ಪೇಜಾವರ ಶ್ರೀಗಳ ನಿಧನಕ್ಕೆ ಯದುವೀರ್, ಗಣಪತಿ ಶ್ರೀ ಸಂತಾಪ – ಕೃಷ್ಣಧಾಮ, ಪೇಜಾವರ ಧಾಮದಲ್ಲಿ ನೀರವ ಮೌನ

Public TV
2 Min Read

ಮೈಸೂರು: ಪೇಜಾವರ ಶ್ರೀಗಳ ನಿಧನಕ್ಕೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಟದತ್ತ ಚಾಮರಾಜ ಒಡೆಯರ್ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯದುವೀರ್ ಸಂತಾಪ ಹಂಚಿಕೊಂಡಿದ್ದಾರೆ.

ವಿಶ್ವೇಶ್ವ ತೀರ್ಥ ಶ್ರೀಪಾದರು ದೈವಾದೀನರಾಗಿರುವುದು ಬಹಳ ದುಃಖವಾಗಿದೆ. ಬಾಲ್ಯದಲ್ಲೇ ವೈಯಕ್ತಿಕ ಜೀವನ ತ್ಯಜಿಸಿ 80 ವರ್ಷ ಕೃಷ್ಣನ ಸೇವೆ ಮಾಡಿದ್ದಾರೆ. ಸಮಾಜ ಸುಧಾರಣೆಗೆ ತಮ್ಮ ಜೀವನ ಮುಡುಪಿಟ್ಟಿದ್ದರು. ಶ್ರೀಗಳ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಚಾಮುಂಡೇಶ್ವರಿ ನೀಡಲಿ ಎಂದು ಸಂತಾಪ ಸೂಚಿಸಿ ಪೇಜಾವರ ಸ್ವಾಮೀಜಿ ಮತ್ತು ಜಯಚಾಮರಾಜ ಒಡೆಯರ್ ಅವರ ಜೊತೆಗಿರುವ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇತ್ತ ಮೈಸೂರಿನ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ಕೂಡ ಪೇಜಾವರ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ವಿಶ್ವೇಶತೀರ್ಥರು 7ನೇ ವರ್ಷಕ್ಕೆ ದೀಕ್ಷೆ ಪಡೆದರು. ನಮಗೆ 11 ವರ್ಷ ಆಗಿದ್ದಾಗ, ಅವರಿಗೆ 19 ವರ್ಷವಾಗಿತ್ತು. ಮೈಸೂರಿನ ಮಹಾರಾಜ ಶ್ರೀ ಜಯ ಚಾಮರಾಜ ಒಡೆಯರ್ ದೇವಾಲಯ ಕಟ್ಟಿಸಿದ್ದರು. ಆಗ ನಾವಿಬ್ಬರೂ ಭೇಟಿಯಾಗಿದ್ದೆವು. ಅಂದಿನಿಂದಲೂ ನಿಕಟ ಸಂಪರ್ಕವಿತ್ತು. ಪೇಜಾವರ ಶ್ರೀಪಾದರು ಸಾಮಾಜಿಕ, ಧಾರ್ಮಿಕವಾಗಿ ಅಪಾರ ಸಾಧನೆ ಮಾಡಿದ್ದು, ಕೇವಲ ಹಿಂದೂ ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಮುಸ್ಲಿಂ, ಕ್ರೈಸ್ತರು, ದಲಿತರನ್ನು ಒಳಗೊಳ್ಳುತ್ತಿದ್ದರು. ಯತಿಗಳಿಗೆ ಜೀವಿತಾವಧಿ ಲೆಕ್ಕವಿಲ್ಲ, ದೇಹಕ್ಕೆ ಮಾತ್ರ ವಯಸ್ಸಾಗಿತ್ತು ಎಂದು ತಿಳಿಸಿದ್ದಾರೆ.

ಪೇಜಾವರ ಶ್ರೀ ಅಸ್ತಂಗತ ಹಿನ್ನೆಲೆಯಲ್ಲಿ ಮೈಸೂರು ಶ್ರೀಕೃಷ್ಣಧಾಮದಲ್ಲಿ ನೀರವ ಮೌನ ಆವರಿಸಿತ್ತು. ಮಠದ ಒಳಾವರಣದಲ್ಲಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಸಲ್ಲಿಸಲಾಯಿತು. ಪೇಜಾವರ ಶ್ರೀಗಳು ಮೈಸೂರಿನಲ್ಲೇ ಕೊನೆಯ ಚಾತುರ್ಮಾಸ ವ್ರತ ಆಚರಿಸಿದ್ದರು. ಮೈಸೂರಿನಲ್ಲಿ ಒಟ್ಟು ಮೂರು ಬಾರಿ ಚಾತುರ್ಮಾಸ ಆಚರಣೆ ಮಾಡಿದ್ದರು. 2003, 2012, 2019ರಲ್ಲಿ ಚಾತುರ್ಮಾಸ ಆಚರಣೆ ಮಾಡಿದ್ದರು. ಒಮ್ಮೆ ಅಖಿಲ ಭಾರತ ಮಾಧ್ವ ಮಹಾಮಂಡಲ ಸಭೆ ಕೂಡ ಇಲ್ಲಿ ಆಯೋಜನೆ ಮಾಡಿದ್ದರು.

ಮೈಸೂರಿನ ಒಡನಾಟದ ಬಗ್ಗೆ ಶ್ರೀ ಕೃಷ್ಣಧಾಮದ ಮೇಲ್ವಿಚಾರಕ ರಘುರಾಮ್ ರಾವ್ ಈ ಬಗ್ಗೆ ಮಾಹಿತಿ ನೀಡಿ, ಮೈಸೂರು ಮತ್ತು ಪೇಜಾವರ ಸ್ವಾಮೀಜಿ ಅವರದ್ದು ತಂದೆ-ಮಕ್ಕಳ ಸಂಬಂಧ. ಕೃಷ್ಣ ಮಠದಷ್ಟೇ ಸಂತೋಷದಿಂದ ಇಲ್ಲಿ ವಾಸ್ತವ್ಯ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಇನ್ನೂ ಜೆಪಿ ನಗರದಲ್ಲಿನ ಪೇಜಾವರ ಧಾಮ ಎಂಬ ವೃದ್ಧಾಶ್ರಮದಲ್ಲೂ ನೀರವ ಮೌನ ಆವರಿಸಿತ್ತು. 2016 ರಲ್ಲಿ ಸ್ವಾಮೀಜಿಗಳು ಶ್ರೀ ಮಠದಿಂದ ಈ ವೃದ್ಧ ಶ್ರಮ ಸ್ಥಾಪಿಸಿದ್ದರು. ಬಹು ಅಚ್ಚುಕಟ್ಟಾಗಿ ಈ ವೃದ್ಧ ಶ್ರಮ ನಡೆಯುತ್ತಿದೆ. ಈಗ ಸದ್ಯಕ್ಕೆ ವೃದ್ಧಶ್ರಮದಲ್ಲಿ 40 ಜನ ಇದ್ದಾರೆ. ಸ್ವಾಮೀಜಿ ಗಳ ನಿಧನದ ಹಿನ್ನೆಲೆಯಲ್ಲಿ ವೃದ್ಧಾಶ್ರಮದಲ್ಲಿ ನೀರವ ಮೌನ ಆವರಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *