ವಿಶ್ವದ ದೊಡ್ಡ ಕಂಟೇನರ್‌ ಹಡಗು ವಿಳಿಂಜಂ ಬಂದರಿಗೆ ಆಗಮನ

Public TV
3 Min Read

ತಿರುವನಂತಪುರಂ: ವಿಶ್ವದ ಅತಿದೊಡ್ಡ ಕಂಟೇನರ್ ಹಡಗು ಎಂಎಸ್‌ಸಿ ಐರಿನಾ (Mediterranean Shipping Company IRINA) ಸೋಮವಾರ ಬೆಳಿಗ್ಗೆ ವಿಳಿಂಜಂ ಅಂತರರಾಷ್ಟ್ರೀಯ ಬಂದರಿಗೆ (Vizhinjam International Seaport) ಆಗಮಿಸಿದೆ.

MSC IRINA ಸೋಮವಾರ ಬೆಳಿಗ್ಗೆ 8 ಗಂಟೆಗೆ ವಿಳಿಂಜಂ ಬಂದರಿಗೆ ಆಗಮಿಸಿದ್ದು, ಜಲ ಗೌರವ ನೀಡುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಎಂಎಸ್‌ಸಿ ಐರಿನಾ 24,346 TEU ಸಾಮರ್ಥ್ಯವನ್ನು ಹೊಂದಿದ್ದು  ಮಂಗಳವಾರದವರೆಗೆ ಈ ಬಂದರಿನಲ್ಲಿ ತಂಗುವ ನಿರೀಕ್ಷೆಯಿದೆ.

399.9 ಮೀಟರ್ ಉದ್ದ ಮತ್ತು 61.3 ಮೀಟರ್ ಅಗಲವಿರುವ ಈ ಹಡಗು  FIFA ನಿಗದಿ ಮಾಡಿದ  ಫುಟ್‌ಬಾಲ್ ಮೈದಾನಕ್ಕಿಂತ ಸರಿಸುಮಾರು ನಾಲ್ಕು ಪಟ್ಟು ಉದ್ದವನ್ನು ಹೊಂದಿದೆ.

24,346 TEU ಸಾಮರ್ಥ್ಯವಿರುವ ವಿಶ್ವದ ಅತಿದೊಡ್ಡ ಕಂಟೇನರ್ ಹಡಗಾಗಿರುವ MSC ಐರಿನಾವನ್ನು ನಮ್ಮ ವಿಳಿಂಜಂ ಬಂದರಿಗೆ ಸ್ವಾಗತಿಸಲು ಹೆಮ್ಮೆಪಡುತ್ತೇವೆ. ದಕ್ಷಿಣ ಏಷ್ಯಾದ ಬಂದರಿಗೆ ಮೊದಲ ಬಾರಿ ಆಗಮಿಸಿದೆ. ಜಾಗತಿಕ ಟ್ರಾನ್ಸ್‌ಶಿಪ್‌ಮೆಂಟ್‌ನಲ್ಲಿ ಪ್ರಮುಖ ದೇಶವಾಗಿ ಭಾರತ ಹೊರಹೊಮ್ಮಲು ಇದೊಂದು ದೊಡ್ಡ ಮೈಲಿಗಲ್ಲು ಎಂದು ಅದಾನಿ ಬಂದರಿನ ವ್ಯವಸ್ಥಾಪಕ ನಿರ್ದೇಶಕ ಕರಣ್‌ ಅದಾನಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Kerala | ಕೋಝಿಕ್ಕೋಡ್‌ನ ಬೇಪೋರ್ ಕರಾವಳಿಯಲ್ಲಿ ಸರಕು ಹಡಗಿಗೆ ಬೆಂಕಿ

TEU ಎಂದರೇನು?
Twenty-Foot Equivalent Unit ಅನ್ನು TEU ಎಂದು ಕರೆಯಲಾಗುತ್ತದೆ. ಇದನ್ನು ಸುಲಭವಾಗಿ ಹೇಳುವುದಾರೆ 20 ಅಡಿ ಉದ್ದ, 8 ಅಡಿ ಅಗಲ ಮತ್ತು 9 ಅಡಿ ಎತ್ತರದ ಕಂಟೇನರ್ ಒಂದು TEU ಅಂತ ಕರೆಯಲಾಗುತ್ತದೆ. 24 ಸಾವಿರ ಟಿಇಯು ಅಂದರೆ 24 ಸಾವಿರ ಕಂಟೇನರ್‌ ಹೊಂದಿರುವ ಹಡಗನ್ನು ವಿಳಿಂಜಂ ಬಂದರಲ್ಲಿ ಡಾಕ್‌ ಮಾಡಬಹುದು. ಕಳೆದ ತಿಂಗಳು ಟರ್ಕಿಯ ಹಡಗು ಇಲ್ಲಿ ಡಾಕ್‌ ಆಗಿತ್ತು. ಈ ಹಡಗು 400 ಮೀಟರ್‌ ಉದ್ದ, 61 ಮೀಟರ್‌ ಅಗಲವನ್ನು ಹೊಂದಿತ್ತು. ಇದರಲ್ಲಿ 24 ಸಾವಿರದ 300 ಕಂಟೇನರ್‌ ಇತ್ತು.

ವಿಳಿಂಜಂ ಬಂದರಿನ ವಿಶೇಷತೆ ಏನು?
ಭಾರತದಲ್ಲಿ ದೊಡ್ಡ ಮತ್ತು ಸಣ್ಣ ಬಂದರುಗಳಿವೆ. ಆದರೆ ಇಲ್ಲಿಯವರೆಗೆ Transshipment Port ಇರಲಿಲ್ಲ. ವಿಳಿಂಜಂ ದೇಶದ ಮೊದಲ Transshipment ಬಂದರು ಆಗಿದ್ದು, ಇಲ್ಲಿ ಹಡಗಿನಿಂದ ಹಡಗಿಗೆ ಸರಕನ್ನು ಸಾಗಿಸಬಹುದಾಗಿದೆ. ಸರ್ಕಾರ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಸುಮಾರು 8,800 ಕೋಟಿ ರೂ. ವೆಚ್ಚದಲ್ಲಿ ಈ ಬಂದರನ್ನು ನಿರ್ಮಾಣ ಮಾಡಲಾಗಿದ್ದು ಮೇ 2 ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ಬಂದರನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದರು.

ವಿಳಿಂಜಂನಲ್ಲೇ ಯಾಕೆ?
ಪ್ರಸ್ತುತ ಭಾರತಕ್ಕೆ ಸಾಗಿಸಲಾಗುವ ಎಲ್ಲಾ ಸಮುದ್ರ ಸರಕುಗಳ ಪೈಕಿ 75% ರಷ್ಟು ಸರಕುಗಳನ್ನು ಸಿಂಗಾಪುರ, ಕೊಲಂಬೊ ಅಥವಾ ದುಬೈನಂತಹ ವಿದೇಶಿ ಬಂದರುಗಳಲ್ಲಿ ಇಳಿಸಲಾಗುತ್ತದೆ. ದೊಡ್ಡ ಹಡಗಿನಲ್ಲಿ ಇಳಿಕೆಯಾದ ಸರಕುಗಳನ್ನು ಸಣ್ಣ ಹಡಗಿನಲ್ಲಿ ತುಂಬಿಸಿ ತರಲಾಗುತ್ತದೆ. ಇನ್ನು ಮುಂದೆ ವಿಳಿಂಜಂನಲ್ಲೇ ಇಳಿಸಬಹುದು. ಇದರಿಂದಾಗಿ ಭಾರತದ ವರ್ತಕರಿಗೆ ಕೋಟ್ಯಂತರ ರೂ. ಲಾಭವಾಗುವದರ ಜೊತೆಗೆ ವಿದೇಶದಿಂದ ಆಮದಾಗುವ ವಸ್ತುಗಳ ಬೆಲೆಯೂ ಇಳಿಕೆಯಾಗಲಿದೆ.

Share This Article