250 ವರ್ಷಗಳ ಬಳಿಕ ಕೃಷ್ಣನೂರಲ್ಲಿ ಐತಿಹಾಸಿಕ ಕ್ಷಣ: ಕುಕ್ಕೆ, ಕೃಷ್ಣಮಠದ ಯತಿಗಳ ಸಮಾಗಮ

Public TV
1 Min Read

ಉಡುಪಿ : ಕುಕ್ಕೆ ಸುಬ್ರಹ್ಮಣ್ಯ ಮಠ ಮತ್ತು ಉಡುಪಿಯ ಸೋದೆ ವಾದಿರಾಜ ಮಠದ ಯತಿಗಳು 250 ವರ್ಷಗಳ ನಂತರ ಮುಖಾಮುಖಿಯಾಗಿದ್ದಾರೆ.

ಸಮಾಗಮ ಸಂದರ್ಭದಲ್ಲಿ ಮಾತನಾಡಿದ ಸೋದೆ ಸುಬ್ರಹ್ಮಣ್ಯ ಶ್ರೀಗಳು, ದೇವರ- ಗುರುಗಳ ಪ್ರೇರಣೆಯಾಯ್ತು. ಎರಡು ಮಠಗಳು ಮತ್ತೆ ಒಂದಾಗಿದೆ. ಸಮಾಜದಲ್ಲಿ ಎಲ್ಲರೂ ಸಾಮರಸ್ಯದಿಂದ ಇರಬೇಕು. ಎಲ್ಲಾ ಮಠಾಧೀಶರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. 250 ವರ್ಷಗಳಿಂದ ಮನಸ್ತಾಪ ಇತ್ತು. ನಮ್ಮಿಬ್ಬರಿಗೂ ಒಂದಾಗಬೇಕೆಂದು ಇಚ್ಛೆ ಇತ್ತು. ಈಗ ಎಲ್ಲದಕ್ಕೂ ಕಾಲ ಕೂಡಿ ಬಂತು ದೇವರ-ಗುರುಗಳ ಪ್ರೇರಣೆಯಿಂದ ಇದು ಸಾಧ್ಯವಾಯ್ತು ಅಂದ್ರು. ನಾಳೆ ಶಿರಸಿಯ ಸೋದೆಯಲ್ಲಿ ಪುರಪ್ರವೇಶವಿದೆ. 31ಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ದಾಟುತ್ತೇವೆ ಅಂತ ತಿಳಿಸಿದ್ರು.

ಈ ಬಗ್ಗೆ ಪೇಜಾವರ ಶ್ರೀ ಹೇಳಿಕೆ ನೀಡಿದ್ದು, ಇದೊಂದು ಐತಿಹಾಸಿಕ ದಿನ. ಉಡುಪಿಯಲ್ಲಿ ಸ್ವಾಮೀಜಿಗಳು ಕೋಪ ಮರೆತಿದ್ದಾರೆ. ಶತಮಾನದಿಂದ ಸೌಹಾರ್ದತೆ ಆಗಬೇಕೆಂದು ಎಲ್ಲರ ಅಪೇಕ್ಷೆಯಾಗಿತ್ತು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಇಬ್ಬರು ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ಮಠಾಧೀಶರಲ್ಲಿ ಬಾಂಧ್ಯವ್ಯ ಬೆಳೆಯಬೇಕು. ಸ್ವಾಮೀಜಿಗಳು ಒಂದಾದರೆ ಜನರು ಒಂದಾಗುತ್ತಾರೆ ಅಂತ ಹೇಳಿದ್ರು.

ಮುನಿಸಿಗೆ ಕಾರಣವೇನು?:  ಈ ಎರಡು ಮಠಗಳ ಸ್ವಾಮೀಜಿಗಳು ಮಾತು ಬಿಟ್ಟು- ಮುಖಾಮುಖಿಯಾಗದೆ ಸರಿಸುಮಾರು 250 ವರ್ಷಗಳೇ ಕಳೆದಿವೆ. 18ನೇ ಶತಮಾನದ ಕಥೆಯಿದು. ಉಡುಪಿಯ ಉಂಡಾರು ಗ್ರಾಮದ ಸೋದರರು ಸುಬ್ರಹ್ಮಣ್ಯ ಮತ್ತು ಸೋದೆ ಮಠದ ಪೀಠಾಧಿಪತಿಗಳಾದರು. ಸೋದೆ ಮಠದಲ್ಲಿ ವಿಶ್ವನಿಧಿತೀರ್ಥರು ದೀಕ್ಷೆ ಪಡೆದರು. ಅವರ ತಮ್ಮ ವಿಶ್ವಾಧೀಶ್ವರ ತೀರ್ಥರು ಕುಕ್ಕೆಗೆ ಶ್ರೀಗಳಾದರು. ಒಂದು ಬಾರಿ ಕುಕ್ಕೆ ಮಠದ ಪೂಜೆಗೆ ಸೋದೆ ಶ್ರೀಗಳನ್ನು ಆಹ್ವಾನಿಸಲಾಯ್ತು. ಆದ್ರೆ ವಾಹನದ ವ್ಯವಸ್ಥೆಗಳು ಇಲ್ಲದಿರುವುದರಿಂದ ಪೂಜೆಯ ಘಳಿಗೆಗೆ ಸೋದೆ ಶ್ರೀಗಳು ತಲುಪಲಾಗಿಲ್ಲ.

ಕೋಪಗೊಂಡ ಕುಕ್ಕೆಶ್ರೀಗಳು ಕಾಯದೆ ಪೂಜೆ ಆರಂಭಿಸಿ ಮುಗಿಸಿಯೇ ಬಿಟ್ಟರು. ಸೋದೆಶ್ರೀಗಳು ಇದನ್ನು ಅವಮಾನವೆಂದು ಪರಿಗಣಿಸಿ ಮತ್ತೆಂದೂ ಬರುವುದಿಲ್ಲ. ಇಂದಿನಿಂದ ಮಾತುಕತೆಯಿಲ್ಲ ಎಂದು ಹೇಳಿ ವಾಪಾಸ್ಸಾದರು. ಅಂದಿನಿಂದ ಇಂದಿನ ತನಕವೂ ಎರಡು ಮಠಗಳ ಪರಂಪರೆಯಲ್ಲಿ ಬಂದ ಯತಿಗಳು ಒಬ್ಬರೊಬ್ಬರ ಮುಖ ನೋಡಿಕೊಂಡಿಲ್ಲ. ಎಲ್ಲೂ ಭೇಟಿಯಾಗಿಲ್ಲ. ಸೋದೆ ಶ್ರೀಗಳು ಕುಮಾರಧಾರಾ ನದಿಯನ್ನು ದಾಟಿ ಸುಬ್ರಹ್ಮಣ್ಯ ಊರಿಗೂ ಹೋಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *