ರೈತರಿಗೆ ಸಂಬಂಧಪಟ್ಟ ಖಾತೆ ಕೊಟ್ಟರೆ ಅನುಭವ ಇರೋದ್ರಿಂದ ಸ್ವಲ್ಪ ಚೆನ್ನಾಗಿ ಕೆಲಸ ಮಾಡ್ತೀನಿ – ಮಾಧುಸ್ವಾಮಿ

Public TV
2 Min Read

ಬೆಂಗಳೂರು: ಸಿಎಂ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಮಾಧುಸ್ವಾಮಿ ಅವರು ಕಂದಾಯ ಖಾತೆ ಅಥವಾ ಗ್ರಾಮೀಣ ಅಭಿವೃದ್ಧಿ ಖಾತೆಯಲ್ಲಿ ಕೆಲಸ ಮಾಡಲು ನನಗೆ ಆಸೆ ಇದೆ. ನಾನು ಒತ್ತಾಯ ಮಾಡಲ್ಲ, ಯಾವ ಖಾತೆ ಕೊಟ್ಟರೂ ಚೆನ್ನಾಗಿ ಕೆಲಸ ಮಾಡುತ್ತೇನೆ ಎಂದು ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯಾವ ಖಾತೆ ಕೊಟ್ಟರು ಉತ್ತಮ ಕೆಲಸ ಮಾಡುತ್ತೇನೆ. ನಾನು ಹಳ್ಳಿಯಿಂದ ಬಂದವನು, ಹೀಗಾಗಿ ರೈತರಿಗೆ ಸಂಬಂಧಪಟ್ಟ ಖಾತೆ ಕೊಟ್ಟರೆ ಅನುಭವವಿರುವುದರಿಂದ ಸ್ವಲ್ಪ ಚೆನ್ನಾಗಿ ಕೆಲಸ ಮಾಡುತ್ತೆನೆ. ರೈತರಿಗೆ ಸಂಬಂಧಪಟ್ಟ ಖಾತೆಯಲ್ಲಿ ಕೆಲಸ ಮಾಡುವ ಆಸೆ ಇದೆ. ಆದರೆ ಖಾತೆ ಹಂಚಿಕೆ ಮಾಡುವವರು ನಾಯಕರು, ಅವರಿಗೆ ಏನು ಆಸೆ ಇದೆಯೋ ಗೊತ್ತಿಲ್ಲ. ಅವರ ನಿರೀಕ್ಷೆಯನ್ನು ಪೂರ್ತಿಗೊಳಿಸುವುದು ಕೂಡ ನಮ್ಮ ಕರ್ತವ್ಯ ಎಂದರು.

ನಮ್ಮ ಬದುಕಿಗೆ ಹತ್ತಿರವಾದ ಖಾತೆ ಕೊಟ್ಟರೆ ಕೆಲಸ ಮಾಡಲು ಖುಷಿಯಾಗುತ್ತದೆ. ಕಂದಾಯ ಇಲಾಖೆಯಲ್ಲಿ ಬಹಳಷ್ಟು ಕೆಲಸ ಮಾಡುವ ಆಸೆ ಇದೆ. ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ಕೂಡ ದುಡಿಯುವ ಆಸೆ ಇದೆ. ಈ ಖಾತೆಗಳನ್ನು ಕೊಟ್ಟರೆ ಖುಷಿಯಿಂದ ನೋಡಿಕೊಳ್ಳುತ್ತೇನೆ. ಅದನ್ನು ಬಿಟ್ಟು ಕಾನೂನು ಖಾತೆಯನ್ನೇ ನೋಡಿಕೋ ಎಂದರೆ ಅದನ್ನೂ ಕೂಡ ಸಂತೋಷದಿಂದಲೇ ನಿಭಾಯಿಸುತ್ತೇನೆ ಎಂದು ತಮ್ಮ ಆಸೆಯನ್ನು ತಿಳಿಸಿದರು.

ನನಗೆ ಮತ್ತು ಯಡಿಯೂರಪ್ಪ ಅವರಿಗೆ ಬಹಳ ವರ್ಷದಿಂದ ಸ್ನೇಹ, ವಿಶ್ವಾಸ ಇದೆ. ಸಚಿವ ಸ್ಥಾನ ನೀಡಿರುವುದು ಅದಕ್ಕೆ ಸಂದ ಗೌರವ. ಕಳೆದ 20 ವರ್ಷದಿಂದ ನಾವಿಬ್ಬರು ಜೊತೆಯಾಗಿದ್ದೇವೆ. ಹೀಗಾಗಿ ನನ್ನ ಮೇಲೆ ಅವರಿಗೆ ಬಹಳ ವಿಶ್ವಾಸವಿದೆ. ಆದ್ದರಿಂದ ನನಗೆ ಸಚಿವ ಸ್ಥಾನ ಕೊಟ್ಟಿದ್ದಾರೆ ಎಂಬುದು ನನ್ನ ಭಾವನೆ ಎಂದು ಸಿಎಂ ಹಾಗೂ ಸಚಿವ ಸಂಪುಟದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಪ್ತನಿಗೆ ಮಂತ್ರಿಸ್ಥಾನ ಕೊಟ್ಟ ಬಿಎಸ್‍ವೈ – ಮಾಧುಸ್ವಾಮಿಗೆ ಸಚಿವ ಸ್ಥಾನ ಸಿಗಲು ಕಾರಣ ಏನು?

ಖಾತೆ ವಿಸ್ತರಣೆ ಮಾಡೋದು, ಕೊಡುವುದು ನಾಯಕರ ಕೆಲಸ. ಅವರು ಯಾವ ಕೆಲಸ ಕೊಡುತ್ತಾರೋ ಅದನ್ನು ಸಮರ್ಪಕವಾಗಿ ಮಾಡುವುದು ನನ್ನ ಆಕಾಂಕ್ಷೆ ಎಂದರು. ಬಳಿಕ ಹೈಕಮಾಂಡ್ ವಿಚಾರವಾಗಿ ಮಾತನಾಡಿ, ಸಚಿವ ಸಂಪುಟದ ಪಟ್ಟಿ ಮಾಡುವ ಸಮಯದಲ್ಲಿ ಕೊಂಚ ಸಮಸ್ಯೆಯಾಗುತ್ತೆ. ಆದರೆ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿಲ್ಲ. ಎಲ್ಲಾ ರಾಷ್ಟ್ರೀಯ ಪಕ್ಷಗಳಲ್ಲೂ ಸ್ಪಲ್ಪ ಗೊಂದಲ ಇರುತ್ತದೆ. ಇಂದಿರಾ ಗಾಂಧಿ ಕಾಲದಿಂದಲೂ ಇದು ನಡೆಯುತ್ತಿದೆ. ಯಾರಿಗೆ ಸಚಿವ ಸ್ಥಾನ ಕೊಡಬೇಕು, ಹೇಗೆ ಪಕ್ಷವನ್ನು ಬೆಳೆಸಬೇಕು ಎನ್ನುವ ದೃಷ್ಟಿಯಿಂದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಹೀಗಾಗಿ ಸ್ಪಲ್ಪ ತಡವಾಗಿದೆ, ಆದರೆ ಹೈಕಮಾಂಡ್ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿಲ್ಲ, ಕಿರಿಕಿರಿ ಮಾಡುತ್ತಿಲ್ಲ ಎಂದು ಹೇಳಿದರು.

ಕಂದಾಯ ಖಾತೆ ಬಗ್ಗೆ ಮಾತನಾಡಿ, ಮಿಸ್‍ಮ್ಯಾಚ್‍ಗಳು, ತಿದ್ದುಪಡಿಗಳು, ಸಾಮಾಜಿಕ ಭದ್ರತೆಗೆ ಹಣಕಾಸು ಬಿಡುಗಡೆ ಬಾಕಿ, ಪಹಣಿ ಸಮಸ್ಯೆ, ಅಕ್ರಮ, ಬರದ ಹಾವಳಿ, ನೆರೆ ಈ ಎಲ್ಲಾ ಒಳಗೊಂಡ ಖಾತೆಯಿದ್ದರೆ ಕೈತುಂಬ ಕೆಲಸ ಮಾಡಬಹುದು. ಹಿಂದಿನ ಸಚಿವರು ಆ ಖಾತೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಕೆಲವೊಂದು ಅಪೀಲ್‍ಗಳು ಮುಗಿಸಲು 5ರಿಂದ 6 ವರ್ಷಗಳ ಕಾಲ ತೆಗೆದುಕೊಂಡಿದ್ದಾರೆ. ಹಲವು ಅಪೀಲ್‍ಗಳು ಇನ್ನೂ ಬಾಕಿ ಉಳಿದಿದೆ. ಇದನ್ನು ಬಗೆಹರಿಸಲು ಪೂರ್ಣ ಅವಧಿ ಕೆಲಸ ಸಿಕ್ಕರೆ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ. ನಾನು ಸಿಎಂ ಅವರಿಗೆ ಇದೇ ಖಾತೆ ಕೊಡಿ, ಅದೇ ಖಾತೆ ಕೊಡಿ ಎಂದು ಒತ್ತಾಯ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *