ಕುವೆಂಪು ಮನೆಗೆ ವಾರ್ಷಿಕ 1.5 ಲಕ್ಷ ಜನ ಭೇಟಿ: ಆದಿಚುಂಚನಗಿರಿ ವಿವಿ ಕುಲಸಚಿವ

Public TV
2 Min Read

ಚಿಕ್ಕಮಗಳೂರು: ರಾಷ್ಟ್ರಕವಿ ಕುವೆಂಪು ಅವರು 20ನೇ ಶತಮಾನ ಕಂಡ ಶ್ರೇಷ್ಠ ಕವಿ. ಅವರ ಮನೆಗೆ ವರ್ಷಕ್ಕೆ 1.5 ಲಕ್ಷ ಜನ ಭೇಟಿ ನೀಡುತ್ತಾರೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ್ ಹೇಳಿದ್ದಾರೆ.

ನಗರದ ಕುವೆಂಪು ಕಲಾ ಮಂದಿರದಲ್ಲಿ ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನ, ಶಿವಮೊಗ್ಗದ ಸಹ್ಯಾದ್ರಿ ರಂಗತರಂಗ ಹಾಗೂ ಕುವೆಂಪು ನಾಟಕೋತ್ಸವ ಸಮಿತಿ ಹಮ್ಮಿಕೊಂಡಿರುವ 3 ದಿನಗಳ ಕಾಲದ ಕುವೆಂಪು ನಾಟಕೋತ್ಸವಕ್ಕೆ ಡಾ.ಸಿ.ಕೆ.ಸುಬ್ಬರಾಯ್ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕುವೆಂಪು ವಿಶೇಷವಾದ ಕವಿ, ಕಾದಂಬರಿಕಾರ, ಅವರ ಪಾಂಡಿತ್ಯವನ್ನು ಗಮನಿಸಿದರೆ ಅವರಿಗೆ ಭಗವಂತನ ಪ್ರೇರಣೆಯಾಗಿದೆ ಎಂದನಿಸುತ್ತದೆ. ಎಲ್ಲರೂ ಅವರ ವಿಶ್ವಮಾನವ ಸಂದೇಶವನ್ನು ಮೈಗೂಡಿಸಿಕೊಂಡರೆ ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸುತ್ತದೆ ಎಂದರು.

ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ, ಲೇಖಕಿ ರಾಜೇಶ್ವರಿ ತೇಜಸ್ವಿ ಮಾತನಾಡಿ, ಕುವೆಂಪು ಅವರ ಬರವಣಿಗೆಯಲ್ಲಿ ತತ್ವಾದರ್ಶಗಳಿವೆ. ಅವರ ವಿಶ್ವಮಾನವ ಸಂದೇಶ ಜನರ ಹೃದಯಲ್ಲಿ ನಿತ್ಯವೂ ಮಂತ್ರವಾಗಬೇಕು, ಧ್ಯೇಯೋಕ್ತಿಯಾಗಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಕುವೆಂಪು ಅವರ ಮನೆಗೆ ವರ್ಷಕ್ಕೆ 1.5 ಲಕ್ಷ ಜನ ಭೇಟಿ ನೀಡುತ್ತಾರೆ. ಈಗ ಅದು ಸಾಂಸ್ಕೃತಿ ಕೇಂದ್ರವಾಗಿ ಬೆಳೆದಿದೆ ಎಂದು ಹೇಳಿದರು. ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿಯನ್ನ 5 ಲಕ್ಷ ರೂ. ನಗದಿನೊಂದಿಗೆ ನೀಡುತ್ತಿದ್ದು, ಈ ವರ್ಷ ಪಂಜಾಬ್‍ನ ಇಬ್ಬರು ಕವಿಗಳು ಪಡೆಯಲಿದ್ದಾರೆ. ಬೆಂಗಳೂರಿನ ಬಿಎಂಟಿಸಿ ಸಂಸ್ಥೆ ಪ್ರತಿಷ್ಠಾನಕ್ಕೆ 25 ಲಕ್ಷ ರೂ ನೀಡಿದ್ದು, ಅದರ ಬಡ್ಡಿ ಹಣದಲ್ಲಿ ಕುವೆಂಪು ನಾಟಕೋತ್ಸವ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕುಟುಂಬಸ್ಥರು ಪಾಲ್ಗೊಂಡಿದ್ದರು. ಸಮಾರಂಭದ ಬಳಿಕ ಮೈಸೂರಿನ ರಂಗಾಯಣ ಕಲಾವಿದರಿಂದ ಕುವೆಂಪು ವಿರಚಿತ ಶೂದ್ರ ತಪಸ್ವಿ ನಾಟಕ ಪ್ರದರ್ಶನ ಕಂಡಿತು. ಕುವೆಂಪು ನಾಟಕೋತ್ಸವ ಸಮಿತಿಯ ಅಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂದೂರು ಅಶೋಕ್, ನಾಟಕ ಅಕಾಡಮಿ ಸದಸ್ಯ ನಾಗರಾಜರಾವ್ ಕಲ್ಕಟ್ಟೆ, ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್, ಸಹ್ಯಾದ್ರಿ ರಂಗತರಂಗದ ಗೌರವಾಧ್ಯಕ್ಷ ಕ್ರಾಂತೇಶ ಕದರ ಮಂಡಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *