ಮಸೂದ್ ಅಜರ್‌ಗೆ ಸಾಧ್ವಿ ಶಾಪ ಹಾಕಿದ್ರೆ ಸರ್ಜಿಕಲ್ ಸ್ಟ್ರೈಕ್ ಅಗತ್ಯವೇ ಬೀಳಲ್ಲ: ದಿಗ್ವಿಜಯ್ ಸಿಂಗ್

Public TV
2 Min Read

ಭೋಪಾಲ್: ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್ ಅವರು ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ಗೆ ಶಾಪ ಹಾಕಿದರೆ ಸರ್ಜಿಕಲ್ ಸ್ಟ್ರೈಕ್ ಅಗತ್ಯವೇ ಬೀಳಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ಮಧ್ಯ ಪ್ರದೇಶದ ಭೋಪಾಲ್‍ನ ಅಶೋಕ್ ಗಾರ್ಡನ್ ಬಳಿ ಪ್ರಚಾರ ನಡೆಸಿ ಮಾತನಾಡಿದ ಅವರು, ತಾವು ಶಾಪ ಹಾಕಿದ್ದರಿಂದಲೇ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಸಾವನ್ನಪ್ಪಿದ್ದರು ಎಂದು ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಹೇಳಿದ್ದಾರೆ. ದೇಶದ ಭದ್ರತೆಗಾಗಿ ಉಗ್ರರ ಜೊತೆ ಹೋರಾಡಿ ಹುತಾತ್ಮರಾದ ಕರ್ಕರೆ ಅವರ ಬಗ್ಗೆ ಸಾಧ್ವಿ ಸಿಂಗ್ ಹಗುರವಾಗಿ ಮಾತನಾಡಿದ್ದಾರೆ ಎಂದು ಗುಡುಗಿದರು. ಇದನ್ನೂ ಓದಿ: ಹೇಮಂತ್ ಕರ್ಕರೆ ಸಾವಿನ ಬಗ್ಗೆ ಸಾಧ್ವಿ ಪ್ರಜ್ಞಾಸಿಂಗ್ ಹೇಳಿಕೆ ವೈಯಕ್ತಿಕ: ಬಿಜೆಪಿ 

ಉಗ್ರರು ಬೆಟ್ಟದಲ್ಲಿ ಅಡಗಿ ಕುಳಿತಿದ್ದರೂ ನಾವು ಹೊಡೆದು ಹಾಕುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಪುಲ್ವಾಮಾ, ಪಠಾನ್‍ಕೋಟ್ ಹಾಗೂ ಉರಿ ದಾಳಿ ನಡೆದಾಗ ಪ್ರಧಾನಿ ಮೋದಿ ಎಲ್ಲಿದ್ದರು? ಇಂತಹ ದಾಳಿಯನ್ನು ಯಾಕೆ ಮೋದಿ ತಡೆಯಲಿಲ್ಲ ಎಂದು ದಿಗ್ವಿಜಯ್ ಅವರು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

ದೇಶದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರು ಸಹೋದರರಂತೆ ಬದುಕುತ್ತಿದ್ದಾರೆ. ಹಿಂದೂಗಳು ಒಗ್ಗಾಟ್ಟಾಗಿ ಇರಬೇಕು ಎಂದು ಅವರು ಹೇಳುತ್ತಿದ್ದಾರೆ. ದೇಶವನ್ನು ಸುಮಾರು 500 ವರ್ಷಗಳ ಕಾಲ ಮುಸ್ಲಿಂ ರಾಜಮನೆತಗಳು ಆಳಿವೆ. ಆದರೆ ಇದು ಯಾವುದೇ ಧರ್ಮದ ಮೇಲೆ ಪರಿಣಾಮ ಬೀರಿಲ್ಲ. ಹೀಗಾಗಿ ರಾಜಕೀಯ ಲಾಭಕ್ಕೆ ಧರ್ಮ ಬಳಸಿಕೊಳ್ಳುವವರ ಬಗ್ಗೆ ಎಚ್ಚರ ವಹಿಸಿ ಎಂದು ಬಿಜೆಪಿ ನಾಯಕ ವಿರುದ್ಧ ಗುಡುಗಿದರು.

ಹಿಂದೂ ಧರ್ಮದಲ್ಲಿ “ಹರ ಹರ ಮಹದೇವ್” ಎಂದು ಹೇಳಲಾಗುತ್ತದೆ. ಆದರೆ ಬಿಜೆಪಿಯವರು ”ಹರ ಹರ ಮೋದಿ” ಎಂದು ಹೇಳುವ ಮೂಲಕ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.

ಭೋಪಾಲ್ ಲೋಕಸಭಾ ಕ್ಷೇತ್ರದ ಮತದಾನವು ಮೇ 12ರಂದು ನಡೆಯಲಿದೆ. ಫಲಿತಾಂಶವು ಮೇ 23ರಂದು ಹೊರ ಬೀಳಲಿದೆ. ಈ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಹಿರಿಯ ಮುಖಂಡ ದಿಗ್ವಜಯ್ ಸಿಂಗ್ ಸ್ಪರ್ಧೆ ಮಾಡಿದರೆ, ಬಿಜೆಪಿಯಿಂದ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಕಣಕ್ಕೆ ಇಳಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *