ಏಷ್ಯಾಕಪ್: ಗೆಲುವಿನ ಬೆನ್ನಲ್ಲೇ ಬಾಂಗ್ಲಾಗೆ ಅಘಾತ!

Public TV
2 Min Read

ದುಬೈ: ಇಲ್ಲಿನ ದುಬೈ ಇಂಟರ್ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್ ಮೊದಲ ಪಂದ್ಯದಲ್ಲಿ ಬಾಂಗ್ಲಾ ತಂಡ ಶ್ರೀಲಂಕಾ ವಿರುದ್ಧ 137 ರನ್ ಭರ್ಜರಿ ಜಯಗಳಿಸಿದೆ. ಆದರೆ ಈ ಪಂದ್ಯದಲ್ಲಿ ತಮಿಮ್ ಇಕ್ಬಾಲ್ ಗಾಯಗೊಂಡಿದ್ದು, 6 ವಾರಗಳ ಕಾಲ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.

ಬಾಂಗ್ಲಾ ಪರ ಆರಂಭಿಕನಾಗಿ ಕಣಕ್ಕೆ ಇಳಿದ ಇಕ್ಬಾಲ್ ಬ್ಯಾಟಿಂಗ್ ವೇಳೆ ತಮ್ಮ ಬೆರಳಿಗೆ ಗಾಯವಾದ ಕಾರಣ ಪೆವಿಲಿಯನ್‍ಗೆ ಮರಳಿದ್ದರು. ಆದರೆ ಪಂದ್ಯದ 47ನೇ ಓವರ್‍ನಲ್ಲಿ ಅನಿವಾರ್ಯವಾಗಿ ಮತ್ತೆ ಮೈದಾನಕ್ಕೆ ಬಂದ ಇಕ್ಬಾಲ್ ಒಂದೇ ಕೈಯಲ್ಲಿ ಬ್ಯಾಟ್ ಬೀಸಿದ್ದರು. ಇಕ್ಬಾಲ್ ಒಂದು ಕೈಯಲ್ಲಿ ಬ್ಯಾಟಿಂಗ್ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.

ಒಂದೇ ಕೈಯಲ್ಲಿ ಬ್ಯಾಟಿಂಗ್ ನಡೆಸಿದ್ದು ನಿಜಕ್ಕೂ ಅಭಿನಂದನಾರ್ಹ, ಆತನ ಧೈರ್ಯಕ್ಕೆ ಮೆಚ್ಚಲೇಬೇಕು ಎಂದು ಹಲವರು ಟ್ವೀಟ್ ಮಾಡಿದ್ದಾರೆ. 46.5 ಓವರ್‍ಗೆ 9ನೇ ವಿಕೆಟ್ ಪತನಗೊಂಡ ಬಳಿಕ ಒಂದೇ ಕೈಯಲ್ಲಿ ಇಕ್ಬಾಲ್ ಬ್ಯಾಟಿಂಗ್ ನಡೆಸಿದರೆ ಇತ್ತ ಮುಸ್ತಾಫಿಜರ್ ರಹೀಮ್ 32 ರನ್ ಸಿಡಿಸಿ ಮಿಂಚಿದರು. ಬಾಂಗ್ಲಾ ಅಂತಿಮವಾಗಿ 49.3 ಓವರ್ ಗಳಲ್ಲಿ 261 ರನ್ ಗಳಿಗೆ ಆಲೌಟ್ ಆಗಿದ್ದರೆ ಇಕ್ಬಾಲ್ 2 ರನ್ ಗಳಿಸಿ ಔಟಾಗದೇ ಉಳಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ 2 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು ಈ ವೇಳೆ ಕ್ರಿಸ್‍ಗೆ ಬಂದ ಮುಷ್ಫಿಕರ್ ರಹೀಮ್ 150 ಎಸೆತಗಳಲ್ಲಿ 144 ರನ್ (11ಬೌಂಡರಿ, 4 ಸಿಕ್ಸರ್) ಸಿಡಿಸಿ ತಂಡ ಮೊತ್ತ ಗಳಿಸಲು ಕಾರಣರಾದರು. ರಹೀಮ್‍ಗೆ ಉತ್ತಮ ಸಾಥ್ ನೀಡಿದ ಮೊಹಮ್ಮದ್ ಮಿಥುನ್ 63 ರನ್ ಗಳಿಸಿ ಮಿಂಚಿದರು. ಗೆಲ್ಲಲು 262 ರನ್ ಗುರಿ ಪಡೆದ ಶ್ರೀಲಂಕಾ ಯಾವುದೇ ಪ್ರತಿರೋಧ ತೋರದೆ ಕೇವಲ 124 ರನ್‍ಗಳಿಗೆ ಅಲೌಟ್ ಆಯಿತು.

ಈ ಹಿಂದೆ ಒಂದೇ ಕೈಯಲ್ಲಿ ಬ್ಯಾಟಿಂಗ್ ನಡೆಸಿದ್ದ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಅಂದು ಪ್ರಶಂಸೆಗೆ ಕಾರಣರಾಗಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ಪಡೆದಿರುವ ತಮಿಮ್ ಇಕ್ಬಾಲ್ ಮುಂದಿನ 6 ವಾರಗಳ ಕಾಲ ವಿಶ್ರಾಂತಿ ಪಡೆಯವ ಸಾಧ್ಯತೆ ಇದೆ. ಇದರೊಂದಿಗೆ ಬಾಂಗ್ಲಾ ತಂಡ ಇಕ್ಬಾಲ್ ಅನುಪಸ್ಥಿತಿಯಲ್ಲಿ ಟೂರ್ನಿ ಮುಂದುವರೆಯುವ ಅನಿವಾರ್ಯ ಎದುರಿಸಲಿದೆ. ಕಳೆದ ಕೆಲ ದಿನಗಳ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಟೂರ್ನಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಕ್ಬಾಲ್ ಸರಣಿಯಲ್ಲಿ 3 ಶತಕ, ಸಿಡಿಸಿ ಮಿಂಚಿದ್ದರು. ಸದ್ಯ ಬಾಂಗ್ಲಾಪರ ಇಕ್ಬಾಲ್ ಹೆಚ್ಚು (6307) ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

Share This Article
Leave a Comment

Leave a Reply

Your email address will not be published. Required fields are marked *