ಯಾದಗಿರಿಯಲ್ಲಿ ಪೊಲೀಸರ ದೌರ್ಜನ್ಯಕ್ಕೆ ಬಡ ಜೀವ ಬಲಿ

Public TV
2 Min Read

ಯಾದಗಿರಿ: ಜಿಲ್ಲೆಯಲ್ಲಿ ಪೋಲಿಸರಿಗೊಂದು ಕಾನೂನು, ಜನಸಾಮಾನ್ಯರಿಗೊಂದು ಕಾನೂನು ಇದೆಯಾ ಎಂಬ ಅನುಮಾನ ಮೂಡಿದೆ. ಪೊಲೀಸರಿಗೆ ಮಾನವೀಯತೆಯೇ ಸತ್ತು ಹೋಗಿದೆಯಾ..?. ಮಾನವ ಹಕ್ಕುಗಳಿಗೆ ಬೆಲೆ ಇಲ್ಲ ಎನ್ನುವಂತಾಗಿದೆ. ಜಿಲ್ಲೆಯಲ್ಲಿ ಜೈ ಭೀಮ್ ಚಿತ್ರದ ಮಾದರಿಯ ಘಟನೆ ನಡೆದಿದ್ದು, ಪೊಲೀಸರ ದೌರ್ಜನ್ಯಕ್ಕೆ ಬಡ ಜೀವವೊಂದು ಬಲಿಯಾಗಿದೆ.

ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಲಿಂಗದಳ್ಳಿ ತಾಂಡದಲ್ಲಿ ಇಂತಹ ಘಟನೆ ನಡೆದಿದೆ. ಇದೇ ತಿಂಗಳ 27 ರ ರಾತ್ರಿ ತಾಂಡದಲ್ಲಿನ ಜಮೀನಿನಲ್ಲಿ ನಡೆಯುತ್ತಿದ್ದ ಇಸ್ಪೀಟು ಅಡ್ಡೆಯ ಮೇಲೆ ದಾಳಿಗೆ ಪೊಲೀಸರು ತೆರಳಿದ್ದರು. ಪೊಲೀಸರನ್ನು ಕಂಡ ಇಸ್ಪೀಟು ಜೂಜುಕೋರರು ಹೆದರಿ ಓಡಿ ಹೋಗಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರ ಕೈಗೆ ರಮ್ಯ ಎಂಬ ಯುವಕ ಸಿಕ್ಕಿದ್ದಾನೆ. ಯುವಕನನ್ನು ಹಿಡಿದ ಪೊಲೀಸರು ಹಣಕ್ಕಾಗಿ ಪಿಡಿಸಿದ್ದಾರೆ. ಆತ ಹಣ ನೀಡದಿದ್ದಾಗ ಮನಬಂದಂತೆ ಥಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿಯವರಿಂದ ಉತ್ತಮ ಕಾರ್ಯ ನಿರ್ವಹಣೆ: ನಿರಾಣಿ ಹೇಳಿಕೆ

ಪೊಲೀಸರ ಹೊಡೆತ ತಾಳದೆ ರಮ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನರಿತ ಪೊಲೀಸರು ಯುವಕನ ಶವ ಜಮೀನಿನಲ್ಲಿ ಬಿಟ್ಟು ಉಳಿದವರನ್ನು ಠಾಣೆಗೆ ಕರೆ ತಂದು ಕೇಸ್ ದಾಖಲಿಸಿದ್ದಾರೆ. ಬಳಿಕ ಯುವಕ ಸಹಜವಾಗಿ ಸತ್ತಿದ್ದಾನೆ ಅಂತ ಹೇಳಬೇಕೆಂದು ಎಚ್ಚರಿಕೆ ನೀಡಿ ಜೂಜುಕೋರರನ್ನು ಬಿಟ್ಟು ಕಳುಹಿಸಲಾಗಿದೆ. ಅಲ್ಲದೆ ಈ ಬಗ್ಗೆ ಎಲ್ಲೂ ಬಾಯಿ ಬಿಡದಂತೆ ಕುಟುಂಬಸ್ಥರಿಗೆ ಮತ್ತು ಗ್ರಾಮಸ್ಥರಿಗೆ ತಾಕೀತು ಸಹ ಮಾಡಿದ್ದಾರೆ.

ಬೆಳಗ್ಗೆ ಈ ಸುದ್ದಿ ತಿಳಿಯುತ್ತಿದ್ದಂತೆ ಶವನನ್ನು ಮುಚ್ಚಲು ಪೊಲೀಸರು ಹರಸಹಾಸ ಪಟ್ಟಿದ್ದಾರೆ. ತಮ್ಮ ಕೈಯಲ್ಲಿ ಕಾನೂನಿದೆ ಅಂತ ತಮಗೆ ಹೇಗೆ ಬೇಕೋ ಹಾಗೇ ದುರ್ಬಳಕೆ ಮಾಡಿಕೊಂಡು, ಮೃತದೇಹವನ್ನು ಪೊಸ್ಟ್ ಮಾರ್ಟಂ ಮಾಡಿರುವ ಹಾಗೇ ವರದಿ ಸಿದ್ಧಪಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ತಾವೇ ಕುಟುಂಬಸ್ಥರ ಹೇಳಿಕೆ ಬರೆದುಕೊಂಡು, ಮೃತ ವ್ಯಕ್ತಿಯ ಹೆಂಡತಿ ಕೈಯಿಂದ ಬಲವಂತವಾಗಿ ಹೆಬ್ಬೆಟ್ಟು ಸಹಿ ಪಡೆದಿದ್ದಾರೆ. ಬಳಿಕ ಯಾವುದೇ ಮಾನವೀಯತೆ ಇಲ್ಲದೆ ಶವವನ್ನು ಹಾಸಿಗೆಯಲ್ಲಿ ಎಳೆದುಕೊಂಡು ಹೋಗಿ ಜೆಸಿಬಿ ಮೂಲಕ ಮಣ್ಣು ಮಾಡಿದ್ದಾರೆ.

ಹೀಗೆ ಕಾನೂನು ರಕ್ಷಣೆ ಮಾಡಬೇಕಾದವರೆ ಕಾನೂನು ದುರ್ಬಳಕೆ ಮಾಡಿಕೊಂಡು, ಅಮಾಯಕ ಜೀವವೊಂದು ಬಲಿ ಪಡೆದುಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಯನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *