ರಾಜ್ಯದ ಹಲವೆಡೆ ಮಳೆಯ ಸಿಂಚನ – ಬಿಸಿಲಿಗೆ ಬೆಂದಿದ್ದ ಭೂಮಿಗೆ ತಂಪೆರೆದ ವರುಣ

Public TV
2 Min Read

– ಉಡುಪಿಯಲ್ಲಿ ಬೆಳಗಿನ ಜಾವದಿಂದ ಮಳೆ
– ಕರಾವಳಿಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆ
– ಮೈಸೂರಿನಲ್ಲಿ ವರ್ಷದ ಮೊದಲ ಮಳೆ

ಬೆಂಗಳೂರು: ಭಾನುವಾರ ರಾತ್ರಿ ಹಾಗೂ ಇಂದು ಮುಂಜಾನೆ ರಾಜ್ಯದ ಹಲವೆಡೆ ಮಳೆಯ ಸಿಂಚನವಾಗಿದೆ. ದಾವಣಗೆರೆ, ಉಡುಪಿ, ಮಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಸುರಿದ ಮಳೆ ಜನರ ಮೊಗದಲ್ಲಿ ಸಂತಸ ಮೂಡಿಸಿದೆ.

ಕರಾವಳಿ ಜಿಲ್ಲೆ ಉಡುಪಿಯಲ್ಲಿ ವಾಡಿಕೆಯಂತೆ ಜೂನ್‍ನಲ್ಲಿ ಮಳೆಯಾಗುತ್ತದೆ. ಆದರೆ ಇದೀಗ ಅಕಾಲಿಕ ಮಳೆಯಾಗಿದ್ದು, ಮಾರ್ಚ್‍ನಲ್ಲೇ ವರ್ಷಧಾರೆ ಭೂಮಿಗೆ ಇಳಿದಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ರಣಬಿಸಿಲಿತ್ತು. ಹೀಗಾಗಿ ಭೂಮಿ ಕಾದು ಮೋಡ ನೀರಾಗಿದೆ. ಉಡುಪಿ ಜಿಲ್ಲೆಯ ಅಲ್ಲಲ್ಲಿ ಮಳೆರಾಯ ತಂಪೆರೆದಿದ್ದಾನೆ.

ತಡರಾತ್ರಿ ಕೆಲವೆಡೆ ದಿಢೀರ್ ಮಳೆಯಾಗಿದ್ದು, ಮುಂಜಾನೆ ಕೂಡ ಮಳೆ ಮುಂದುವರಿದಿದೆ. ಬೆಳಗಿನ ಜಾವದಿಂದಲೂ ನಗರಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ. ದಿಢೀರ್ ಮಳೆ ಹೆದ್ದಾರಿ ಕೆಸರುಮಯವಾಗಿದ್ದು, ಹೊಸದಾಗಿ ನಿರ್ಮಾಣವಾದ ರಸ್ತೆಯ ಮಣ್ಣೆಲ್ಲ ಕೊಚ್ಚಿ ಹೋಗಿದೆ. ಸದ್ಯ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಮಳೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಕುಂದಾಪುರ, ಕಾರ್ಕಳ, ಬೈಂದೂರು ವ್ಯಾಪ್ತಿಯ ಅಲ್ಲಲ್ಲಿ ಮಳೆಯಾಗಿದ್ದು, ನಗರವಾಸಿಗಳಿಗೆ ಮಳೆ ಖುಷಿಕೊಟ್ಟರೆ ಕೃಷಿಕರು, ಬೇಸಾಯಗಾರರಿಗೆ ಈ ಮಳೆ ಆತಂಕ ಮೂಡಿಸಿದೆ.

ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಕೂಡ ಅಕಾಲಿಕ ಮಳೆಯಾಗಿದೆ. ಮುಂಜಾನೆ 4 ಗಂಟೆಯಿಂದ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಬೆಳ್ತಂಗಡಿ, ಕಡಬ, ಪುತ್ತೂರು ತಾಲೂಕು ಸೇರಿದಂತೆ ಮಂಗಳೂರಿನ ಹಲವೆಡೆ ವರುಣ ಮಳೆ ಸುರಿಸಿದ್ದಾನೆ. ಕಡಬ ತಾಲೂಕಿನ ರಾಮಕುಂಜ, ನೆಲ್ಯಾಡಿ, ಸವಣೂರು ಭಾಗದಲ್ಲಿ ಬಿರುಸಿನ ಮಳೆಯಾಗಿದ್ದು, ಮಂಗಳೂರು ನಗರ ಭಾಗದಲ್ಲಿ ತುಂತುರು ಮಳೆಯಾಗಿದೆ. ಇದರಿಂದ ಬಿಸಿಲಿನ ತಾಪಕ್ಕೆ ಬೆಂದಿದ್ದ ಇಳೆ ತಂಪಾಗಿದೆ.

ಇತ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ವರುಣನ ಸಿಂಚನವಾಗಿದೆ. ಈ ವರ್ಷದ ಮೊದಲ ಮಳೆಗೆ ಇಳೆ ತಂಪಾಗಿದೆ. ಇದರಿಂದ ಅತಿಯಾದ ಧಗೆಯಿಂದ ಬಸವಳಿದಿದ್ದ ಜನರಿಗೆ ತಣ್ಣನೆಯ ಹಿತಾನುಭವವಾಗಿದೆ. ಇಂದು ಮುಂಜಾನೆ ಸುರಿದ ಮಳೆ ನಗರವಾಸಿಗಳ ಮೊಗದಲ್ಲಿ ಸಂತಸ ಮೂಡಿಸಿದೆ.

ದಾವಣಗೆರೆ ಜಿಲ್ಲೆಯಲ್ಲಿಯೂ ವರ್ಷದ ಮೊದಲ ಮಳೆಯಾಗಿದ್ದು, ಸುಮಾರು 1 ಗಂಟೆಗೂ ಹೆಚ್ಚು ಕಾಲ ಸಾಧಾರಣ ಮಳೆ ಸುರಿದಿದೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ಸೇರಿದಂತೆ ಹಲವೆಡೆ ವರುಣನ ಅಗಮನವಾಗಿದೆ. ಕಳೆದ 3 ತಿಂಗಳಿಂದ ಮಳೆ ವಿಶ್ರಾಂತಿ ನೀಡಿತ್ತು, ಆದರೆ ಈ ಸುರಿದ ವರ್ಷದ ಮೊದಲ ಮಳೆ ಜಿಲ್ಲೆಯ ಜನರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕೆಲ ಭಾಗದಲ್ಲಿ ಜಮೀನುಗಳಲ್ಲಿ ಬೆಳೆಗಳ ಕಟಾವು ಮಾಡಲಾಗಿದ್ದು, ಎಲ್ಲಿ ಮಳೆ ಹೆಚ್ಚು ಸುರಿದು ಬೆಳೆ ಹಾಳಾಗುತ್ತದೋ ಎಂದು ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಸಾಧಾರಣ ಮಳೆಯಾದ ಕಾರಣ ರೈತರು ನಿಟ್ಟುಸಿರು ಬಿಟ್ಟಿದ್ದು, ಬಿಸಿಲ ತಾಪಕ್ಕೆ ಬೇಸತ್ತ ಜನರಿಗೆ ತಂಪಾದಂತಾಗಿದೆ. ಮಳೆಯಿಂದ ವಾತಾವರಣ ಕೂಡ ತಂಪಾಗಿದ್ದು, ಬೇಸಿಗೆ ಬಿಸಿಲಿಗೆ ಹೈರಾಣಾಗಿದ್ದ ಜನರಿಗೆ ಸಂತಸವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *