ದೇಶದಲ್ಲಿ ನಿರ್ಮಾಣವಾಗಿದೆ ವಿಶ್ವದ ಮೊದಲ ಪ್ಲಾಸ್ಟಿಕ್‌ ಹೈವೇ – ಪ್ಲಾಸ್ಟಿಕ್‌ ಮರುಬಳಕೆಗೆ ಸಿಕ್ಕೇಬಿಡ್ತು ಮಾರ್ಗೋಪಾಯ

Public TV
3 Min Read

ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆಗೆ ನವೀನ ಹಾಗೂ ಪರಿಸರಸ್ನೇಹಿ ಪರಿಹಾರ ಒದಗಿಸುವ ಪ್ರಯತ್ನ ಎತ್ತೇಚ್ಛವಾಗಿ ನಡೆಯುತ್ತಿದೆ. ಈ ಹಿಂದೆ ಪ್ಲಾಸ್ಟಿಕ್‌ (Plastic) ಕಂಡು ಹಿಡಿದಾಗ ವಿಜ್ಞಾನದ ಬಹುದೊಡ್ಡ ಆವಿಷ್ಕಾರ ಎಂದೇ ಹೇಳಲಾಗುತ್ತಿತ್ತು. ಆದ್ರೆ ಅತ್ಯಲ್ಪ ಸಮಯದಲ್ಲೇ ಈ ಪ್ಲಾಸ್ಟಿಕ್‌ ಮನುಕುಲಕ್ಕೆ ದೊಡ್ಡ ಭೀತಿ ತಂದೊಡ್ಡಿತು. ಹೀಗಾಗಿ ಕಸದಿಂದಲೇ ರಸ ಎನ್ನುವಂತೆ ಪ್ಲಾಸ್ಟಿಕ್‌ ಮರುಬಳಕೆಗೆ ಪರ್ಯಾಯ ಮಾರ್ಗದ ಬಗ್ಗೆ ಇಡೀ ವಿಶ್ವ ಹಗಲು ರಾತ್ರಿ ತಲೆ ಕೆಡಿಸಿಕೊಳ್ಳುತ್ತಿದೆ.

ದೇಶದಲ್ಲಿ ಉತ್ಪಾದನೆಯಾಗ್ತಿರೋ ಪ್ಲಾಸ್ಟಿಕ್‌ ಪ್ರಮಾಣ ಎಷ್ಟು?
ಸದ್ಯ ಇಡೀ ವಿಶ್ವದಾದ್ಯಂತ ಪ್ರತಿ ವರ್ಷ 46 ಕೋಟಿ ಟನ್‌ ಪ್ಲಾಸ್ಟಿಕ್‌ ಉತ್ಪಾದನೆಯಾಗುತ್ತಿದೆ. ಈ ಪೈಕಿ 9% ನಿಂದ 15% ನಷ್ಟು ಮಾತ್ರ ವೈಜ್ಞಾನಿಕವಾಗಿ ಮರುಬಳಕೆಯಾಗುತ್ತಿದೆ. 2050ರ ವೇಳೆಗೆ ವಾರ್ಷಿಕ ಪ್ಲಾಸ್ಟಿಕ್‌ ಉತ್ಪಾದನೆಯು 88 ಕೋಟಿ ಟನ್‌ಗೆ ತಲುಪಲಿದೆ ಎಂಬುದು ಪರಿಸರ ತಜ್ಞರ ಅಂದಾಜು. ಇನ್ನೂ ಭಾರತದಲ್ಲಿ ಪ್ರತಿ ವರ್ಷ 3.9 ದಶಲಕ್ಷ ಟನ್‌ ಪ್ಲಾಸ್ಟಿಕ್‌ ಉತ್ಪತ್ತಿಯಾಗುತ್ತಿದೆ. ವರದಿಗಳ ಪ್ರಕಾರ 5.85 ದಶಲಕ್ಷ ಟನ್‌ ಪ್ಲಾಸ್ಟಿಕ್‌ ಸುಡಲಾಗುತ್ತಿದೆ. 3.5 ದಶಲಕ್ಷ ಟನ್‌ ಪರಿಸರಕ್ಕೆ ಬಿಡುಗಡೆಯಾಗುತ್ತಿದೆ ಎಂದು ಪರಿಸರ ತಜ್ಞರು ಅಂದಾಜಿಸಿದ್ದಾರೆ. ಹೀಗಾಗಿ ಮರುಬಳಕೆ ಪ್ಲಾಸ್ಟಿಕ್‌ ಹೊರತುಪಡಿಸಿ ಉಳಿದ್ದದ್ದು ಭೂಮಿಯ ಒಡಲು ಸೇರಿ ಮನುಕುಲ, ಪರಿಸರ ಜೀವ ವೈವಿದ್ಯ ಹಾಗೂ ಪ್ರಕೃತಿಯ ಮೇಲೆ ಪರಿಣಾಮ ಬೀರುತ್ತಿದೆ. ಇನ್ನೊಂದಿಷ್ಟು ಪ್ರಮಾಣದ ಪ್ಲಾಸ್ಟಿಕ್‌ ಮಾನವನ ದೇಹ ಸೇರುತ್ತಿದೆ. ಹೀಗಾಗಿ ಮರುಬಳಕೆಯತ್ತ ಚಿಂತನೆಗಳು ನಡೆಯುತ್ತಿವೆ.

ಪ್ಲಾಸ್ಟಿಕ್‌ ಮರುಬಳಕೆ ಉದ್ಯಮವೊಂದರಲ್ಲಿ ಕಳೆದ 3 ವರ್ಷಗಳಲ್ಲಿ 10 ಸಾವಿರ ಕೋಟಿ ಹೂಡಿಕೆ ಮಾಡಲಾಗಿದೆ. ವಾರ್ಷಿಕ 5 ಲಕ್ಷ ಟನ್‌ ಮರುಬಳಕೆ ಸಾಮರ್ಥ್ಯವನ್ನು ಈ ಉದ್ಯಮ ಹೊಂದಿದೆ. ಅದಕ್ಕೆ ಉದಾಹರಣೆ ಈಗ ನಿರ್ಮಾಣವಾಗುತ್ತಿರುವ ದೆಹಲಿ-ಮುಂಬೈ ಹೆದ್ದಾರಿಯನ್ನ ನೋಡಬಹುದಾಗಿದೆ. ಹೌದು. ʻಜಿಯೋಸೆಲ್‌ ತಂತ್ರಜ್ಞಾನʼ ಬಳಸಿ ಪ್ಲಾಸ್ಟಿಕ್‌ನಿಂದಲೇ ಹೈವೇ ನಿರ್ಮಿಸಲಾಗಿದೆ.

ವಿಶ್ವದಲ್ಲೇ ಇದೇ ಮೊದಲಾ?
ಕರ್ನಾಟಕದ ಮೈಸೂರು, ಮಂಗಳೂರಿನಲ್ಲಿ ಈಗಾಗಲೇ ಪ್ಲಾಸ್ಟಿಕ್‌ ರಸ್ತೆಗಳು (Plastic Road) ನಿರ್ಮಾಣಗೊಂಡಿವೆ. ಅಲ್ಲದೇ ಬೆಂಗಳೂರಿನಂತಹ ಮಹಾನಗರಗಳಲ್ಲಿ ಪ್ಲಾಸ್ಟಿಕ್‌ಗೆ ಟೈಲ್ಸ್‌ ರೂಪ ಕೊಟ್ಟು ಫುಟ್‌ಪಾತ್‌ಗಳಿಗೆ ಬಳಸಲಾಗುತ್ತಿದೆ. ಆದ್ರೆ ಜಿಯೋಸೆಲ್‌ ತಂತ್ರಜ್ಞಾನ (Geocell Technology) ಬಳಸಿ ಪ್ಲಾಸ್ಟಿಕ್‌ ಹೈವೇ ನಿರ್ಮಾಣ ಮಾಡಿರುವುದು ವಿಶ್ವದಲ್ಲೇ ಮೊದಲು ಎಂದು ಹೇಳಲಾಗುತ್ತಿದೆ.

ಪ್ಲಾಸ್ಟಿಕ್‌ ತ್ಯಾಜ್ಯದ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಭಾರತ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಜಿಯೋಸೆಲ್‌ ತಂತ್ರಜ್ಞಾನದ ಮೂಲಕ ರಸ್ತೆಗಳನ್ನು ನಿರ್ಮಿಸಲು ಮುಂದಾಗಿದೆ. ಇದರ ಮೊದಲ ಹಂತವಾಗಿ ಸರ್ಕಾರಿ ಪೆಟ್ರೋಲಿಯಂ ಕಂಪನಿಯು ನವದೆಹಲಿಯ ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೇಯ (ಸಿಆರ್‌ಆರ್‌ಐ) ಪಾಲುದಾರಿಕೆಯೊಂದಿಗೆ ಪರಿಸರ ರಸ್ತೆ ನಿರ್ಮಿಸುತ್ತಿದೆ.

ಅಷ್ಟಕ್ಕೂ ಈ ಜಿಯೋಸೆಲ್‌ ತಂತ್ರಜ್ಞಾನ ಅಂದ್ರೆ ಏನು?
ಜಿಯೋಸೆಲ್‌ ತಂತ್ರಜ್ಞಾನ ಅಂದ್ರೆ 9*9*9 ಇಂಚುಗಳ ಆಯಾಮ ಇರುವ ಬಾಕ್ಸ್‌ಗಳನ್ನ ರಚಿಸುವುದು. ನಂತರ ಅವುಗಳನ್ನು ಬಿಟುಮಿನ್‌ ಮಿಶ್ರಣ ಭರ್ತಿ ಮಾಡಿ ರಸ್ತೆ ನಿರ್ಮಾಣ ಮಾಡುವುದು. ಇದೇ ರೀತಿ ದೆಹಲಿಯಲ್ಲಿ ಎಕ್ಸ್‌ಪ್ರಸೆ ಹೈವೇ ನಿರ್ಮಿಸಲು 50 ಟನ್‌ ವ್ಯರ್ಥ ಪ್ಲಾಸ್ಟಿಕ್‌ ಅನ್ನು ಬಳಸಲಾಗುತ್ತಿದೆ. ಸಾಂಧ್ರತೆಯ ಪಾಲಿಥಿಲೀನ್‌ನಿಂದ (ಹೆಚ್‌ಡಿಪಿಇ) ತಯಾರಾಗುವ ʻಜಿಯೋಸೆಲ್‌ʼ ಮಣ್ಣನ್ನು ಬಪಡಿಸಲು ಮತ್ತು ಸ್ಥಿರಗೊಳಿಸಲು ಉಪಯುಕ್ತವಾಗಿದೆ. ಇದು ಮಣ್ಣಿನ ಪಾರ್ಶ್ವ ಚಲನೆಯನ್ನು ತಡೆದು ಹೊರೆ ಹೊರುವ ಸಾಮರ್ಥ್ಯವನ್ನ ಹೆಚ್ಚಿಸುವ ರಸ್ತೆ ನಿರ್ಮಾಣ, ಇಳಿಜಾರು, ರಕ್ಷಣೆ ಮತ್ತು ಮಣ್ಣಿನ ಸವೆತ ನಿಯಂತ್ರಣಕ್ಕೆ ಪ್ರಯೋಜನಕಾರಿಯಾಗಿದೆ.

20 ವರ್ಷಗಳ ಹಿಂದೆಯೇ ಪ್ಲಾಸ್ಟಿಕ್‌ ರಸ್ತೆ ನಿರ್ಮಾಣ
ಪ್ಲಾಸ್ಟಿಕ್‌ ಬಳಸಿ ರಸ್ತೆ ನಿರ್ಮಾಣ ಮಾಡುವ ತಂತ್ರಜ್ಞಾನ ಭಾರತದಲ್ಲಿ ಕಳೆದ 20 ವರ್ಷಗಳ ಹಿಂದೆಯೇ ಚಾಲ್ತಿಗೆ ಬಂದಿದೆ. 2024ರ ವರೆಗೆ ದೇಶದಲ್ಲಿ ಸುಮಾರು 40 ಕಿಮೀ ಗ್ರಾಮೀಣ ರಸ್ತೆಗಳನ್ನು ಪ್ಲಾಸ್ಟಿಕ್‌ ತ್ಯಾಜ್ಯದಿಂದಲೇ ನಿರ್ಮಿಸಲಾಗಿದೆ. 2004ರಲ್ಲಿ ತಮಿಳುನಾಡಿನ ಚೆನ್ನೈ ನಗರದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಬಳಸಿ 1,000 ಕಿಮೀ ರಸ್ತೆಯನ್ನ ಮೊದಲ ಬಾರಿಗೆ ನಿರ್ಮಾಣ ಮಾಡಲಾಯ್ತು. 2011ರಲ್ಲಿ ಬೆಂಗಳೂರು ವಿವಿ ಕ್ಯಾಂಪಸ್‌ ಹಾಗೂ ಮೈಸೂರಿನಲ್ಲೂ ಪ್ಲಾಸ್ಟಿಕ್‌ ರಸ್ತೆ ನಿರ್ಮಾಣ ಮಾಡಲಾಗಿದೆ. 2022ರಲ್ಲಿ ಮಂಗಳೂರಿನಲ್ಲಿಯೂ ಪ್ಲಾಸ್ಟಿಕ್‌ ರಸ್ತೆ ನಿರ್ಮಾಣ ಮಾಡಲಾಗಿದೆ.

ಪ್ರಯೋಜನ ಏನು?
ಪ್ಲಾಸ್ಟಿಕ್‌ ತ್ಯಾಜ್ಯದಿಂದ ರಸ್ತೆ ನಿರ್ಮಾಣ ಮಾಡುವುದರಿಂದ ಪರಿಸರದಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಲಿನ್ಯ ತಗ್ಗಿಸುವುದು ಒಂದಾದ್ರೆ ಶೇ.30 ರಷ್ಟು ವೆಚ್ಚ ಉಳಿತಾಯವಾಗುತ್ತದೆ. ಜೊತೆಗೆ ರಸ್ತೆ ಕುಸಿತ ಸಮಸ್ಯೆಯನ್ನು ಇದು ಕಡಿಮೆ ಮಾಡುತ್ತದೆ ಎನ್ನುತ್ತಾರೆ ಭಾರತ್ ಪೆಟ್ರೋಲಿಯಂನ ಮುಖ್ಯ ವ್ಯವಸ್ಥಾಪಕ ಡಾ. ಮಹೇಶ್.

ಒಟ್ಟಿನಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದ ಮರುಬಳಕೆ ಕಾರ್ಯಗಳು ಎತ್ತೆಚ್ಛವಾಗಿ ನಡೆಯುತ್ತಿದ್ದು, ಜಿಯೋಸೆಲ್‌ ಮಿಶ್ರಣದ ಮೂಲಕ ಪ್ಲಾಸ್ಟಿಕ್‌ ತ್ಯಾಜ್ಯದ ಸದೃಢ ರಸ್ತೆಗಳು ಮನೆ ಬಾಗಿಲಿಗೆ ಬರಲು ಹೆಚ್ಚು ಸಮಯ ಬೇಕಿಲ್ಲ.

Share This Article