ಕುಸ್ತಿಪಟುಗಳ ಮೇಲೆ ದೌರ್ಜನ್ಯ – ದೆಹಲಿ ಪೊಲೀಸರ ನಡೆಗೆ ವ್ಯಾಪಕ ಖಂಡನೆ

Public TV
3 Min Read

ನವದೆಹಲಿ: ಭಾನುವಾರ ಉದ್ಘಾಟನೆಗೊಂಡ ನೂತನ ಸಂಸತ್ ಭವನದ (New Parliament Building) ಹೊರಗೆ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ಕುಸ್ತಿಪಟುಗಳನ್ನು (Wrestlers) ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಆರೋಪ ಹೊರಿಸಿ ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಭಾನುವಾರ ‘ಮಹಿಳಾ ಸಮ್ಮಾನ್ ಮಹಾಪಂಚಾಯತ್’ (Mahapanchayat) ಕರೆ ನೀಡಿದ್ದರು. ಇದರ ಭಾಗವಾಗಿ ಹೊಸ ಸಂಸತ್ ಭವನದ ಮುಂದೆ ಪ್ರತಿಭಟಿಸಲು ಯೋಜಿಸಿದ್ದರು. ಅದಕ್ಕಾಗಿ ಮೆರವಣಿಗೆ ಹೊರಟಿದ್ದರು. ಇದನ್ನೂ ಓದಿ: ಕುಸ್ತಿಪಟುಗಳ ಹೋರಾಟಕ್ಕೆ ದಾವಣಗೆರೆ ವಿದ್ಯಾರ್ಥಿಗಳ ಬೆಂಬಲ

ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಈ ವೇಳೆ ಬ್ಯಾರಿಕೇಡ್ ಹಾಕಿ ಕುಸ್ತಿಪಟುಗಳನ್ನು ತಡೆಯಲು ಪೊಲೀಸರು (Delhi Police) ಮುಂದಾದಾಗ, ಬ್ಯಾರಿಕೇಡ್‌ಗಳನ್ನ ಭೇದಿಸಲು ಮುಂದಾದರು. ಈ ವೇಳೆ ಕೆಲ ಕುಸ್ತಿಪಟುಗಳ ಮೇಲೆ ಹಲ್ಲೆ ನಡೆಸಿದ ಪೊಲೀಸರು, ಪ್ರತಿಭಟನಾ ನಿರತರನ್ನ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕುಡಿದ ಪೊಲೀಸರಿಂದ ಹಲ್ಲೆ ಆರೋಪ – ದೇಶದ ಅತ್ಯುನ್ನತ ಪ್ರಶಸ್ತಿ ಹಿಂದಿರುಗಿಸಲು ಮುಂದಾದ ಕುಸ್ತಿಪಟುಗಳು

ತಮ್ಮ ಮೇಲೆ ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಿರುವ ಕುಸ್ತಿಪಟು ಸಾಕ್ಷಿ ಮಲಿಕ್ ಕೆಲವು ಚಿತ್ರಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಯಾವುದೇ ಸರ್ಕಾರ ತಮ್ಮ ದೇಶದ ಚಾಂಪಿಯನ್‌ಗಳನ್ನ ಈ ರೀತಿ ನಡೆಸಿಕೊಳ್ಳುತ್ತದೆಯೇ? ನಾವು ಏನು ಅಪರಾಧ ಮಾಡಿದ್ದೀವಿ? ಎಂದು ಪ್ರಶ್ನಿಸಿದ್ದಾರೆ. ಕೆಲ ದಿನಗಳ ಹಿಂದೆಯೂ ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ವಿಶೇಷ ಪೊಲೀಸ್ ಆಯುಕ್ತ ದೇಪೇಂದ್ರ ಪಾಠಕ್, ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘಿಸಿದ್ದಕ್ಕಾಗಿ ಕುಸ್ತಿಪಟುಗಳನ್ನ ವಶಕ್ಕೆ ಪಡೆದಿದ್ದೇವೆ. ಸೂಕ್ತ ಸಮಯದಲ್ಲಿ ವಿಚಾರಣೆ ನಡೆಸಿ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ವ್ಯಾಪಕ ಖಂಡನೆ: ಸದ್ಯ ಕುಸ್ತಿಪಟುಗಳ ಮೇಲಿನ ದೌರ್ಜನ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಹ ದೆಹಲಿ ಪೊಲೀಸರ ನಡೆಯನ್ನ ಖಂಡಿಸಿದ್ದಾರೆ.

ಪ್ರತಿಭಟನಾನಿರತ ಕುಸ್ತಿಪಟುಗಳ ಮೇಲೆ ಪೊಲೀಸರು ಈ ರೀತಿ ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ. ಚಾಂಪಿಯನ್‌ಗಳನ್ನು ಈ ರೀತಿ ನಡೆಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

Share This Article