ಮಂಡ್ಯ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿ – ಹುಟ್ಟೂರಿನಲ್ಲಿ ಪಕ್ಷ ಗೆಲ್ಲಿಸಿ ಜೆಡಿಎಸ್ ಕೋಟೆ ಛಿದ್ರಗೊಳಿಸಿದ ಸಿಎಂ

Public TV
1 Min Read

ಮಂಡ್ಯ: ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಜಯಗಳಿಸಿದ್ದು ಜೆಡಿಎಸ್ ಕೋಟೆಯನ್ನು ಧೂಳೀಪಟ ಮಾಡಿದೆ. ತಮ್ಮ ಅವಧಿಯಲ್ಲಿ ಸಿಎಂ ಯಡಿಯೂರಪ್ಪ ಹುಟ್ಟಿದ ಜಿಲ್ಲೆಯಲ್ಲಿ ಕಮಲವನ್ನು ಅರಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ 9,509 ಮತಗಳಿಂದ ಗೆಲ್ಲುವ ಮೂಲಕ ಮಂಡ್ಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಎಲ್ಲ 7 ಕ್ಷೇತ್ರಗಳನ್ನು ಜೆಡಿಎಸ್ ಗೆದ್ದ ಹಿನ್ನೆಲೆಯಲ್ಲಿ ಈ ಬಾರಿ ಇಲ್ಲಿ ಗೆಲ್ಲುವುದು ಕಷ್ಟ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಎಲ್ಲ ವಿಶ್ಲೇಷಣೆಗಳು ತಲೆಕೆಳಗಾಗಿದ್ದು ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿದೆ.

ಚುನಾವಣಾ ಪ್ರಚಾರ ಭಾಷಣದಲ್ಲಿ ಯಡಿಯೂರಪ್ಪ ನನ್ನ ಹುಟ್ಟೂರಿನಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಕೇಳಿಕೊಂಡಿದ್ದರೆ, ಕುಮಾರಸ್ವಾಮಿ ನಾರಾಯಣ ನನಗೆ ಮೋಸ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದರು. ಆದರೆ ಮತದಾರ ಬಿಎಸ್‍ವೈ ಮನವಿಯನ್ನು ಪುರಸ್ಕರಿಸಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ.

ಮತ ಎಣಿಕೆ ಆರಂಭವಾದ ಮೊದಲ 1 ಗಂಟೆ ಜೆಡಿಎಸ್ ಮುನ್ನಡೆ ಸಾಧಿಸಿತ್ತು. 9 ಗಂಟೆಯ ನಂತರ ಒಂದು ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ ಮತ್ತೊಂದು ಸುತ್ತಿನಲ್ಲಿ ಜೆಡಿಎಸ್ ಮುನ್ನಡೆ ಸಾಧಿಸುತಿತ್ತು. ಆದರೆ ಅಂತಿಮವಾಗಿ ನಾರಾಯಣ ಗೌಡ ಮುನ್ನಡೆ ಸಾಧಿಸುತ್ತಾ ಹೋಗಿ ಜಯಗಳಿಸಿದರು.

ಫಲಿತಾಂಶಕ್ಕೂ ಮುನ್ನ ಯಡಿಯೂರಪ್ಪ ಹುಟ್ಟೂರು ಬೂಕನಕೆರೆಯ ಗೋಗಾಲಮ್ಮ ದೇವಸ್ಥಾನದಲ್ಲಿ ಬೆಂಬಲಿಗರೊಂದಿಗೆ ನಾರಾಯಣಗೌಡ ಪೂಜೆ ಸಲ್ಲಿಸಿದರು. ಇದನ್ನು ಓದಿ: ಅಭಿವೃದ್ಧಿಯೇ ನನ್ನ ಗುರಿ, ತಾಲೂಕಿನ ಕನಸನ್ನು ನನಸು ಮಾಡ್ತೀನಿ: ನಾರಾಯಣ ಗೌಡ

ಮತ ಎಣಿಕೆಯ ಮೊದಲ ಮೂರು ಸುತ್ತಿನಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿತ್ತು. 4ನೇ ಸುತ್ತಿನಲ್ಲಿ ನಾರಾಯಣ ಗೌಡರಿಗೆ ಮನ್ನಡೆ ಸಿಗಲು ಆರಂಭವಾಯಿತು. ಕೊನೆಗೆ 17ನೇ ಸುತ್ತು ಮುಕ್ತಾಯದ ವೇಳೆ ನಾರಾಯಣ ಗೌಡ 9,509 ಮತಗಳ ಅಂತರದಿಂದ ಜಯಗಳಿಸಿದರು. ಬಿಜೆಪಿ 62,265 ಮತಗಳನ್ನು ಪಡೆದರೆ ಜೆಡಿಎಸ್ 52,756 ಮತಗಳನ್ನು ಪಡೆದಿದೆ. ಕಾಂಗ್ರೆಸ್ 37,938 ಮತಗಳನ್ನು ಪಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *