ನಮ್ಮ ಧರ್ಮದಲ್ಲಿ ಮೂರ್ತಿ ಪೂಜೆ ಶ್ರೇಷ್ಠವಾದದ್ದು: ಬಾನು ಮುಷ್ತಾಕ್‌ರಿಂದ ಸ್ಪಷ್ಟೀಕರಣ ಕೇಳಿದ ಯದುವೀರ್‌

Public TV
1 Min Read

– ಪಕ್ಷದ ನಿರ್ಧಾರವೇ ನಮ್ಮ ನಿರ್ಧಾರ ಎಂದ ಬಿಜೆಪಿ ಸಂಸದ

ಮೈಸೂರು: ಮೈಸೂರು ದಸರಾ (Mysuru Dasara) ಉದ್ಘಾಟನೆಗೆ ಆಯ್ಕೆಯಾಗಿರುವ ಬಾನು ಮುಷ್ತಾಕ್‌ (Banu Mushtaq) ಅವರು ಕನ್ನಡಾಂಬೆ ಕುರಿತ ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಡಬೇಕು ಎಂದು ಯದುವೀರ್‌ ಒತ್ತಾಯಿಸಿದ್ದಾರೆ.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಆಯ್ಕೆಯನ್ನು ಮೊದಲು ಯದುವೀರ್ ಸ್ವಾಗತಿಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಪಕ್ಷದ ನಿರ್ಧಾರಕ್ಕೆ ಮಣೆ ಹಾಕಿದ್ದಾರೆ. ಬಾನು ಮುಷ್ತಾಕ್ ಕನ್ನಾಡಂಬೆ ಕುರಿತ ತಮ್ಮ ಹೇಳಿಕೆಗೆ ಮೊದಲು ಸ್ಪಷ್ಟನೆಯನ್ನ ಕೊಡಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ – ಸರ್ಕಾರದ ನಿರ್ಧಾರ ಸ್ವಾಗತಿಸಿದ ಯದುವೀರ್

ಸ್ಪಷ್ಟೀಕರಣ ಕೊಡದಿದ್ದರೆ ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ನನ್ನ ವಿರೋಧ ಇದೆ. ಸರ್ಕಾರ ಅವರನ್ನು ಆಯ್ಕೆ ಮಾಡಿದಾಗ ನಾನು ಸ್ವಾಗತಿಸಿದ್ದೆ. ಅವರ ಹಳೇ ಭಾಷಣ ನಂತರ ನೋಡಿದ್ದೇನೆ. ಆ ಭಾಷಣಕ್ಕೆ ಸ್ಪಷ್ಟೀಕರಣ ಬೇಕು. ಸ್ಪಷ್ಟೀಕರಣ ಕೊಡಲಿ ಅಥವಾ ಹೇಳಿಕೆಯನ್ನು ವಾಪಸ್ ಪಡೆಯಲಿ. ಎರಡು ಮಾಡದಿದ್ದರೆ ನನ್ನ ವಿರೋಧ ಇದೆ ಎಂದು ಯದುವೀರ್‌ ಸ್ಪಷ್ಟಪಡಿಸಿದ್ದಾರೆ.

ಪಕ್ಷದ ನಿರ್ಧಾರವೇ ನಮ್ಮ ನಿರ್ಧಾರ. ಪಕ್ಷಕ್ಕೆ ವಿರುದ್ಧ ನಿಲುವು ನನ್ನದಲ್ಲ. ಭುವನೇಶ್ವರಿ ಕುರಿತ ಬಾನು ಮುಷ್ತಾಕ್ ಹೇಳಿಕೆಯಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ. ಅದನ್ನು ಮುಷ್ತಾಕ್ ಅರ್ಥ ಮಾಡಿಕೊಳ್ಳಬೇಕು. ಅವರ ಧರ್ಮದ ಆಚರಣೆ ಬಗ್ಗೆ ನಾನು ಮಾತನಾಡುವುದಿಲ್ಲ. ನಮ್ಮ ಧರ್ಮದಲ್ಲಂತು ಮೂರ್ತಿ ಪೂಜೆ ಶ್ರೇಷ್ಠವಾದದ್ದು. ಅವರು ಚಾಮುಂಡಿ ಮಾತೆಯನ್ನು ಗೌರವಿಸಿ ಇಲ್ಲಿಗೆ ಬರಬೇಕು. ಭಕ್ತಿಯಿಂದ ದೇವರನ್ನ ಪೂಜಿಸಬೇಕು. ಇದಕ್ಕೂ ಮೊದಲು ತಮ್ಮ ಹಳೆಯ ಹೇಳಿಕೆಗೆ ಸ್ಪಷ್ಟೀಕರಣ ಕೊಡಬೇಕು ಎಂದಿದ್ದಾರೆ. ಇದನ್ನೂ ಓದಿ: ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳಲ್ಲ, ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತೆ: ಬಾನು ಮುಷ್ತಾಕ್‌ಗೆ ಪ್ರತಾಪ್ ಸಿಂಹ ಪ್ರಶ್ನೆ

Share This Article