ಅಂಬೇಡ್ಕರ್ ನಾಮಫಲಕ ಬಳಕೆ ವಿಚಾರ – ಎರಡು ಸಮುದಾಯಗಳ ಮಧ್ಯೆ ಕಿತ್ತಾಟ

Public TV
1 Min Read

ಯಾದಗಿರಿ: ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಸಹಿತ ನಾಮ ಫಲಕ ಅಳವಡಿಸುವ ವಿಚಾರಕ್ಕಾಗಿ ವಡಗೇರಾ ಪಟ್ಟಣದಲ್ಲಿ ಕುರುಬ ಸಮುದಾಯ ಮತ್ತು ದಲಿತ ಸಂಘಟನೆಗಳ ನಡುವೆ ಕಿತ್ತಾಟ ಆರಂಭವಾಗಿದೆ.

ಇದೇ ತಿಂಗಳ 8ರಂದು ವಡಗೇರಾ ಪಟ್ಟಣದ ಹಳೆ ಪೊಲೀಸ್ ಠಾಣೆ ಮುಂದೆ ದಲಿತ ಸಮುದಾಯದಿಂದ ಅಂಬೇಡ್ಕರ್ ನಾಮಫಲಕ ಅಳವಡಿಕೆ ಮಾಡಲಾಗಿತ್ತು. ಆದರೆ ನಾಮ ಫಲಕ ಅಳವಡಿಕೆಗೆ ಅನುಮತಿ ಇಲ್ಲವೆಂದು ಪೊಲೀಸರು ಅದನ್ನು ತೆರವುಗೊಳಿಸಿದ್ದರು. ಮತ್ತು ನಾಮ ಫಲಕವನ್ನು ಅನಧಿಕೃತವಾಗಿ ಅಳವಡಿಸಲಾಗಿದೆ ಎಂಬ ಆರೋಪದ ಮೇಲೆ 8 ಜನರ ಮೇಲೆ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.

ಈ ವಿಚಾರಕ್ಕೆ ಈಗ ಪೊಲೀಸರು ಕುರುಬ ಸಮುದಾಯದ ಕುಮ್ಮಕ್ಕಿನಿಂದ ನಾಮಫಲಕ ತೆರವುಗೊಳಿಸಿದ್ದಾರೆಂದು ದಲಿತ ಸಂಘಟನೆಗಳು ಆರೋಪಿಸಿ, ತೆರವುಗೊಳಿಸಿದ ಜಾಗದಲ್ಲಿಯೇ ನಾಮಫಲಕ ಹಾಕಬೇಕೆಂದು ಹಳೆ ಠಾಣೆ ಹಿಂಭಾಗದ ರಸ್ತೆ ತಡೆದು ದಲಿತ ಸಂಘಟನೆಗಳು ಪ್ರತಿಭಟನೆ ಮಾಡಿದ್ದಾರೆ. ಆದರೆ ಇನ್ನೊಂದು ಕಡೆ ಯಾವುದೇ ಕಾರಣಕ್ಕೂ ನಾಮ ಫಲಕ ಅಳವಡಿಸಬಾರದೆಂದು ವಿರೋಧಿಸಿ ಕುರುಬ ಸಮುದಾಯದಿಂದಲೂ ಸಹ ಪ್ರತಿಭಟನೆ ಮಾಡುತ್ತಿದ್ದಾರೆ.

ಈ ಸಂಬಂಧ ವಡಗೇರಾ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಗ್ರಾಮದಲ್ಲಿ ವ್ಯಾಪಕ ಪೊಲೀಸ್ ಭದ್ರತೆ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *