ಚಿರನಿದ್ರೆಗೆ ಜಾರಿದ ಚಿಟ್ಟಾಣಿ ರಾಮಚಂದ್ರ ಹೆಗಡೆ

Public TV
1 Min Read

ಉಡುಪಿ: ಯಕ್ಷಗಾನ ಕ್ಷೇತ್ರದ ಮೇರು ಕಲಾವಿದ ಪದ್ಮಶ್ರೀ ಪುರಸ್ಕತ ಚಿಟ್ಟಾಣಿ ರಾಮಚಂದ್ರ ಹೆಗಡೆ ವಿಧಿವಶರಾಗಿದ್ದಾರೆ. ನ್ಯೂಮೋನಿಯಾ ಹಾಗೂ ಪಾರ್ಶ್ವ ವಾಯುವಿನಿಂದ ಬಳಲುತ್ತಿದ್ದ ಅವರು ಮಣಿಪಾಲ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನವರಾತ್ರಿ ಅಂಗವಾಗಿ ಬಂಗಾರಮಕ್ಕಿಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಚಿಟ್ಟಾಣಿ ಪಾತ್ರ ನಿರ್ವಹಿಸಿದ್ದರು. ಸೆ.25ರಂದು ವಸುವರಾಂಗಿ ಪ್ರಸಂಗದಲ್ಲಿ ಭೀಷ್ಮನ ತಂದೆ ಶಂತನು ಪಾತ್ರ ನಿರ್ವಹಿಸಿದ್ದರು. ಕಳೆದ ಮೂರು ವರ್ಷಗಳಿಂದ ಕೆಲ ಪಾತ್ರವನ್ನು ಅವರು ಅರ್ಧವಷ್ಟೇ ಮಾಡುತ್ತಿದ್ದು, ಬಳಿಕ ಬೇರೆ ಬೇರೆ ಕಲಾವಿದರು ಮುಂದುವರಿಸುತ್ತಿದ್ದರು.

ಆದರೆ ಸೆ.25ರಂದು ಶಂತನು ಪಾತ್ರವನ್ನು ಅವರೊಬ್ಬರೇ ಮಾಡಿದ್ದರು. ಬಳಿಕ ಆರೋಗ್ಯ ಕೈಕೊಟ್ಟಿದ್ದು, ಸುಧಾರಿಸಿಕೊಳ್ಳಲಿಲ್ಲ. ಅವರಿಗೆ ಮೊದಲು ಹೊನ್ನಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಸೆ.29ರಂದು ಬೆಳಗ್ಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 7 ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಚಿಟ್ಟಾಣಿ ಅವರ ಇಬ್ಬರೂ ಮಕ್ಕಳು ಹಾಗೂ ಮೊಮ್ಮಗ ಕೂಡಾ ಯಕ್ಷಗಾನ ಕ್ಷೇತ್ರದಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ.

ನೇತ್ರದಾನ: ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿಯವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಕುಟುಂಬದ ಸದಸ್ಯರ ಬಳಿ ಅವರು ನೇತ್ರದಾನ ಮಾಡಲು ಹೇಳಿಕೊಂಡಿದ್ದರು. ಚಿಟ್ಟಾಣಿಯವರು ಯಕ್ಷಗಾನಕ್ಕೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ತಂದುಕೊಟ್ಟವರು. ಡಾ.ರಾಜ್ ಕುಮಾರ್ ಅವರಿಂದ ಹೊಗಳಿಸಿಕೊಂಡಿದ್ದ ಚಿಟ್ಟಾಣಿ ಅವರು ಕೌರವ, ಕೀಚಕ ಪಾತ್ರದಲ್ಲಿ ಮಿಂಚುತ್ತಿದ್ದರು. ನವರಸಗಳನ್ನು ರಂಗದ ಮೇಲೆ ತರುತ್ತಿದ್ದ ಮೇರು ಕಲಾವಿದ ಎಂಬ ಖ್ಯಾತಿಗೂ ಚಿಟ್ಟಾಣಿಯವರು ಪಾತ್ರರಾಗಿದ್ದರು. ಚಿಟ್ಟಾಣಿಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೆರೆಅಂಗಡಿ ಗ್ರಾಮದವರು.

 

Share This Article
Leave a Comment

Leave a Reply

Your email address will not be published. Required fields are marked *