ಚುನಾವಣೆಯಲ್ಲಿ ಪ್ರಚಾರ ಮಾಡಲು ಅಭ್ಯರ್ಥಿಗಳಿಗೆ ಷರತ್ತು ವಿಧಿಸಿದ ರಾಕಿಂಗ್ ಸ್ಟಾರ್

Public TV
2 Min Read

ಬೆಂಗಳೂರು: ಮರ ಮತ್ತು ಕೆರೆಯನ್ನು ಯಾರು ಅಭಿವೃದ್ಧಿ ಮಾಡುತ್ತಾರೋ ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

ಫೇಸ್‍ಬುಕ್ ಲೈವ್ ನಲ್ಲಿ ಅಭಿಮಾನಿಗಳ ಜೊತೆ ಮಾತನಾಡುವ ವೇಳೆ ಅಭಿಮಾನಿಯೊಬ್ಬರು ನೀವು ರಾಜಕೀಯಕ್ಕೆ ಬರುತ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ, ಬೆಂಗಳೂರು ನಗರದಲ್ಲಿ ಈಗ 5 ಲಕ್ಷ ಗಿಡ ನೆಡಬೇಕಾಗಿದೆ. ಇದಕ್ಕೆ ಪ್ರೋತ್ಸಾಹ ನೀಡುವ ಅಭ್ಯರ್ಥಿಗಳಿಗೆ ನಾನು ಬೆಂಬಲ ನೀಡುತ್ತೇನೆ. ಬೆಂಗಳೂರು ಅಷ್ಟೇ ಅಲ್ಲದೇ ಬೇರೆ ಯಾವುದೇ ಕ್ಷೇತ್ರದಲ್ಲಾದರೂ ಸರಿ ಮರಗಳನ್ನು ನೆಡುವ ಅಭ್ಯರ್ಥಿಗಳಿಗೆ ನಾನು ಬೆಂಬಲ ನೀಡುತ್ತೇನೆ ಎಂದು ಉತ್ತರಿಸಿದರು.

ಯಾವುದೇ ಪಕ್ಷದ ಬಗ್ಗೆ ನನಗೆ ಸ್ಪಷ್ಟನೆ ಸಿಗುತ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ನನ್ನ ಸ್ನೇಹಿತರು ರಾಜಕೀಯಲ್ಲಿ ತೊಡಗಿದ್ದಾರೆ, ಶಾಸಕರಾಗಿದ್ದಾರೆ. ಕೆಲವು ಗೆಳೆಯರು ಪ್ರಚಾರಕ್ಕೆ ಬರುವಂತೆ ಕೇಳುತ್ತಿದ್ದಾರೆ. ಆಗ ಅವರಿಗೆ ನಾನು ಪ್ರಚಾರಕ್ಕೆ ಬರುತ್ತೇನೆ. ಆದರೆ, ನೀನು ಕೆಲಸ ಮಾಡದಿದ್ದರೆ ಜನರು ನನ್ನ ಕೇಳುತ್ತಾರೆ. ನಾನು ಏನು ಉತ್ತರ ಕೊಡಬೇಕು. ಆಗ ನಾನೇ ನಿಮಗೆ ವಿರುದ್ಧವಾಗಿ ನಿಲ್ಲುತ್ತೇನೆ. ಅದಕ್ಕೆ ನಾವು ಗೆಳೆಯರಾಗಿಯೇ ಇರುವುದು ಒಳ್ಳೆಯದು ಎಂದು ತಿಳಿಸುವುದಾಗಿ ಅವರು ಹೇಳಿದ್ದಾರೆ. ಇದನ್ನೂ ಓದಿ:ನಾನು ಯಾವುದೇ ಬಾಡಿಗೆ ಹಣ ಇಟ್ಟುಕೊಂಡಿಲ್ಲ: ಅಭಿಮಾನಿಗಳ ಪ್ರಶ್ನೆಗಳಿಗೆ ಯಶ್ ಸ್ಪಷ್ಟನೆ

ನನಗೆ ರಾಜಕೀಯಕ್ಕೆ ಬರುವ ಆಸೆ ಇಲ್ಲ. ಒಂದು ವೇಳೆ ಬರುವುದಾದರೆ ತಿಳಿಸುತ್ತೇನೆ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಒಂದೊಂದು ರೀತಿಯ ಸಮಸ್ಯೆಗಳಿರುತ್ತವೆ. ಅಲ್ಲಿನ ಪ್ರತಿನಿಧಿಗಳು ಆ ವಿಷಯವನ್ನು ಬಗೆಹರಿಸಲು ಹೋರಾಡಬೇಕು. ನಾನು ಭ್ರಮೆಯಲ್ಲಿ ಬದುಕುತ್ತಿಲ್ಲ. ಇಂದು ಮಾಧ್ಯಮಗಳಲ್ಲಿ ಟಿಕೆಟ್ ಸಿಗದ ಆಕಾಂಕ್ಷಿಗಳ ಬೆಂಬಲಿಗರ ವರ್ತನೆ ಹಾಗೂ ಬಂಡಾಯಗಳ ವೇಳೆ ಅವರ ವರ್ತನೆ ಹೇಗೆ ಇರುತ್ತದೆ ಎಂದು ನಾನು ನೋಡಿದೆ. ಇಲ್ಲಿ ಯಾರ ವಿರುದ್ಧ ಕಳಂಕ, ತಕರಾರುಗಳಿಲ್ಲ? ಯಾರು ಸರಿಯಾಗಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಇತ್ತೀಚೆಗೆ ಒಬ್ಬರು ತಮ್ಮ ಕ್ಷೇತ್ರದಲ್ಲಿ ಹತ್ತು ಕೆರೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಾನು ಅವರಿಗೆ ಬೆಂಬಲ ನೀಡುತ್ತೇನೆ. ನಾಲ್ಕು ಜನಕ್ಕೆ ಒಳ್ಳೆಯದು ಆಗುವುದಾದರೆ ನಾನು ಕೆಟ್ಟವನಾಗುವುದಕ್ಕೂ ಸಿದ್ಧ. ಯಾರಿಗೂ ಒಳ್ಳೆಯದನ್ನು ಮಾಡದೇ ಒಳ್ಳೆಯವನು ಅಂಥ ಅನಿಸಿಕೊಂಡು ಬದುಕುವುದು ಸರಿಯಲ್ಲ. ನಾನು ಏನು ಇಲ್ಲದೇ ಬಂದವನು. ಈಗ ಎಲ್ಲವೂ ಸಿಕ್ಕಿದೆ. ಇದನ್ನು ಕೊಟ್ಟಿದ್ದು ಜನ. ಈ ಜನ್ಮದಲ್ಲಿ ಜನರಿಗೆ ಉಪಯೋಗವಾಗುವಂತಹ ಕೆಲಸ ಮಾಡುತ್ತೇನೆ. ನನ್ನ ಮೇಲೆ ನೀವು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಯಾವುದೇ ಕೆಲಸ ಮಾಡುವ ವೇಳೆ ಸರ್ಕಾರ ಬೇಕಾಗುತ್ತದೆ. ಸರ್ಕಾರದ ಬೆಂಬಲ ಇಲ್ಲದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಆದರೆ, ಸರ್ಕಾರದ ಕೆಲಸವನ್ನು ಹೇಗೆ ಮಾಡಿಸಬೇಕು. ನಾನು ರಾಜಕಾರಣಕ್ಕೆ ಬರಬೇಕಾ, ಅದು ಆಗಲ್ಲ. ನಮ್ಮ ಮಾತನ್ನು ಕೇಳುವ ನಾಲ್ಕು ಜನ ರಾಜಕಾರಣಿಗಳು ಸಿಕ್ಕರೆ ಅವರ ಮೂಲಕ ಕೆಲಸ ಮಾಡಿಸಬಹುದು ಎಂದು ಅವರು ವಿವರಿಸಿದ್ದಾರೆ.

 

https://www.facebook.com/TheOfficialYash/videos/2291921764368555/

Share This Article
Leave a Comment

Leave a Reply

Your email address will not be published. Required fields are marked *