WPL 2026: ಕೊನೆ ಹಂತದಲ್ಲಿ ಎಡವಿದ ಡೆಲ್ಲಿ; ಗುಜರಾತ್‌ಗೆ 4 ರನ್‌ಗಳ ರೋಚಕ ಜಯ

0 Min Read

– ಸೋಫಿ ಡಿವೈನ್ ಬೆಂಕಿ ಬ್ಯಾಟಿಂಗ್‌ಗೆ ಒಲಿದ ಗೆಲುವು

ನವಿ ಮುಂಬೈ: ಸೋಫಿ ಡಿವೈನ್ ಬೆಂಕಿ ಬ್ಯಾಟಿಂಗ್‌ ಹಾಗೂ ಜವಾಬ್ದಾರಿಯುತ ಬೌಲಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್‌ ಜೈಂಟ್ಸ್‌ 4 ರನ್‌ಗಳ ರೋಚಕ ಜಯ ಸಾಧಿಸಿದೆ. ಡಬ್ಲ್ಯೂಪಿಎಲ್‌ನಲ್ಲಿ ಡೆಲ್ಲಿ 2 ಬ್ಯಾಕ್‌ ಟು ಬ್ಯಾಕ್‌ ಸೋಲನುಭವಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ 20 ಓವರ್‌ಗಳಿಗೆ ಆಲೌಟ್‌ ಆಗಿ 209 ರನ್‌ ಗಳಿಸಿತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ನಾಲ್ಕು ರನ್‌ಗಳಿಂದ ಸೋತಿತು.

ಮಹಿಳೆಯರ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿತು. ಓಪರನ್‌ ಲಿಜೆಲ್ ಲೀ (86 ರನ್‌, 54 ಬಾಲ್‌, 12 ಫೋರ್‌, 3 ಸಿಕ್ಸರ್‌) ಆರಂಭದಲ್ಲೇ ಹೊಡಿಬಡಿ ಆಟದಿಂದ ಗಮನ ಸೆಳೆದರು. ಈ ಮಧ್ಯೆ ಶೆಫಾಲಿ ವರ್ಮಾ ಕೇವಲ 14 ರನ್‌ ಗಳಿಸಿ ನಿರ್ಗಮಿಸಿದರು.

ಲಿಜೆಲ್ ಲೀ ಮತ್ತು ಲಾರಾ ವೋಲ್ವಾರ್ಡ್ 90 ರನ್‌ಗಳ ಜೊತೆಯಾಟ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿತ್ತು. ಲೀ 86 ರನ್‌ ಗಳಿಸಿ ಔಟಾದರು. ವೋಲ್ವಾರ್ಡ್‌ಗೆ ಚಿನೆಲ್ಲೆ ಹೆನ್ರಿ (7) ಸಾಥ್‌ ನೀಡುವಲ್ಲಿ ವಿಫಲವಾದರು. ನಂತರ ಬಂದ ಜೆಮಿಮಾ ರೋಡ್ರಿಗಸ್ 15 ರನ್‌ಗಳಿಗೆ ಔಟಾಗಿದ್ದು ತಂಡಕ್ಕೆ ದೊಡ್ಡ ಆಘಾತ ನೀಡಿತು. ಈ ನಡುವೆ ವೋಲ್ವಾರ್ಡ್‌ ಅವರ ಫೋರ್‌, ಸಿಕ್ಸರ್‌ಗಳ ಆಟ ಗುಜರಾತ್‌ ತಂಡವನ್ನು ಕಾಡಿತ್ತು. ನಿರ್ಣಾಯಕ ಘಟ್ಟದಲ್ಲಿ ವೋಲ್ವಾರ್ಡ್‌ ಔಟಾಗಿದ್ದು, ತಂಡದ ಸೋಲಿಗೆ ಕಾರಣವಾಯಿತು.

ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಸೋಫಿ ಡಿವೈನ್ (95 ರನ್‌, 42 ಬಾಲ್‌, 7 ಫೋರ್‌, 8 ಸಿಕ್ಸರ್)‌ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಆಶ್ಲೀ ಗಾರ್ಡ್ನರ್ 49 ರನ್‌ ಗಳಿಸಿ ಅರ್ಧಶತಕ ವಂಚಿತರಾದರು. ಇಬ್ಬರ ಆಟ ತಂಡದ ಗೆಲುವಿಗೆ ಕೊಡುಗೆ ನೀಡಿತು. ಬೆತ್ ಮೂನಿ 19, ಅನುಷ್ಕಾ ಶರ್ಮಾ 13, ಕಾಶ್ವೀ ಗೌತಮ್ 14 ರನ್‌ ಗಳಿಸಿದರು.

ಡೆಲ್ಲಿ ಪರ ನಂದನಿ ಶರ್ಮಾ 5 ವಿಕೆಟ್‌ ಕಿತ್ತು ಬೌಲಿಂಗ್‌ನಲ್ಲಿ ಮೋಡಿ ಮಾಡಿದರು. ಶ್ರೀ ಚರಣಿ, ಚಿನೆಲ್ಲೆ ಹೆನ್ರಿ ತಲಾ 2 ವಿಕೆಟ್‌ ಕಿತ್ತು. ಶೆಫಾಲಿ ವರ್ಮಾ 1 ವಿಕೆಟ್‌ ಪಡೆದರು.

Share This Article