ಕಳಪೆ ಬೌಲಿಂಗ್‌, ಬ್ಯಾಟಿಂಗ್‌ನಿಂದ RCBಗೆ ಸೋಲು – WPL 2ನೇ ಆವೃತ್ತಿಯಲ್ಲಿ ಗುಜರಾತ್‌ಗೆ ಚೊಚ್ಚಲ ಜಯ

Public TV
2 Min Read

– ಜಾರ್ಜಿಯಾ ವೇರ್ಹ್ಯಾಮ್ ಸ್ಫೋಟಕ ಬ್ಯಾಟಿಂಗ್‌ ವ್ಯರ್ಥ

ನವದೆಹಲಿ: ಕಳಪೆ ಬೌಲಿಂಗ್‌, ಅಗ್ರ‌ ಕ್ರಮಾಂಕದ ಬ್ಯಾಟರ್‌ಗಳ ಕಳಪೆ ಬ್ಯಾಟಿಂಗ್‌ನಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ ಗುಜರಾತ್‌ ಜೈಂಟ್ಸ್‌ ಮಹಿಳಾ ತಂಡದ ವಿರುದ್ಧ ಸೋಲನುಭವಿಸಿದೆ. ಆದ್ರೆ ಕಳೆದ 4 ಪಂದ್ಯಗಳಲ್ಲೂ ಸೋಲಿನಿಂದ ಕಂಗೆಟ್ಟಿದ್ದ ಗುಜರಾತ್‌ ತಂಡ 19 ರನ್‌ಗಳ ಜಯ ಸಾಧಿಸಿ, WPLನ 2ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆದಿದೆ.

ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಜೈಂಟ್ಸ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 199 ರನ್‌ ಬಾರಿಸಿತು. 200 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 180 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಚೇಸಿಂಗ್‌ ಆರಂಭಿಸಿದ ಆರ್‌ಸಿಬಿ ಸ್ಫೋಟಕ ಪ್ರದರ್ಶನ ನೀಡುವ ಉತ್ಸಾಹದಲ್ಲಿ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಅಗ್ರಕ್ರಮಾಂಕದ ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ಕೈಚೆಲ್ಲಿದರು. ಆರಂಭಿಕ ಆಟಗಾರ್ತಿ ಸಬ್ಬಿನೇನಿ ಮೇಘನಾ 4 ರನ್‌ಗಳಿಗೆ ಕೈಕೊಟ್ಟರೆ, ಸ್ಮೃತಿ ಮಂಧಾನ, ಎಲ್ಲಿಸ್‌ ಪೆರ್ರಿ ತಲಾ 24 ರನ್‌, ಸೋಫಿ ಡಿವೈನ್‌ 23 ರನ್‌, ರಿಚಾ ಘೋಷ್‌ 30 ರನ್‌ ಗಳಿಸಿದ್ದರು. ಕೊನೆಯಲ್ಲಿ ಆರ್ಭಟಿಸಿದ ಜಾರ್ಜಿಯಾ ವೇರ್ಹ್ಯಾಮ್ 21‌ ಎಸೆತಗಳಲ್ಲಿ 48 ರನ್‌ ಸಿಡಿಸಿ, ಗೆಲುವಿನ ಭರವಸೆ ಮೋಡಿಸಿದ್ದರು. ಅಷ್ಟರಲ್ಲಿ 22ನೇ ಎಸೆತದಲ್ಲೇ ರನೌಟ್‌ಗೆ ತುತ್ತಾದರು. ಇದರೊಂದಿಗೆ ಆರ್‌ಸಿಬಿ ಗೆಲುವಿನ ಕನಸು ಮಣ್ಣುಪಾಲಾಯಿತು. ಸೋಫಿ ಮೊಲಿನೆಕ್ಸ್ 3 ರನ್‌ ಗಳಿಸಿದ್ರೆ ಸಿಮ್ರನ್‌ ಬಹದ್ದೂರ್‌ 1 ರನ್‌ , ಏಕ್ತಾ ಬಿಷ್ತ್ 12 ರನ್‌ ಗಳಿಸಿ ಔಟಾದರು. ಅಂತಿಮವಾಗಿ ಆರ್‌ಸಿಬಿ 180 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಗುಜರಾತ್‌ ತಂಡ ಆರಂಭದಲ್ಲೇ ಹೊಡಿಬಡಿ ಆಟಕ್ಕೆ ಮುಂದಾಯಿತು. ಆರ್‌ಸಿಬಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದ ಲಾರಾ ವೊಲ್ವಾರ್ಡ್ಟ್, ಬೆತ್ ಮೂನಿ ಜೋಡಿ 13 ಓವರ್‌ಗಳಲ್ಲಿ 140 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು. ಲಾರಾ 5 ಎಸೆತಗಳಲ್ಲಿ ಸ್ಫೋಟಕ 76 ರನ್‌ (13 ಬೌಂಡರಿ) ಸಿಡಿಸಿ ರನೌಟ್‌ಗೆ ತುತ್ತಾದರೆ, ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದ ಬೆತ್‌ ಮೂನಿ 51 ಎಸೆತಗಳಲ್ಲಿ 85 ರನ್‌ (12 ಬೌಂಡರಿ, 1 ಸಿಕ್ಸರ್‌) ಚಚ್ಚಿದರು. ಇನ್ನುಳಿದಂತೆ ಫೋಬೆ ಲಿಚ್‌ಫೀಲ್ಡ್ 18 ರನ್‌ ಗಳಿಸಿದ್ರೆ, ದಯಾಳನ್ ಹೇಮಲತಾ, ವೇದಾ ಕೃಷ್ಣಮೂರ್ತಿ ಮತ್ತು ಕ್ಯಾಥರಿನ್ ಬ್ರೈಸ್ ತಲಾ ಒಂದೊಂದು ರನ್‌ ಗಳಿಸಿದರು.

ಆರ್‌ಸಿಬಿ ಪರ ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್ ತಲಾ ಒಂದೊಂದು ವಿಕೆಟ್‌ ಕಿತ್ತರು.

Share This Article