ಯಾದಗಿರಿ: ಜನತೆಗೆ ಮರೀಚಿಕೆಯಾದ ಶುದ್ಧ ಕುಡಿಯುವ ನೀರು

Public TV
1 Min Read

– 3 ತಿಂಗಳಿನಿಂದ ಕಲುಷಿತ ನೀರು ಕುಡಿಯುತ್ತಿರೋ ಜನ

ಯಾದಗಿರಿ: ನಗರದ ಜನತೆಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಶುದ್ಧ ನೀರು ಪೂರೈಸಿ ಜನರ ಆರೋಗ್ಯ ಕಾಪಾಡಬೇಕಾದ ನಗರಸಭೆ ಮಾತ್ರ ನಿಷ್ಕಾಳಜಿ ವಹಿಸಿದೆ. ನಗರಸಭೆ ಕಲುಷಿತ ನೀರು ಪೂರೈಸುತ್ತಿರುವ ಪರಿಣಾಮ ಜನತೆ ಅನಾರೋಗ್ಯದಿಂದ ಬಳಲುವಂತಾಗಿದೆ.

ನಗರದ ಜನರಿಗೆ ಯಾದಗಿರಿ ನಗರಸಭೆ ಗಲೀಜು ನೀರು ಪೂರೈಸುತ್ತಿದೆ. ಕಳೆದ 3 ತಿಂಗಳಿನಿಂದ ಗಲೀಜು ನೀರನ್ನೇ ಜನತೆ ಸೇವನೆ ಮಾಡುತ್ತಿದ್ದಾರೆ. ನೀರು ಪೂರೈಸುವ ಪೈಪ್ ಲೈನ್ ಚರಂಡಿ ನೀರಿನಲ್ಲಿ ಸೇರಿಕೊಂಡ ಪರಿಣಾಮ ಚರಂಡಿ ನೀರು ನಲ್ಲಿಯ ಮೂಲಕ ಹರಿದುಬರುತ್ತಿದೆ.

ವಾರ್ಡ್ 6ರ ಸವಿತಾ ನಗರ, ಮೈಲಾಪುರ ಅಗಸಿ ಹಾಗೂ ಇನ್ನಿತರೆ ಬಡಾವಣೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮಲಿನವಾದ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರು ಚರಂಡಿ ನೀರಿನೊಂದಿಗೆ ಮಿಶ್ರಣವಾಗಿ ಗಲೀಜು ನೀರು ಸರಬರಾಜಾಗುತ್ತಿದೆ. ಬೇಸಿಗೆಯಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದ ಹಿನ್ನಲೆಯಲ್ಲಿ ಹಾಗೂ ನೀರಿನ ಕೊರತೆಯಿಂದಾಗಿ ನಗರದ ನಿವಾಸಿಗಳು ಇದೇ ನೀರನ್ನ ಸ್ವಲ್ಪಮಟ್ಟಿಗೆ ಶುದ್ಧೀಕರಿಸಿ ದಾಹ ತಣಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ನಗರದ ನಿವಾಸಿಗಳು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಭರವಸೆ ನೀಡುವ ಕೆಲಸ ಮಾಡಿದ್ದಾರೆ. ಈಗಾಗಲೇ ನಗರದ ಜನತೆ ನೀರಿಗಾಗಿ ಹಾಹಾಕರ ಪಡುತ್ತಿದ್ದಾರೆ. ಇದ್ದಷ್ಟಾದರೂ ನಮಗೆ ಶುದ್ಧವಾದ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಅಳಲು ತೊಡಿಕೊಳ್ಳುತ್ತಿದ್ದಾರೆ. ಇನ್ನು ಮುಂದಾದರು ನಗರಸಭೆ ಎಚ್ಚೆತ್ತುಕೊಂಡು ಸಮಸ್ಯೆಗಳನ್ನು ಬಗೆಹರಿಸಿ ನಗರದ ನಿವಾಸಿಗಳಿಗೆ ಶುದ್ಧವಾದ ನೀರು ಪೂರೈಸುವ ಕೆಲಸ ಮಾಡಬೇಕಿದೆ.

 

Share This Article
Leave a Comment

Leave a Reply

Your email address will not be published. Required fields are marked *