ವಿಶ್ವದ ಕೊನೆಯ ಗಂಡು ಬಿಳಿ ಘೇಂಡಾಮೃಗಕ್ಕೆ ದಯಾಮರಣ

Public TV
1 Min Read

ನೈರೋಬಿ: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವಿಶ್ವದ ಕೊನೆಯ ಗಂಡು ಬಿಳಿ ಘೇಂಡಾಮೃಗ ಸೋಮವಾರದಂದು ಮೃತಪಟ್ಟಿದೆ.

ಸುಡಾನ್ ಹೆಸರಿನ ಈ ಘೇಂಡಾಮೃಗ ಹಲವು ಸೋಂಕುಗಳಿಂದ ಬಳಲುತ್ತಿತ್ತು. ಆದ್ರೆ ತೀವ್ರ ಅನಾರೋಗ್ಯ ಸಹಿಸುವ ಶಕ್ತಿ ಇಲ್ಲದ ಕಾರಣ ಪಶುವೈದ್ಯರ ತಂಡ ಸೋಮವಾರದಂದು ಕೀನ್ಯಾದಲ್ಲಿ ಸುಡಾನ್ ಗೆ ದಯಾಮರಣ ಕಲ್ಪಿಸಿದ್ದಾರೆ. ನಶಿಸುತ್ತಿರುವ ಈ ಘೇಂಡಾಮೃಗ ಜಾತಿಯನ್ನ ಉಳಿಸಲು ವೈದ್ಯರು ವರ್ಷಾನುಗಟ್ಟಲೆ ಹೋರಾಡಿದ್ದರು. ಇದೀಗ ಬಿಳಿ ಘೇಂಡಾಮೃಗಗಳಲ್ಲಿ ಕಟ್ಟ ಕಡೆಯ ಗಂಡು ಸಂತತಿ ಸಾವನ್ನಪ್ಪಿದ್ದು, ಇದರ ಮಗಳು ನಜಿನ್ ಹಾಗೂ ಮೊಮ್ಮಗಳು ಫತು ಮಾತ್ರ ಉಳಿದುಕೊಂಡಿವೆ. ಬಿಳಿ ಘೇಂಡಾಮೃಗ ಸಂತತಿಯನ್ನ ನಶಿಸಿಹೋಗದಂತೆ ತಡೆಯಲು ಸಂರಕ್ಷಿಸಲ್ಪಟ್ಟ ವೀರ್ಯದಿಂದ ಕೃತಕ ಗರ್ಭಧಾರಣೆಯೊಂದೇ ಈಗ ಕೊನೆಯ ಅಸ್ತ್ರವಾಗಿದೆ.

 

ಮೃತ ಸುಡಾನ್‍ಗೆ 45 ವರ್ಷ ವಯಸ್ಸಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಇದರ ಉಪಜಾತಿಯ ಘೇಂಡಾಮೃಗಳೊಂದಿಗೆ ಮಿಲನ ಕ್ರಿಯೆ ನಡೆಸುವ ಯತ್ನವೂ ವಿಫಲವಾಗಿತ್ತು. ಈ ಹಿಂದೆ ಎರಡನೇ ಕೊನೆಯ ಗಂಡು ಬಿಳಿ ಘೇಂಡಾಮೃಗ ಸುನಿ ಹೃದಯಾಘಾತದಿಂದ 2014ರಲ್ಲಿ ಮೃತಪಟ್ಟಿತ್ತು. ಸುಡಾನ್ ಮತ್ತು ಸುನಿ ಎರಡನ್ನೂ 2009ರಲ್ಲಿ ಸೆಝ್ ರಿಪಬ್ಲಿಕ್‍ ನ ಮೃಗಾಲಯದಿಂದ ಕೀನ್ಯಾದ ಒಲ್ ಪೆಜೆತಾ ಕಂನ್ಸರ್ವೆನ್ಸಿಗೆ ಕರೆತರುವ ವೇಳೆಗೆ ಎರಡೂ ಪ್ರಾಣಿಗಳಿಗೆ ಸಂತಾನೋತ್ಪತ್ತಿಯ ವಯಸ್ಸು ಮೀರಿತ್ತು. ಇದೀಗ ಸುಡಾನ್ ನ ಮರಣದಿಂದ ಒಲ್ ಪೆಜೆತಾದ ಸಿಬ್ಬಂದಿ ದುಃಖಿತರಾಗಿದ್ದಾರೆ.

ವಿಶ್ವದಾದ್ಯಂತ ಬೇಟೆಯಾಡುವಿಕೆಯಿಂದಾಗಿ ಘೇಂಡಾಮೃಗಗಳು ವಿನಾಶದ ಅಂಚಿನಲ್ಲಿರುವ ಹೊತ್ತಲ್ಲೇ ಸುಡಾನ್ ಸಾವನ್ನಪ್ಪಿದೆ. ಚೀನಾದ ಸಾಂಪ್ರದಾಯಿಕ ಔಷಧಿಗಳ ತಯಾರಿಕೆಗಾಗಿ ಘೇಂಡಾಮೃಗಗಳ ಕೊಂಬಿಗೆ ಬಹಳ ಬೇಡಿಕೆ ಇದ್ದು ಅವುಗಳ ಬೆಲೆಯೂ ಹೆಚ್ಚಿದೆ. ಹಾಗೇ ಯೆಮೆನಿ ಪುರುಷರು ಘೇಂಡಾಮೃಗದ ಕೊಂಬನ್ನ ತಮ್ಮ ಕಠಾರಿಗೆ ಅಲಂಕಾರಿಕ ಅಂಗವಾಗಿ ಬಳಸುತ್ತಾರೆ. ಜಗತ್ತಿನಾದ್ಯಂತ ಈಗ 5 ವಿವಿಧ ಜಾತಿಯ 30 ಸಾವಿರ ಘೇಂಡಾಮೃಗಗಳು ಮಾತ್ರ ಬದುಕುಳಿದಿವೆ. ಇದರಲ್ಲಿ ಇಂಡೋನೇಷ್ಯಾದಲ್ಲಿ ಸುಮಾತ್ರನ್ ಹಾಗೂ ಜಾವನ್ ರೈನೋಸ್ ಎಂಬ ಎರಡು ಜಾತಿಯ 100 ಘೇಂಡಾಮೃಗಗಳಿವೆ.

Share This Article
Leave a Comment

Leave a Reply

Your email address will not be published. Required fields are marked *