– ಆರು ಜನರ ಸ್ಥಿತಿ ಗಂಭೀರ
ಯಾದಗಿರಿ: ಜಿಲ್ಲೆಯ ಸುರಪುರ (Surpur) ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೂರು ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ತಿಪ್ಪನಟಗಿ ಗ್ರಾಮದ ದೇವಿಕೆಮ್ಮ ಹೊಟ್ಟಿ (48), ವೆಂಕಮ್ಮ (60), ರಾಮಣ್ಣ ಪೂಜಾರಿ (50) ಮೃತ ದುರ್ದೈವಿಗಳು.ಇದನ್ನೂ ಓದಿ: ಬೇರೆ ಹೆಣ್ಣಿನ ಸಹವಾಸ, ಪತ್ನಿಗೆ ಕಿರುಕುಳ – ಡಿವೈಎಸ್‌ಪಿ ವಿರುದ್ಧ ಎಫ್‌ಐಆರ್
ಕಳೆದ ಹತ್ತು ದಿನಗಳಿಂದ ತಿಪ್ಪನಟಗಿ ಗ್ರಾಮದ ಹಲವರು ವಾಂತಿ, ಭೇದಿಯಿಂದ ಬಳಲಿ, ಅಸ್ವಸ್ಥರಾಗುತ್ತಿದ್ದರು. ಈ ಹಿನ್ನೆಲೆ ಜನರು ಚಿಕಿತ್ಸೆಗಾಗಿ ಬೇರೆ ಬೇರೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಆದರೆ ದಾಖಲಾದ ಮೂರೇ ದಿನಗಳಲ್ಲಿ ಮೂರು ಜನರು ಸಾವನ್ನಪ್ಪಿದ್ದು, ಆರು ಜನರ ಸ್ಥಿತಿ ಗಂಭೀರವಾಗಿದೆ. ಇನ್ನೂ ಕೆಲವರು ಚೇತರಿಸಿಕೊಂಡಿದ್ದು, 20 ಜನರು ಅಸ್ವಸ್ಥರಾಗಿದ್ದಾರೆ.
ಈ ಹಿನ್ನೆಲೆ ಸ್ಥಳಕ್ಕೆ ಸುರಪುರ ಟಿಹೆಚ್‌ಓ (THO) ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವರದಿ ನೀಡುವಂತೆ ವೈದ್ಯರಿಗೆ ತಿಳಿಸಿದ್ದಾರೆ.
ಈ ಸಂಬಂಧ ಯಾದಗಿರಿ (Yadagiri) ಡಿಹೆಚ್‌ಓ (DHO) ಡಾ. ಮಹೇಶ್ ಬಿರಾದಾರ ಪ್ರತಿಕ್ರಿಯೆ ನೀಡಿದ್ದು, ತಿಪ್ಪನಟಗಿ ಗ್ರಾಮದಲ್ಲಿನ ವಾಂತಿ-ಭೇದಿ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿದೆ. ನಮ್ಮ ಆರೋಗ್ಯ ಇಲಾಖೆಯ ಟಿಹೆಚ್‌ಓ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಸಾವಿಗೀಡಾದವರು ಹಲವು ಕಾಯಿಲೆಯಿಂದ ಬಳಲುತ್ತಿದ್ದರು. ಜೊತೆಗೆ ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ, ಮೆದುಳಿನ ರೋಗದಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ವಾಂತಿ-ಭೇದಿ ಸಾವಿಗೆ ನಿಖರ ಕಾರಣವಲ್ಲ. ಸದ್ಯ ಇದೇ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗಿದ್ದಾರೆ. ಗ್ರಾಮಸ್ಥರು ಆತಂಕಪಡುವ ಪರಿಸ್ಥಿತಿ ಇಲ್ಲ ಎಂದರು.
ಸಾವಿಗೆ ನಿಖರವಾದ ಕಾರಣದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಳೆದ ಹತ್ತು ದಿನಗಳ ಹಿಂದೆ ಕುಡಿಯುವ ನೀರನ್ನು ತಪಾಸಣೆ ಮಾಡಲಾಗಿತ್ತು. ವರದಿಯಲ್ಲಿ ನೀರು ಕುಡಿಯಲು ಯೋಗ್ಯವಿದೆ ಎಂದು ಬಂದಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಸಂಪೂರ್ಣ ತನಿಖೆ ಬಳಿಕ ಎಲ್ಲಾ ಸತ್ಯ ಹೊರಬರಲಿದೆ ಎಂದ ತಿಳಿಸಿದರು. ಇದನ್ನೂ ಓದಿ: ಒಂದೂವರೆ ತಿಂಗಳ ಗಂಡು ಮಗುವನ್ನು ನೀರಿನ ಹಂಡೆಯಲ್ಲಿ ಮುಳುಗಿಸಿ ಕೊಂದ ಪಾಪಿ ತಾಯಿ