ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದ ಯಡಿಯೂರಪ್ಪ

Public TV
3 Min Read

– ಸಂಸದ ಶ್ರೀನಿವಾಸ ಪ್ರಸಾದ್‌ರನ್ನು ಸ್ಮರಿಸಿದ ಹಾಲಿ, ಮಾಜಿ ಸಿಎಂಗಳು

ಮೈಸೂರು: ಸಂಸದ ವಿ.ಶ್ರೀನಿವಾಸ ಪ್ರಸಾದ್ (V.Srinivas Prasad) ಅವರ ಶ್ರದ್ಧಾಂಜಲಿ ಸಭೆಯ ವೇದಿಕೆಯಲ್ಲಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದರು. ಸಮಾರಂಭದಲ್ಲಿ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರೇ ಎಂದು ಬಿ.ಎಸ್.ಯಡಿಯೂರಪ್ಪ (Yediyurappa) ಅವರು ಸಂಬೋಧಿಸಿದರು.

ಸ್ವಾಭಿಮಾನಿಗೆ ಸಾವಿರದ ನುಡಿನಮನ ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಈ ವೇಳೆ ಇಬ್ಬರೂ ಹಿರಿಯ ನಾಯಕರು ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಸಿಎಂ ಸಿದ್ದರಾಮಯ್ಯಗೆ ಯಡಿಯೂರಪ್ಪ ಚೀಟಿ ಕೊಟ್ಟರು. ಜೇಬಿನಿಂದ ಬಿಳಿ ಪೇಪರ್‌ನಲ್ಲಿ ಬರೆದಿದ್ದ ಚೀಟಿಯನ್ನ ಸಿಎಂ ಸಿದ್ದರಾಮಯ್ಯ ನೀಡಿದರು. ನಂತರ ಕೈ ಹಿಡಿದು ಆತ್ಮೀಯವಾಗಿ ಯಡಿಯೂರಪ್ಪನವರ ಜೊತೆ ಕೆಲ ಹೊತ್ತು ಸಿಎಂ ಮಾತನಾಡಿದರು. ಇದನ್ನೂ ಓದಿ: ವಕೀಲ ದೇವರಾಜೇಗೌಡ ಬಂಧನಕ್ಕೆ ಆರ್‌ ಅಶೋಕ್‌ ಖಂಡನೆ

ಈ ವೇಳೆ ಮಾತನಾಡಿದ ಯಡಿಯೂರಪ್ಪ, ಸಿದ್ದರಾಮಯ್ಯರನ್ನು ಜನಪ್ರಿಯ ಮುಖ್ಯಮಂತ್ರಿ ಎಂದು ಸಂಬೋಧಿಸಿದರು. ಮನುಷ್ಯ ಹುಟ್ಟಿದ್ದಾಗ ಉಸಿರು ಇರುತ್ತೆ ಹೆಸರು ಇರಲ್ಲ. ಸತ್ತಾಗ ಉಸಿರು ಇರಲ್ಲ ಹೆಸರು ಇರುತ್ತೆ. ಶ್ರೀನಿವಾಸ ಪ್ರಸಾದ್ ಅವರದು ಸಾರ್ಥಕ ಬದುಕು. ಪ್ರಸಾದ್ ಅವರ ಸಾವು ನನಗೆ ಆಘಾತ ಉಂಟು ಮಾಡಿತ್ತು. ಪ್ರಸಾದ್ ಪಕ್ಷಾಂತರಿ ಆಗಿದ್ದರೂ, ತತ್ವಾಂತರಿ ಆಗಿರಲಿಲ್ಲ. ದಲಿತ ವರ್ಗಕ್ಕೆ ಮಾತ್ರವಲ್ಲ. ಎಲ್ಲಾ ವರ್ಗದ ನಾಯಕರಾಗಿದ್ದರು. ಪ್ರಸಾದ್ ಸಾಮಾಜಿಕ ನ್ಯಾಯದ ಚಾಂಪಿಯನ್ ಆಗಿದ್ದರು ಎಂದು ಸ್ಮರಿಸಿದರು.

ಸಿಎಂ ಸಿದ್ದರಾಮಯ್ಯ ಮಾತನಾಡಿ, ಶ್ರೀನಿವಾಸ ಪ್ರಸಾದ್ ಸ್ವಾಭಿಮಾನಿ, ಸಜ್ಜನ ರಾಜಕಾರಣಿ. ನಾವಿಬ್ಬರು ವಯಸ್ಸಿನಲ್ಲಿ ಹೆಚ್ಚು ಕಡಿಮೆ ಒಂದೇ ಕಾಲದವರು. ನನಗಿಂತಾ ಮುಂಚೆ ಚುನಾವಣಾ ರಾಜಕಾರಣಕ್ಕೆ ಬಂದರು. ಪ್ರಸಾದ್ ಮೊದಲಿಂದ ಕಾಂಗ್ರೆಸ್‌ಗೆ ವಿರುದ್ಧವಾಗಿದ್ದರು. ನಂತರದಲ್ಲಿ ಕೆಲವು ಸ್ನೇಹಿತರ ಸಲಹೆಯಂತೆ ಕಾಂಗ್ರೆಸ್ ಸೇರಿದರು ಅಷ್ಟೆ. ನಾವಿಬ್ಬರು ಪರಸ್ಪರ ಬೇರೆ ಪಕ್ಷದಲ್ಲಿ ಇದ್ದಾಗಲೂ ಇಬ್ಬರ ನಡುವೆ ಒಳ್ಳೆಯ ಸ್ನೇಹವಿತ್ತು. ಮನುಷ್ಯತ್ವದ ಬಗ್ಗೆ ಶ್ರೀನಿವಾಸ ಪ್ರಸಾದ್ ಬಹಳ ಗೌರವ ಇಟ್ಟು ಕೊಂಡಿದ್ದರು. ಮನುಷ್ಯತ್ವ ಧರ್ಮದಿಂದ, ಜಾತಿಯಿಂದ ಬರಲ್ಲ. ರಾಜಕೀಯವಾಗಿ ನಾವು ಟೀಕೆ ಮಾಡ್ತಿದ್ದೆವು. ಆದರೆ ನಮ್ಮ ಅವರ ಸ್ನೇಹಕ್ಕೆ ಯಾವತ್ತೂ ಧಕ್ಕೆ ಬಂದಿರಲಿಲ್ಲ. ನಾನು ಅವರನ್ನು ಭೇಟಿ ಮಾಡೋದೋ ಬೇಡವೋ ಅಂದುಕೊಂಡಿದ್ದೆ. ಮಹಾದೇವಪ್ಪ ಭೇಟಿ ಮಾಡಿ ಅಂದರು. ಅದಕ್ಕೆ ಹೋಗಿ ಭೇಟಿ ಮಾಡಿದೆ. ಅರ್ಧ ಗಂಟೆ ಕಾಲ ಇಬ್ಬರು ಉಭಯ ಕುಶಲೋಪರಿ ಮಾತಾಡಿ ಕೊನೆಗೆ ಕಾಂಗ್ರೆಸ್‌ಗೆ ಬೆಂಬಲ ಕೊಡಿ ಅಂತಾ ಕೇಳಿದ್ದೆ ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡಿರು. ಇದನ್ನೂ ಓದಿ: ವೀಡಿಯೋ ವೈರಲ್ ಮಾಡಿದವರನ್ನು ಟ್ರೇಸ್ ಮಾಡೋದು ಕಷ್ಟ: ಪ್ರಿಯಾಂಕ್ ಖರ್ಗೆ

ನಮ್ಮ ಸ್ನೇಹ ಕೆಟ್ಟು ಹೋಗಿದ್ದರೆ ನಾನು ಭೇಟಿ ಮಾಡಿದ್ದಾಗ ಮುಖ ಕೊಟ್ಟು ಮಾತಾಡ್ತಾ ಇರಲಿಲ್ಲ. ಆದರೆ ಬಹಳ ಪ್ರೀತಿಯಿಂದ ಅವರು ಮಾತಾಡಿದ್ರು. ಕೊನೆಯಲ್ಲಿ ಅವರಿಗೆ ಸ್ವಾಭಿಮಾನಕ್ಕೆ ಧಕ್ಕೆ ಬಂದ ರೀತಿಯಲ್ಲಿ ಮಾತಾಡ್ತಿದ್ದರು. ಶ್ರೀನಿವಾಸ ಪ್ರಸಾದ್‌ಗೆ ಗುಲಾಮಗಿರಿ ಕೀಳರಿಮೆ ಇರಲಿಲ್ಲ. ಒಬ್ಬ ಸಜ್ಜನ, ಮನುಷ್ಯತ್ವ ಜೀವಿ. ಹಳೆ ತಲೆಮಾರಿನ ಕೊಂಡಿ ಕಳಚಿದೆ. ನಾವು ಎಷ್ಟು ವರ್ಷ ಬದುಕಿದ್ದೆವು ಎಂಬುದು ಮುಖ್ಯವಲ್ಲ. ನಾವು ಎಷ್ಟು ಸಾರ್ಥಕವಾಗಿ ಬದುಕಿದ್ದೆವು ಎಂಬುದು ಮುಖ್ಯ. ಶ್ರೀನಿವಾಸ ಪ್ರಸಾದ್ ಅವರದು ಸಾರ್ಥಕ ಬದುಕು ಎಂದರು.

ಶ್ರೀನಿವಾಸ ಪ್ರಸಾದ್ ಪತ್ನಿ ಭಾಗ್ಯಲಕ್ಷ್ಮಿ ಶ್ರೀನಿವಾಸ ಪ್ರಸಾದ್ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ದರ್ಶನ್ ಧ್ರುವನಾರಾಯಣ್, ಹರೀಶ್‌ಗೌಡ, ಟಿ.ಎಸ್.ಶ್ರೀವತ್ಸ, ಡಾ.ತಿಮ್ಮಯ್ಯ, ಮಾಜಿ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಪಿ.ಜಿ.ಆರ್.ಸಿಂಧ್ಯಾ, ಚಿಂತಕ ಡಾ.ದ್ವಾರಕಾನಾಥ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

Share This Article