WPL 2024: ಅಂಪೈರ್‌ ಎಡವಟ್ಟು – ಫಿಕ್ಸಿಂಗ್‌ ಹಣೆಪಟ್ಟಿ ಕಟ್ಟಿಕೊಂಡ ಮುಂಬೈ ಇಂಡಿಯನ್ಸ್‌

Public TV
2 Min Read

ಮುಂಬೈ: ಪುರುಷರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಆವೃತ್ತಿಯಲ್ಲಿ ಆಗಾಗ್ಗೆ ವಿವಾದಗಳು ಹುಟ್ಟಿಕೊಳ್ಳುತ್ತವೆ. ಅದೇ ರೀತಿ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿಯೂ (WPL 2024) ಈಗ ಭಾರೀ ವಿವಾದಗಳು ಹುಟ್ಟಿಕೊಳ್ಳಲು ಶುರುವಾಗಿದೆ. ಕಳೆದ ವರ್ಷ ಡಬ್ಲ್ಯೂಪಿಎಲ್‌ ಮೊದಲ ಆವೃತ್ತಿಯ ಫೈನಲ್‌ನಲ್ಲಿ ನೋಬಾಲ್‌ ವಿವಾದ ಎದುರಿಸಿದ್ದ ಮುಂಬೈ ಇಂಡಿಯನ್ಸ್‌ (Mumbai Indians), 2ನೇ ಆವೃತ್ತಿಯಲ್ಲಿ ಫಿಕ್ಸಿಂಗ್‌ ಹಣೆಪಟ್ಟಿಯೊಂದಿಗೆ ಮನೆಗೆ ತೆರಳಿದೆ.

ಶುಕ್ರವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡದ ವಿರುದ್ಧ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಹರ್ಮನ್‌ ಪ್ರೀತ್‌ಕೌರ್‌ ಅವರ ನಾಟೌಟ್‌ ವಿವಾದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಪಂದ್ಯದಲ್ಲಿ ಮುಂಬೈ ತಂಡ ಸೋತು ಮನೆಗೆ ತೆರಳಿದರೂ ಅಭಿಮಾನಿಗಳು (Cricket Fans) ಆಕ್ರೋಶ ಹೊರಹಾಕುವುದನ್ನ ಮುಂದುವರಿಸಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌, ಎರಡೂ ತಂಡಗಳ ಫಿಕ್ಸಿಂಗ್‌ ನಿಲ್ಲಿಸಲು ಸಾಧ್ಯವಿಲ್ಲ ಎಂದು ಆರ್‌ಸಿಬಿ ಅಭಿಮಾನಿಗಳು ಕಿಡಿ ಕಾರಿದ್ದಾರೆ.

ಹರ್ಮನ್‌ಪ್ರೀತ್‌ ಕೌರ್‌ ಅವರ ರನೌಟ್‌ ಅನ್ನು ನಾಟೌಟ್‌ ಎಂದು ಘೋಷಿಸಲಾಗಿದೆ. ಇದು ಮ್ಯಾಚ್‌ ಫಿಕ್ಸಿಂಗ್‌ ಎಂದು ಆರ್‌ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: WPLನಲ್ಲಿ ನೋಬಾಲ್‌ ವಿವಾದ – ಚಾಂಪಿಯನ್‌ ಪಟ್ಟ ಕೈತಪ್ಪಿಸಿದ ಆ ಒಂದು ಔಟ್‌

ಅಷ್ಟಕ್ಕೂ ಆಗಿದ್ದೇನು?
ಆರ್‌ಸಿಬಿ ವಿರುದ್ಧದ ಎಲಿಮಿನೇಟರ್‌ ಪಂದ್ಯದಲ್ಲಿ 10ನೇ ಓವರ್‌ ವೇಳೆಗೆ ಹರ್ಮನ್‌ಪ್ರೀತ್‌ ಕೌರ್‌ ಕ್ರೀಸ್‌ಗೆ ಬಂದಿದ್ದರು. ಈ ವೇಳೆ ಸ್ಟ್ರೈಕ್‌ನಲ್ಲಿದ್ದ ನಟಾಲಿ ಸ್ಕಿವರ್‌ ಬ್ರಂಟ್‌ ಒಂದು ರನ್‌ ಕದಿಯಲು ಯತ್ನಿಸಿದರು. ಆಗ ಸ್ಲಿಪ್‌ ಫೀಲ್ಡರ್‌ ನೇರವಾಗಿ ಕೀಪರ್‌ ಕೈಗೆ ಚೆಂಡನ್ನು ಎಸೆದರು. ವಿಕೆಟ್‌ ಕೀಪರ್‌ ರಿಚಾ ಘೋಷ್‌ ಚೆಂಡನ್ನು ಕೈಗೆ ಹಿಡಿಯುವ ವೇಳೆ ಕ್ರೀಸ್‌ನಲ್ಲಿದ್ದ ಹರ್ಮನ್‌ಪ್ರೀತ್‌ ಕೌರ್‌ ಅವರ ಬ್ಯಾಟ್‌, ಚೆಂಡು ವಿಕೆಟ್‌ಗೆ ಬಡಿಯುವ ವೇಳೆ ಕ್ರೀಸ್‌ನಿಂದ ಮೇಲೆದ್ದಿತ್ತು. ಅಂಪೈರ್‌ ಇದನ್ನು ಔಟ್‌ ಎಂದೇ ಘೋಷಿಸುತ್ತಾರೆ ಎಂದು ಆರ್‌ಸಿಬಿ ಅಭಿಮಾನಿಗಳು ಕಾದು ಕುಳಿತಿದ್ದರು. ಅಚ್ಚರಿ ತೀರ್ಪಿನಂತೆ 3ನೇ ಅಂಪೈರ್‌ ನಾಟೌಟ್‌ ಎಂದು ಘೋಷಿಸಿದರು. ಇದರಿಂದ ಅಭಿಮಾನಿಗಳು ಅಸಮಾಧಾನಗೊಂಡರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಐಪಿಎಲ್‌ ಪ್ರಿಯರಿಗೆ ಶಾಕ್‌!

ಮೊದಲ ಆವೃತ್ತಿಯಲ್ಲೇ ನೋಬಾಲ್‌ ವಿವಾದ:
ಮೊದಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ಟ್ರೋಫಿ ಗೆದ್ದ ಬಳಿಕ ನೋಬಾಲ್‌ ವಿವಾದ ಹುಟ್ಟಿಕೊಂಡಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಡೆದ ಫೈನಲ್‌ನಲ್ಲಿ ಕ್ಯಾಪಿಟಲ್ಸ್‌ ಪರ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಶಫಾಲಿ ವರ್ಮಾ (Shafali Verma) ಔಟ್ ತೀರ್ಪು ವಿವಾದಕ್ಕೆ ಕಾರಣವಾಗಿತ್ತು. ಮುಂಬೈ ಇಂಡಿಯನ್ಸ್‌ ಬೌಲರ್‌ ಇಸ್ಸಿ ವಾಂಗ್‌ 2ನೇ ಓವರ್‌ನಲ್ಲಿ ಎಸೆದ 3ನೇ ಎಸೆತವು ಹೈ-ಫುಲ್‌ಟಾಸ್ ಆಗಿತ್ತು. ಸ್ಪಷ್ಟವಾಗಿ ಅದು ವಿಕೆಟ್‌ಗಿಂತಲೂ ಮೇಲ್ಭಾಗದಲ್ಲಿ‌ತ್ತು. ಟಿವಿ ಅಂಪೈರ್‌ ರಿವಿವ್ಯೂನಲ್ಲೂ ಇದು ಸ್ಪಷ್ಟವಾಗಿ ಗೋಚರಿಸಿತ್ತು. ಆದರೂ ಶಫಾಲಿ ವರ್ಮಾಗೆ ಔಟ್ ತೀರ್ಪು ನೀಡಲಾಯಿತು. ಇದರಿಂದ ಅಸಮಾಧಾನಗೊಂಡಿದ್ದ ಕ್ರಿಕೆಟ್‌ ಅಭಿಮಾನಿಗಳು ಮುಂಬೈ ತಂಡದ ಪರ ಅಂಪೈರ್‌ ಸೇರಿ 13 ಜನ ಫೀಲ್ಡಿಂಗ್‌ಗೆ ಇಳಿಯುತ್ತಾರೆ ಎಂದು ಟೀಕೆ ವ್ಯಕ್ತವಾಗಿತ್ತು.

Share This Article