ದಾಖಲೆಯ ಬರೋಬ್ಬರಿ 122 ಕೋಟಿಗೆ ಫ್ಯಾನ್ಸಿ ನಂಬರ್‌ ಸೇಲ್‌

Public TV
1 Min Read

ದುಬೈ: ಕೋಟ್ಯಂತರ ರೂ. ನೀಡಿ ದುಬಾರಿ ಬೆಲೆಯ ಕಾರುಗಳನ್ನು ಶ್ರೀಮಂತರು ಖರೀದಿಸುವುದು ನಿಮಗೆ ಗೊತ್ತೇ ಇದೆ. ಆದರೆ ದುಬೈಯಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 122 ಕೋಟಿ ರೂ. ನೀಡಿ ಫ್ಯಾನ್ಸಿ ನಂಬರ್‌ (Fancy Number) ಖರೀದಿ ಮಾಡಿ ವಿಶ್ವದಾಖಲೆ (World Record) ನಿರ್ಮಿಸಿದ್ದಾರೆ.

ವಿಐಪಿ ನಂಬರ್‌ ʼP 7′ ದಾಖಲೆಯ 55 ದಶಲಕ್ಷ ದಿರ್ಹಾಮ್‌ (ಅಂದಾಜು 122.6 ಕೋಟಿ ರೂ.) ಹರಾಜಾಗಿದೆ. ಫ್ಯಾನ್ಸಿ ʼP 7′ ಸಂಖ್ಯೆಗೆ ಮೂಲಬೆಲೆ 15 ದಶಲಕ್ಷ ದಿರ್ಹಾಮ್‌ ನಿಗದಿ ಮಾಡಲಾಗಿತ್ತು. ಆರಂಭದ ಕೆಲವೇ ನಿಮಿಷಗಳಲ್ಲಿಇದು 30 ದಶಲಕ್ಷ ದಿರ್ಹಾಮ್‌ಗೆ ಹೋಗಿತ್ತು. ಕೊನೆಗೆ ಇದು 55 ದಶಲಕ್ಷ ದಿರ್ಹಾಮ್‌ ಮಾರಾಟವಾಗಿದೆ. ಇಷ್ಟೊಂದು ಹಣವನ್ನು ಖರ್ಚು ಮಾಡಿ ಬಿಡ್‌ ಗೆದ್ದವರು ಯಾರು ಎನ್ನುವುದು  ಬಹಿರಂಗವಾಗಿಲ್ಲ. ಇದನ್ನೂ ಓದಿ: Public TV Explainer – ಮೋದಿಯನ್ನು ಫಾಲೋ ಮಾಡಿದ ಮಸ್ಕ್‌: ಟೆಸ್ಲಾ ಕಾರು ಇನ್ನೂ ಭಾರತಕ್ಕೆ ಬಂದಿಲ್ಲ ಯಾಕೆ?

ಯುಎಇ ಪ್ರಧಾನಿ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ರಂಜಾನ್‌ ಸಮಯದಲ್ಲಿ 100 ಕೋಟಿ ಉಚಿತ ಊಟ ವಿತರಣೆ ಮಾಡಲು ಮುಂದಾಗಿದ್ದು ಈ ಸೇವೆಗೆ ಸಹಾಯ ನೀಡಲು ಎಮಿರೆಟ್ಸ್‌ ಸಂಸ್ಥೆ ಫ್ಯಾನ್ಸಿ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆಗಳನ್ನು ಹರಾಜು ಹಾಕಿತ್ತು. ಈ ಹರಾಜಿನ ಮೂಲಕ ಒಟ್ಟು 100 ದಶಲಕ್ಷ ದಿರ್ಹಾಮ್‌ (ಅಂದಾಜು 220 ಕೋಟಿ ರೂ.) ಸಂಗ್ರಹಿಸಲಾಗಿದೆ.

2008ರಲ್ಲಿ ಅಬುಧಾಬಿಯಲ್ಲಿ ʼNo. 1ʼ ಪ್ಲೇಟ್‌ 52.22 ದಶಲಕ್ಷ ದಿರ್ಹಾಮ್‌ಗೆ ಬಿಡ್‌ ಆಗಿತ್ತು. ಇದು ಇಲ್ಲಿಯವರೆಗೆ ದುಬಾರಿ ಬೆಲೆಗೆ ಹರಾಜಾದದ ಫ್ಯಾನ್ಸಿ ನಂಬರ್‌ ಆಗಿತ್ತು. ಈಗ ಈ ದಾಖಲೆಯನ್ನು ʼP 7′ ಮುರಿದಿದೆ.

Share This Article