ಕೊನೆ ಓವರ್‌ನಲ್ಲಿ ಹ್ಯಾರಿಸ್ ಹ್ಯಾಟ್ರಿಕ್‌ ವಿಕೆಟ್‌; ಡೆಲ್ಲಿ ಆಲೌಟ್‌ – ಯುಪಿಗೆ 33 ರನ್‌ಗಳ ಜಯ

Public TV
1 Min Read

* 18 ಬಾಲ್‌ಗೆ ಅರ್ಧಶತಕ ಸಿಡಿಸಿ ಮಿಂಚಿದ ಚಿನೆಲ್ಲೆ ಹೆನ್ರಿ

ಬೆಂಗಳೂರು: ಚಿನೆಲ್ಲಿ ಹೆನ್ರಿ ಸ್ಫೋಟಕ ಅರ್ಧಶತಕ ಹಾಗೂ ಕೊನೆ ಓವರ್‌ನಲ್ಲಿ ಗ್ರೇಸ್ ಹ್ಯಾರಿಸ್ ಹ್ಯಾಟ್ರಿಕ್‌ ವಿಕೆಟ್‌ ಆಟ ಡೆಲ್ಲಿ ವಿರುದ್ಧ ಯುಪಿಗೆ 33 ರನ್‌ಗಳ ಭರ್ಜರಿ ಜಯ ತಂದುಕೊಟ್ಟಿದೆ.

20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಯುಪಿ ವಾರಿಯರ್ಸ್‌ 177 ರನ್‌ ಗಳಿಸಿತು. 178 ರನ್‌ ಗುರಿ ಬೆನ್ನತ್ತಿದ ಡೆಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. 19.3 ಓವರ್‌ಗೆ 144 ರನ್‌ ಅಷ್ಟೇ ಗಳಿಸಿ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

ಡೆಲ್ಲಿ ಪರ ಜೆಮಿಮಾ ರೋಡ್ರಿಗಸ್ ಅರ್ಧಶತಕ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು. 25 ರನ್‌ ಒಳಗಿನ ಎರಡಂಕಿ ಮತ್ತು ಒಂದಕಿ ರನ್‌ಗಳಿಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಪರೇಡ್‌ ನಡೆಸಿದರು.

ಯುಪಿ ಪರ ಕ್ರಾಂತಿ ಗೌಡ್, ಗ್ರೇಸ್ ಹ್ಯಾರಿಸ್ ತಲಾ 4 ವಿಕೆಟ್‌ ಕಬಳಿಸಿ ಬೌಲಿಂಗ್‌ನಲ್ಲಿ ಅಬ್ಬರಿಸಿದರು. ಕೊನೆ ಓವರ್‌ನ ಮೊದಲ ಮೂರು ಬಾಲ್‌ಗಳಿಗೆ ಒಂದರ ಹಿಂದೆ ಒಂದರಂತೆ ಹ್ಯಾಟ್ರಿಕ್‌ ವಿಕೆಟ್‌ ಕಿತ್ತು ಹ್ಯಾರಿಸ್‌ ಮಿಂಚಿದರು. ಚಿನೆಲ್ಲೆ ಹೆನ್ರಿ ಮತ್ತು ದೀಪ್ತಿ ಶರ್ಮಾ ತಲಾ 1 ವಿಕೆಟ್‌ ಪಡೆದರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಚಿನೆಲ್ಲೆ ಹೆನ್ರಿ 18 ಬಾಲ್‌ಗಳಿಗೆ ಅರ್ಧಶತಕ ಸಿಡಿಸಿ (62 ರನ್‌, 23 ಬಾಲ್‌, 8 ಸಿಕ್ಸರ್‌, 2 ಫೋರ್) ಮಿಂಚಿದರು.

ಕಿರಣ್ ನವಗಿರೆ 17, ತಹ್ಲಿಯಾ ಮೆಕ್‌ಗ್ರಾತ್ 24 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಕ್ಯಾಪ್ಟನ್ ದೀಪ್ತಿ ಶರ್ಮಾ 13, ಸೋಫಿ ಎಕ್ಲೆಸ್ಟೋನ್ 12,‌ ಶ್ವೇತಾ ಸೆಹ್ರಾವತ್ 11 ರನ್‌ ಗಳಿಸಿದರು. ಡೆಲ್ಲಿ ಪರ ಜೆಸ್ ಜೊನಾಸ್ಸೆನ್ 4 ವಿಕೆಟ್‌ ಕಿತ್ತು ಗಮನ ಸೆಳೆದರು. ಮರಿಜಾನ್ನೆ ಕಪ್ಪ್, ಅರುಂಧತಿ ರೆಡ್ಡಿ ತಲಾ 2 ಹಾಗೂ ಶಿಖಾ ಪಾಂಡೆ ವಿಕೆಟ್‌ ಪಡೆದರು.

Share This Article