ಯಾದಗಿರಿಯಲ್ಲಿ ಗಮನ ಸೆಳೀತು ಭರ್ಜರಿ ಕುಸ್ತಿ ಕಾಳಗ

Public TV
1 Min Read

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ರೇಣುಕ ಯಲ್ಲಮ್ಮ ದೇವಿ ಜಾತ್ರೆ ನಿಮಿತ್ತ ನಡೆದ ಜಂಗಿ ಕುಸ್ತಿ ಯಾದಗಿರಿ ಮಂದಿಯ ಗಮನ ಸೆಳೆಯಿತು. ಜಗಜಟ್ಟಿಗಳ ಕಾಳಗ ಕಂಡು ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು. ತಮಟೆ ಸದ್ದಿನೊಂದಿಗೆ ಪುಟ್ಟ ಪುಟ್ಟ ಮಕ್ಕಳು ಖದರ್ ತೋರಿಸಿದ್ರೆ, ಘಟಾನುಘಟಿಗಳು ಅಖಾಡಕ್ಕಿಳಿದು ಸೆಣಸಾಡಿದ್ದು ಮೈ ರೋಮಾಂಚನಗೊಳಿಸಿದ್ದು ಸುಳ್ಳಲ್ಲ.

ನಾನಾ ನೀನಾ ನೋಡೇ ಬಿಡೋಣ ಅನ್ನೋ ರೇಂಜ್‍ಗೆ ಕುಸ್ತಿ ಫೈಟ್ ಸಖತ್ ಮಜಾ ನೀಡಿತ್ತು. ಕುಸ್ತಿ ಕಾಳಗದಲ್ಲಿ ಎದುರಾಳಿಯನ್ನು ಬಗ್ಗು ಬಡಿಯಬೇಕಾದರೆ ನಾನಾ ಪಟುಗಳನ್ನು ಕರಗತ ಮಾಡಿಕೊಂಡಿರಬೇಕು. ಇಲ್ಲದಿದ್ದರೆ ಸೋಲಿನ ಮುಖ ಹೊತ್ತು ಮನೆಗೆ ವಾಪಸ್ ತೆರಳಬೇಕಾಗುತ್ತದೆ. ಕಳೆದ 2ವರ್ಷದಿಂದ ಕುಸ್ತಿ ಆಡುತ್ತಿದ್ದೇನೆ, ಕುಸ್ತಿಗಾಗಿ ದೇಹ ದಂಡಿಸಿಬೇಕಾದ್ರೆ ದಿನಾಲು ಚೆನ್ನಾಗಿ ಆಹಾರ ಸೇವಿಸಬೇಕು ಎಂದು ಸೋಲಾಪುರ ಮೂಲದ ಪೈಲ್ವಾನ ವಿಲಾಸ್ ಹೇಳುತ್ತಾರೆ.

ಕುಸ್ತಿ ಅಂದ್ರೆ ಮೊದ್ಲೇ ತಾಕತ್ತಿನ ಸ್ಪರ್ಧೆ. ಹೀಗಾಗೇ ಗೆದ್ದವ್ರಿಗಾಗಿ ಬೆಳ್ಳಿ ಗದ್ದೆ, ಬೆಳ್ಳಿ ಕಡಗ, ನಗದು ಬಹುಮಾನ ಇಡಲಾಗಿತ್ತು. ಇಂತಹ ಚಾನ್ಸ್ ಗಾಗೇ ಕಾಯ್ತಿದ್ದ ಸಮರವೀರರು ಮಹಾರಾಷ್ಟ್ರ, ಆಂಧ್ರಪ್ರದೇಶ, ವಿಜಯಪುರ, ರಾಯಚೂರು, ಕಲಬುರಗಿ ಜಿಲ್ಲೆಯ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಎಂಟ್ರಿ ಕೊಟ್ಟಿದ್ರು. ಮದಗಜಗಳಂತೆ ಅಖಾಡದಲ್ಲಿ ಕಾದಾಟ ನಡೆಸಿದ್ರು. ಇತ್ತ ಗೆದ್ದವ್ರನ್ನ ಮೈದಾನದಲ್ಲಿ ಮೆರವಣಿಗೆ ಮಾಡ್ತಿದ್ರೆ, ಉಳಿದ ಸ್ಪರ್ಧಿಗಳೂ ಹುಮ್ಮಸ್ಸಿನಿಂದ ಫೀಲ್ಡಿಗಿಳೀತಿದ್ರು. ಶಿಳ್ಳೆ, ಕೇಕೆಗಳ ನಡುವೆ ಗೆಲುವಿಗಾಗಿ ಪಟ್ಟು ಹಾಕ್ತಿದ್ರು. ಕುಸ್ತಿ ವೀಕ್ಷಿಸಲು ಮೈದಾನದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಜನ ಕಿಕ್ಕಿರಿದು ತುಂಬಿದ್ದರೂ ಸೂಜಿ ಬಿದ್ದರೂ ಸದ್ದಾಗುವಂತಹ ವಾತಾವರಣದಲ್ಲಿ ಎಲ್ಲರ ದೃಷ್ಟಿ ಕುಸ್ತಿಪಟುಗಳ ಮೇಲೆ ಕೇಂದ್ರಿಕೃತವಾಗಿತ್ತು.

ಜಗಜಟ್ಟಿಗಳ ಸೆಣಸಾಟಕ್ಕೆ ಮೈದಾನ ಬರಗುಡುತ್ತಿತ್ತು, ಕಾದಾಟದ ನಡುವೆ ಹವಳಾ ಹವಳಾ, ಬಲೆ ಬಲೆ ಎಂಬ ಉದ್ಘೋಷಗಳು ಕೇಳಿ ಬರುತ್ತಿದ್ದವು. ಹಲವು ಭಾಗಗಳಿಂದ ಕುಸ್ತಿ ಪಟುಗಳು ಬಂದಿದ್ರು ಪ್ರತಿ ವರ್ಷದಂತೆ ಈ ವರ್ಷವು ಕುಸ್ತಿ ಪಂದ್ಯ ಬಲು ವಿಜೃಂಭಣೆಯಿಂದ ಜರುಗಿತು ಎಂದು ಗ್ರಾಮಸ್ಥರು ಹೇಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *