ತ್ರಾಟಕ – ಅಬ್ಬರಿಸಿ ಬೊಬ್ಬಿರಿದ ಖಳನ ಕೈಲೀಗ ಸ್ಟೆಥಸ್ಕೋಪ್!

Public TV
1 Min Read

ಬೆಂಗಳೂರು: ನಿರೀಕ್ಷೆಗಳ ಒಡ್ಡೋಲಗದಲ್ಲಿ ರಾಹುಲ್ ಐನಾಪುರ ನಾಯಕನಾಗಿ ನಟಿಸಿರೋ ತ್ರಾಟಕ ಚಿತ್ರ ತೆರೆ ಕಾಣುವ ಸನ್ನಾಹದಲ್ಲಿದೆ. ಈ ವಾರ ಪ್ರೇಕ್ಷಕರ ಮುಂದೆ ಬರಲಿರೋ ಈ ಚಿತ್ರದಲ್ಲಿ ಯುವ ಖಳನಟ ಯಶವಂತ್ ಶೆಟ್ಟಿ ಕೂಡಾ ಪ್ರಧಾನವಾದ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.

ಜ್ವಲಂತಂ ಚಿತ್ರದ ಮೂಲಕ ಖಳ ನಟನಾಗಿ ಎಂಟ್ರಿ ಕೊಟ್ಟಿರೋ ಯಶವಂತ್ ಭರವಸೆ ಹುಟ್ಟಿಸಿರುವ ನಟ. ಇತ್ತೀಚೆಗೆ ತೆರೆ ಕಂಡಿದ್ದ ಅಥರ್ವ ಚಿತ್ರದ ಅಬ್ಬರದ ನಟನೆಯ ಮೂಲಕವೇ ಗುರುತಿಸಿಕೊಂಡಿರೋ ಯಶವಂತ್ ತ್ರಾಟಕ ಚಿತ್ರದಲ್ಲಿಯೂ ವಿಲನ್ ಆಗಿ ಆರ್ಭಟಿಸಿದ್ದಾರೆ ಅಂದುಕೊಳ್ಳೋದು ಸಹಜ. ಆದರೆ ತ್ರಾಟಕ ಚಿತ್ರದಲ್ಲಿ ಅವರ ಪಾತ್ರ ಪಕ್ಕಾ ಡಿಫರೆಂಟಾಗಿದೆ.

ಈ ಚಿತ್ರದಲ್ಲಿ ಯಶವಂತ್ ಡಾಕ್ಟರ್ ಆಗಿ ನಟಿಸಿದ್ದಾರಂತೆ. ಅದು ಇಡೀ ಕಥೆಗೆ ಟ್ವಿಸ್ಟು ಕೊಡುವಂಥಾ ಮುಖ್ಯವಾದ ಪಾತ್ರ. ಡಾಕ್ಟರ್ ಅಂದ ಮೇಲೆ ಆ ಪಾತ್ರಕ್ಕೆ ಮೃದುವಾದ, ಬೇರೆಯದ್ದೇ ಥರದ ಮ್ಯಾನರಿಸಂ ಇರುತ್ತೆ. ಯಾವ ಅಬ್ಬರವೂ ಇಲ್ಲದ ಈ ಪಾತ್ರ ತೆಳುವಾದ ನೆಗೆಟಿವ್ ಛಾಯೆಯಾಚೆಗೆ ವಿಶಿಷ್ಟವಾಗಿ ಮೂಡಿ ಬಂದಿದೆಯಂತೆ. ಇದೀಗ ರಗಡ್ ಪಾತ್ರಗಳಲ್ಲಿಯೇ ಬ್ಯುಸಿಯಾಗಿದ್ದುಕೊಂಡು, ಅಂಥಾ ಪಾತ್ರಗಳನ್ನೇ ಗಿಟ್ಟಿಸಿಕೊಳ್ಳುತ್ತಿರೋ ಯಶವಂತ್ ತ್ರಾಟಕ ಚಿತ್ರದ ಮೂಲಕ ಬೇರೆಯದ್ದೇ ಲುಕ್ಕಿನಲ್ಲಿ ಪ್ರೇಕ್ಷಕರಿಗೆ ಅಚ್ಚರಿಯಂತೆದುರಾಗಲು ತಯಾರಾಗಿದ್ದಾರೆ.

ಪ್ರತಿಷ್ಟಿತ ನಟನಾ ತರಬೇತಿ ಸಂಸ್ಥೆಗಳಲ್ಲಿ ಪಳಗಿಕೊಂಡು ಬಂದಿರೋ ಯಶವಂತ್ ಶೆಟ್ಟಿ ಸದಾ ಹೊಸತನ ಬಯಸೋ ಯುವ ನಟ. ತ್ರಾಟಕ ಚಿತ್ರದಲ್ಲಿನ ಡಾಕ್ಟರ್ ಪಾತ್ರವನ್ನವರು ಅತೀವವಾಗಿ ಇಷ್ಟಪಟ್ಟು ಮಾಡಿದ್ದಾರಂತೆ. ಈ ಚಿತ್ರವೂ ಅದ್ಭುತವಾಗಿ ಮೂಡಿ ಬಂದಿರೋದರಿಂದ ದೊಡ್ಡ ಗೆಲುವು ಸಿಕ್ಕಿ ತನ್ನ ಪಾತ್ರವೂ ಜನರ ಮನಸಲ್ಲುಳಿಯುತ್ತದೆ ಎಂಬ ಭರವಸೆಯನ್ನೂ ಯಶವಂತ್ ಹೊಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *