ವಾಷಿಂಗ್ಟನ್: ಪ್ರಸಿದ್ಧ WWE ಕುಸ್ತಿಪಟು ಹಲ್ಕ್ ಹೊಗನ್(71) ಅಮೆರಿಕದ ಫ್ಲೋರಿಡಾದಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.
WWE ದಂತಕಥೆಯಾಗಿದ್ದ ಹಲ್ಕ್ ಹೊಗನ್ (Hulk Hogan) ಕುತ್ತಿಗೆ ಮತ್ತು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಮೇ ತಿಂಗಳಲ್ಲಿ ಅವರು ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕೆಲ ದಿನಗಳಿಂದ ಕೋಮಾದಲ್ಲಿದ್ದ (Coma) ಅವರು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್ ಆಯೋಜನೆಗೆ ಬಿಸಿಸಿಐ ಒಪ್ಪಿಗೆ – ಸೆಪ್ಟೆಂಬರ್‌ನಲ್ಲಿ ಭಾರತ, ಪಾಕ್ ಮುಖಾಮುಖಿ?
ಆಗಸ್ಟ್ 11, 1953 ರಂದು ಜಾರ್ಜಿಯಾದಲ್ಲಿ ಜನಿಸಿದ್ದ ಹಲ್ಕ್ ಹೊಗನ್ 1980 ಮತ್ತು 1990 ರ ದಶಕದ ಆರಂಭದಲ್ಲಿ ವೃತ್ತಿಪರ ಕುಸ್ತಿಯಲ್ಲಿ ಗುರುತಿಸಬಹುದಾದ ಅತ್ಯಂತ ಪ್ರಸಿದ್ಧ ಕುಸ್ತಿಪಟು ಆಗಿದ್ದರು. ಹ್ಯಾಂಡಲ್‌ಬಾರ್ ಮೀಸೆ, ಹಳದಿ ಬಣ್ಣದ ಕನ್ನಡಕ, ತಲೆಗೆ ಸುತ್ತುತ್ತಿದ್ದ ಬಂದಾನಗಳಿಂದ ಮನೆಮಾತಾಗಿದ್ದರು. ಹಲ್ಕಮೇನಿಯಾ (Hulkamania) ಎಂಬ ಅವರ ಘೋಷಣೆ ಅಭಿಮಾನಿಗಳಿಗೆ ಇಷ್ಟವಾಗಿತ್ತು
ಆರು ಬಾರಿ WWE ಚಾಂಪಿಯನ್ ಆಗಿದ್ದ ಇವರು ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ಜಾಹೀರಾತುಗಳಲ್ಲಿ ನಟಿಸಿದ್ದರು. ಕುಸ್ತಿ ಅಷ್ಟೊಂದು ಜನಪ್ರಿಯವಾಗದ ಸಮಯದಲ್ಲಿವಿಚಿತ್ರ ವರ್ತನೆ, ನಾಟಕೀಯ ರೀತಿಯ ಅಭಿನಯ ಲಕ್ಷಾಂತರ ಹೊಸ ಅಭಿಮಾನಿಗಳನ್ನು, ವಿಶೇಷವಾಗಿ ಮಕ್ಕಳು ಮತ್ತು ಕುಟುಂಬಗಳನ್ನು ಸೆಳೆಯುವಲ್ಲಿ ಹಲ್ಕ್ ಹೊಗನ್ ಯಶಸ್ವಿಯಾಗಿದ್ದರು. ಇದನ್ನೂ ಓದಿ: ಗಾಯಗೊಂಡು ಕಣ್ಣೀರು ಹಾಕುತ್ತಾ ಹೊರ ಹೋದ ಪಂತ್
ಹಲ್ಕ್ ಹೊಗನ್ ಅವರನ್ನು ಮೊದಲು 2005 ರಲ್ಲಿ WWE ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿತ್ತು. ಆದರೆ 2015 ರಲ್ಲಿ Gawker ಮಾಧ್ಯಮ ಸಂಸ್ಥೆ ಹೊಗನ್ ವಿರುದ್ಧ ಸೆಕ್ಸ್ ಟೇಪ್ ಪ್ರಕಟಿಸಿ ಜನಾಂಗೀಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವರದಿ ಮಾಡಿತ್ತು.
ಈ ಪ್ರಕರಣದ ಬಳಿಕ ಹಾಲ್ ಆಫ್ ಫೇಮ್‌ನಿಂದ ಹೊಗನ್ ಹೆಸರನ್ನು ತೆಗೆಯಲಾಗಿತ್ತು. ವಿಶ್ವಾದ್ಯಂತ ಈ ವಿಚಾರ ಸದ್ದು ಮಾಡಿದ ನಂತರ ಹೊಗನ್ Gawker ಸಂಸ್ಥೆಯ ವಿರುದ್ಧ ಕೇಸ್ ದಾಖಲಿಸಿ ಕೊನೆಗೆ ಗೆದ್ದು ಭಾರೀ ಪ್ರಮಾಣದ ಮೊತ್ತವನ್ನು ಪರಿಹಾರವಾಗಿ ಪಡೆದರು. ಹೊಗನ್ ಪ್ರಕರಣದಿಂದ ಆರ್ಥಿಕ ನಷ್ಟವಾಗಿ ಕೊನೆಗೆ ದಿವಾಳಿಯಾಗಿ Gawker ಬಾಗಿಲು ಹಾಕಿತ್ತು.