ಬಿಜೆಪಿ ಹೈಕಮಾಂಡ್ ನಿರ್ಧಾರದಿಂದ ನನಗೆ ತೃಪ್ತಿಯಿದೆ: ಶಿವರಾಜ್‌ ಸಿಂಗ್‌ ಚೌಹಾಣ್

Public TV
1 Min Read

ಭೋಪಾಲ್:‌ ತನಗಾಗಿ ಏನನ್ನಾದರೂ ಕೇಳುವುದಕ್ಕಿಂತ ಸಾಯುವುದೇ ಲೇಸು, ಅದಕ್ಕಾಗಿ ನಾನು ದೆಹಲಿಗೆ ಹೋಗುವುದಿಲ್ಲ. ಬಿಜೆಪಿ ಹೈಕಮಾಂಡ್ ನಿರ್ಧಾರದಿಂದ ನನಗೆ ತೃಪ್ತಿಯಿದೆ ಎಂದು ಮಧ್ಯಪ್ರದೇಶದ ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ (Shivaraj Singh Chouhan) ಹೇಳಿದ್ದಾರೆ.

ಇಂದು ತಮ್ಮ ವಿದಾಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಗದ್ಗದಿತರಾದರು. ಮೋಹನ್‌ ಯಾದವ್ ಅವರನ್ನು ಸಿಎಂ ಆಯ್ಕೆ ಮಾಡಿರುವ ಬಿಜೆಪಿಯ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ಹೇಳಿದರು.

ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav) ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ನಡೆಯುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ಈ ಮೂಲಕ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಮಧ್ಯಪ್ರದೇಶವು ಹೊಸ ಛಾಪು ಮೂಡಿಸುತ್ತದೆ. ಇದಕ್ಕಾಗಿ ನಾನು ಅವರನ್ನು ಬೆಂಬಲಿಸುತ್ತೇನೆ ಎಂದರು.

ಬಿಜೆಪಿ (BJP) ಹೈಕಮಾಂಡ್ ನಿರ್ಧಾರದಿಂದ ನನಗೆ ತೃಪ್ತಿಯಿದೆ. 2005 ರಲ್ಲಿ ನಾನು ಮುಖ್ಯಮಂತ್ರಿಯಾದೆ. ಉಮಾಭಾರತಿ ಅವರ ಕಠಿಣ ಪರಿಶ್ರಮದಿಂದ ಅಂದು ಸರ್ಕಾರ ರಚನೆಯಾಗಿತ್ತು. ನಾನು ಈಗ ನನಗಾಗಿ ಏನನ್ನಾದರೂ ಕೇಳುವುದಕ್ಕಿಂತ ಸಾಯುವುದೇ ಮೇಲು. ಇವತ್ತು ನಾನು ಇಲ್ಲಿಂದ ವಿದಾಯ ಹೇಳುತ್ತಿದ್ದೇನೆ. ನನ್ನ ಹೃದಯ ಸಂತೋಷ ಮತ್ತು ತೃಪ್ತಿಯಿಂದ ತುಂಬಿದೆ ಎಂದು ಹೇಳಿದರು.

ಸಾರ್ವಜನಿಕರೊಂದಿಗಿನ ನನ್ನ ಸಂಬಂಧವು ಯಾವಾಗಲೂ ಚೆನ್ನಾಗಿ ಇರುತ್ತದೆ. ನಾನು ಈ ಬಾಂಧವ್ಯವನ್ನು ಕಟ್‌ ಮಾಡಲ್ಲ, ನನ್ನ ಉಸಿರಿರುವವರೆಗೂ  ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಲು ನಾನು ಶ್ರಮಿಸುತ್ತೇನೆ ಎಂದು ಅವರು ಹೇಳಿದರು.

ಚೌಹಾಣ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಂತೆಯೇ ಸೋಮವಾರ ಅವರ ಮಹಿಳಾ ಅಭಿಮಾನಿಗಳು ಭೇಟಿಯಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ನಾವು ನಿಮಗೆ ಮತ ನೀಡಿದ್ದೇವೆ, ನೀವು ರಾಜೀನಾಮೆ ನೀಡಬಾರದು ಎಂದು ಕಣ್ಣೀರು ಹಾಕಿದರು. ಈ ವೇಳೆ ಚೌಹಾಣ್‌ ಅವರು ಮಹಿಳಾ ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

Share This Article