ಈಸ್ಟ್ ಎಂಡ್ ಸರ್ಕಲ್ ಕಡೆಯಿಂದ ಬನಶಂಕರಿ ಕಡೆಗೆ ಸಂಚರಿಸುವ ವಾಹನ ಸವಾರರು 29ನೇ ಮುಖ್ಯ ರಸ್ತೆಯಲ್ಲಿ 28ನೇ ಮುಖ್ಯ ರಸ್ತೆಯಲ್ಲಿ ಎಡ ತಿರುವು ಪಡೆದು 8ನೇ ಮುಖ್ಯ ರಸ್ತೆ 9ನೇ ಕ್ರಾಸ್ ಜಂಕ್ಷನ್ ಮೂಲಕ ಡಾಲಿಯಾ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಔಟರ್ ರಿಂಗ್ ರಸ್ತೆಯ ಮೂಲಕ ಸಾರಕ್ಕಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಕನಕಪುರ ರಸ್ತೆ ಹಾಗೂ ಬನಶಂಕರಿ ಕಡೆಗೆ ಚಲಿಸಬಹುದು.

ಹೊಸೂರು ರಸ್ತೆಯಿಂದ ಕನಕಪುರ ರಸ್ತೆ, ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಹೊಸೂರು ರಸ್ತೆ ಬೊಮ್ಮಸಂದ್ರ ಜಂಕ್ಷನ್‌ನಿಂದ ಜಿಗಣಿ ರಸ್ತೆ ಮುಖಾಂತರ ಬನ್ನೇರುಘಟ್ಟ ರಸ್ತೆಯಲ್ಲಿ ನೈಸ್ ರಸ್ತೆಯನ್ನು ತಲುಪಿ ಸಂಚರಿಸುವುದು.

ನೈಸ್ ರಸ್ತೆಯಿಂದ ಹೊಸೂರು ಕಡೆಗೆ ಸಂಚರಿಸುವ ವಾಹನಗಳು ಬನ್ನೇರುಘಟ್ಟ ಜಂಕ್ಷನ್‌ನಲ್ಲಿ ಇಳಿದು ಜಿಗಣಿ ರಸ್ತೆ ಮುಖಾಂತರ ಬೊಮ್ಮಸಂದ್ರ ಜಂಕ್ಷನ್ ಹೊಸೂರು ರಸ್ತೆಯನ್ನು ತಲುಪಿ ಸಂಚರಿಸುವುದು.

ಹೊಸೂರು ರಸ್ತೆಯಿಂದ ಸರ್ಜಾಪುರ ರಸ್ತೆ, ವರ್ತೂರು, ವೈಟ್ ಫೀಲ್ಡ್ ಹೊಸಕೋಟೆ ಕಡೆಗೆ ಸಂಚರಿಸುವ ವಾಹನಗಳು ಚಂದಾಪುರ ಜಂಕ್ಷನ್‌ನಿಂದ ದೊಮ್ಮಸಂದ್ರ ರಸ್ತೆ ಮುಖಾಂತರ ಸರ್ಜಾಪುರ ರಸ್ತೆಯನ್ನು ತಲುಪಿ ಸಂಚರಿಸುವುದು.

ಹೆಚ್.ಎಸ್.ಆರ್.ಲೇಔಟ್, ಕೋರಮಂಗಲ, ಬೆಳ್ಳಂದೂರು, ವೈಟ್ ಫೀಲ್ಡ್ ಹಾಗೂ ನಗರದ ಕಡೆಯಿಂದ ಹೊಸೂರು ಕಡೆಗೆ ಸಂಚರಿಸುವ ವಾಹನಗಳು ಸರ್ಜಾಪುರ ರಸ್ತೆ ಮೂಲಕ ಚಂದಾಪುರ ತಲುಪಿ ಹೊಸೂರು ಕಡೆ ಸಂಚರಿಸುವುದು.

ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದಲ್ಲಿ ಸಂಚರಿಸುವ ವಾಹನಗಳು 2ನೇ ಕ್ರಾಸ್ ರಸ್ತೆ, ಶಿಕಾರಿಪಾಳ್ಯರಸ್ತೆ, ಹುಲಿಮಂಗಲ ರಸ್ತೆ, ಗೊಲ್ಲಹಳ್ಳಿ ರಸ್ತೆಗಳಲ್ಲಿ ಸಂಚರಿಸುವುದು.

Share This Article