World Cup 2023: ಚೊಚ್ಚಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಕಿವೀಸ್‌; ಇಂಗ್ಲೆಂಡ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

Public TV
5 Min Read

ಅಹಮದಾಬಾದ್:‌ ಏಕದಿನ ವಿಶ್ವಕಪ್‌ (ODI World Cup) ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಇಂಗ್ಲೆಂಡ್‌ (England) ತಂಡದ ವಿರುದ್ಧ ಕಿವೀಸ್‌ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2019ರ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ವಿರೋಚಿತ ಸೋಲನುಭವಿಸಿ, ಟ್ರೋಫಿ ಕಳೆದುಕೊಂಡಿದ್ದ ಕಿವೀಸ್‌ ಪಡೆ ಮೊದಲ ಪಂದ್ಯದಲ್ಲೇ ಆಂಗ್ಲರಿಗೆ ತಿರುಗೇಟು ನೀಡಿದೆ.

ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ‌ ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand) ತಂಡವು ಹಾಲಿ ಚಾಂಪಿಯನ್ಸ್‌ ಇಂಗ್ಲೆಂಡ್‌ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 282 ರನ್‌ ಗಳಿಸಿತ್ತು. 283 ರನ್‌ ಗುರಿ ಪಡೆದ ಕಿವೀಸ್‌ ಕೇವಲ 36.2 ಓವರ್‌ಗಳಲ್ಲೇ 1 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿತು.

ಚೇಸಿಂಗ್‌ ಆರಂಭಿಸಿದ ನ್ಯೂಜಿಲೆಂಡ್‌ ಪರ ಆರಂಭಿಕ ಆಟಗಾರ ವಿಲ್‌ ಯಂಗ್‌ ಮೊದಲ ಎಸೆತದಲ್ಲೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಇದರಿಂದ ಇಂಗ್ಲೆಂಡ್‌ ತಂಡ ಗೆಲುವಿನ ಕನಸು ಕಂಡಿತ್ತು. ಆದ್ರೆ 2ನೇ ವಿಕೆಟ್‌ಗೆ ಜೊತೆಯಾದ ಡಿವೋನ್‌ ಕಾನ್ವೆ (Devon Conway) ಹಾಗೂ ಆಲ್‌ರೌಂಡರ್‌ ರಚಿನ್ ರವೀಂದ್ರ (Rachin Ravindra) ಜೋಡಿ ಇಂಗ್ಲೆಂಡ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗ ಚೆಂಡಾಡಿದರು.

ಮೊದಲ 10 ಓವರ್‌ಗಳಲ್ಲಿ 81 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡಿದ್ದ ಕಿವೀಸ್‌ 20 ಓವರ್‌ಗಳಲ್ಲಿ 154 ರನ್‌ ಹಾಗೂ 35‌ ಓವರ್‌ಗಳಲ್ಲಿ 265 ರನ್‌ ಚಚ್ಚಿತ್ತು. ಮುರಿಯದ 2ನೇ ವಿಕೆಟ್‌ಗೆ ಕಾನ್ವೆ ಹಾಗೂ ರವೀಂದ್ರ ಜೋಡಿ ಭರ್ಜರಿ ಶತಕಗಳೊಂದಿಗೆ 211 ಎಸೆತಗಳಲ್ಲಿ 273 ರನ್‌ ಸಿಡಿತ್ತು. ಡಿವೋನ್‌ ಕಾನ್ವೇ 121 ಎಸೆತಗಳಲ್ಲಿ 152 ರನ್‌ ಚಚ್ಚಿದರೆ (19 ಬೌಂಡರಿ, 3 ಸಿಕ್ಸರ್‌), ರಚಿನ್‌ ರವೀಂದ್ರ 96 ಎಸೆತಗಳಲ್ಲಿ 123 ರನ್‌ (11 ಬೌಂಡರಿ, 5 ಸಿಕ್ಸರ್‌) ಸಿಡಿಸಿ ಮಿಂಚಿದರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌, 50 ಓವರ್‌ಗಳ ಅಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 282 ರನ್‌ ಗಳಿಸಿತ್ತು. ಇಂಗ್ಲೆಂಡ್ ಪರ ಆರಂಭಿಕರಾಗಿ ಕಣ್ಕಿಳಿದ ಜಾನಿ ಬೈರ್‌ಸ್ಟೋವ್‌ 33 ರನ್‌, ಡೇವಿಡ್‌ ಮಲಾನ್‌ 14 ರನ್‌ ಗಳಿಸಿ ಔಟಾಗುತ್ತಿದ್ದಂತೆ ಕಣಕ್ಕಿಳಿದ ಜೋ ರೂಟ್‌ 86 ಎಸೆತಗಳಲ್ಲಿ 77 ರನ್‌ ಸಿಡಿಸಿದರು.

ಇದರೊಂದಿಗೆ ಹ್ಯಾರಿ ಬ್ರೂಕ್‌ 25 ರನ್‌, ಮೋಯಿನ್‌ ಅಲಿ 11 ರನ್‌ ಗಳಿಸಿದ್ರೆ, ಜೋಸ್‌ ಬಟ್ಲರ್‌ 42 ಎಸೆತಗಳಲ್ಲಿ 43 ರನ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ 22 ಎಸೆತಗಳಲ್ಲಿ 20 ರನ್‌, ಸ್ಯಾಮ್‌ ಕರ್ರನ್‌ 14 ರನ್‌, ಕ್ರಿಸ್ ವೋಕ್ಸ್ 11 ರನ್‌ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ಆದಿಲ್ ರಶೀದ್ 15 ರನ್‌ ಹಾಗೂ ಮಾರ್ಕ್ ವುಡ್ 13 ರನ್‌ ಗಳಿಸಿ ಅಜೇಯರಾಗುಳಿದರು.

ನ್ಯೂಜಿಲೆಂಡ್‌ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮ್ಯಾಟ್‌ ಹೆನ್ರಿ 3 ವಿಕೆಟ್‌ ಪಡೆದರೆ, ಗ್ಲೆನ್‌ ಫಿಲಿಪ್ಸ್‌ ಮತ್ತು ಮಿಚೆಲ್‌ ಸ್ಯಾಂಟ್ನರ್‌ ತಲಾ ಎರಡೆರಡು ಹಾಗೂ ಟ್ರೆಂಟ್‌ ಬೌಲ್ಟ್‌ ಮತ್ತು ರಚಿನ್ ರವೀಂದ್ರ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

2019ರಲ್ಲಿ ಏನಾಗಿತ್ತು?
ಇಂಗ್ಲೆಂಡಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಜುಲೈ 14 ರಂದು ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡಿತು. ನಿಗದಿತ 50 ಓವರ್‌ಗಳಲ್ಲಿ ಇಂಗ್ಲೆಂಡ್‍ಗೆ 241 ರನ್‍ಗಳ ಗುರಿ ನೀಡಿತು. ಆದರೆ ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಕೊನೆಯ ಓವರಿನ ಮೂರನೇ ಎಸೆತದಲ್ಲಿ ಬೆನ್‌ ಸ್ಟೋಕ್ಸ್‌ ಸಿಕ್ಸ್‌ ಹೊಡೆದರೆ 4ನೇ ಎಸೆತದಲ್ಲೂ 6ರನ್‌ ಬಂದಿತ್ತು. ಎರಡನೇ ರನ್‌ ಓಡುವ ವೇಳೆ ಚೆಂಡು ಬೆನ್‌ ಸ್ಟೋಕ್ಸ್‌ ಬ್ಯಾಟ್‌ಗೆ ತಾಗಿ ಬೌಂಡರಿಗೆ ಹೋಗಿತ್ತು. ಇದು ಬಹಳ ವಿವಾದಕ್ಕೆ ಕಾರಣವಾಗಿತ್ತು. ಕೊನೆಯ ಎರಡು ಎಸೆತದಲ್ಲಿ ಸಿಂಗಲ್‌ ರನ್‌ ಬಂದ ಕಾರಣ ಪಂದ್ಯ ಟೈ ಆಗಿತ್ತು.

ಟೈ ಆದ ಕಾರಣ ಐಸಿಸಿ ನಿಯಮದಂತೆ ಸೂಪರ್ ಓವರ್ ಆಡಿಸಲು ತೀರ್ಮಾನ ಮಾಡಲಾಯಿತು. ಸೂಪರ್ ಓವರ್‌ನಲ್ಲಿ ಮೊದಲ ಬ್ಯಾಟ್ ಮಾಡಿದ ಇಂಗ್ಲೆಂಡ್ ಬಟ್ಲರ್ ಮತ್ತು ಸ್ಟೋಕ್ಸ್ ಅವರು ತಲಾ ಒಂದೊಂದು ಬೌಡರಿ ಸಿಡಿಸಿ ನ್ಯೂಜಿಲೆಂಡ್ ತಂಡಕ್ಕೆ 15 ರನ್‍ಗಳ ಗುರಿ ನೀಡಿದರು. ಇದನ್ನು ಬೆನ್ನಟ್ಟಿದ ಕೀವೀಸ್ ಆಟಗಾರರಾದ ಜಿಮ್ಮಿ ನೀಶಮ್ ಮತ್ತು ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಅವರ ಬೌಲಿಂಗ್‌ ಭರ್ಜರಿ ಬ್ಯಾಟ್ ಬೀಸಿದರು. ನೀಶಮ್ ಅವರು ಒಂದು ಸಿಕ್ಸರ್ ಸಿಡಿಸಿ ಗೆಲ್ಲುವ ಭರವಸೆ ಮೂಡಿಸಿದರು. ಕೊನೆಯ ಎಸೆತದಲ್ಲಿ ಗೆಲ್ಲಲು ನ್ಯೂಜಿಲೆಂಡ್‍ಗೆ 2 ರನ್ ಬೇಕಿತ್ತು. ಆಗ ಸ್ಟ್ರೈಕ್‍ನಲ್ಲಿ ಇದ್ದ ಅನುಭವಿ ಆಟಗಾರ ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಎಸೆದ ಎಸೆತದಲ್ಲಿ 2 ರನ್ ಕದಿಯಲು ವಿಫಲರಾದರು. ಜೋಫ್ರಾ ಅವರ ಎಸೆತವನ್ನು ಮಿಡ್ ವಿಕೆಟ್ ಕಡೆಗೆ ತಳ್ಳಿದ ಗುಪ್ಟಿಲ್ ಎರಡು ರನ್ ಕದಿಯುವಲ್ಲಿ ಯಶಸ್ವಿಯಾಗಲಿಲ್ಲ. ರಾಯ್ ಅವರು ಎಸೆದ ಉತ್ತಮ ಥ್ರೋವನ್ನು ಬಟ್ಲರ್ ಹಿಡಿದು ರನೌಟ್‌ ಮಾಡಿದರು. ಈ ಮೂಲಕ ಸೂಪರ್ ಓವರ್ ಕೂಡ ಟೈ ಆಯ್ತು.

ಫೈನಲ್‍ನಲ್ಲಿ ಸೂಪರ್ ಓವರ್ ಕೂಡ ಟೈ ಆದ ಕಾರಣ ಐಸಿಸಿ ನಿಯಮದಂತೆ ಹೆಚ್ಚು ಬೌಂಡರಿ ಸಿಡಿಸಿದ ತಂಡಕ್ಕೆ ಗೆಲುವು ಎಂದು ಘೋಷಣೆ ಮಾಡಲಾಯಿತು. ಪಂದ್ಯದಲ್ಲಿ ಹೆಚ್ಚು ಬೌಂಡರಿ ಹೊಡೆದಿದ್ದ ಇಂಗ್ಲೆಂಡ್ ಗೆಲುವು ಸಾಧಿಸಿತು. ಈ ಮೂಲಕ ಮೊದಲ ಬಾರಿಗೆ ಇಂಗ್ಲೆಂಡ್ ವಿಶ್ವಕಪ್ ಮುತ್ತಿಕ್ಕಿತು. ಸತತ ಎರಡನೇ ಬಾರಿ ಫೈನಲ್‍ನಲ್ಲಿ ಸೋತ ನ್ಯೂಜಿಲೆಂಡ್ ದ್ವಿತೀಯಸ್ಥಾನಿಯಾಗಿ ನಿರ್ಗಮಿಸಿತು. ಈ ಪಂದ್ಯದಲ್ಲಿ ಇಂಗ್ಲೆಂಡ್‌ 26 ಬೌಂಡರಿ ಹೊಡೆದಿದ್ದರೆ ನ್ಯೂಜಿಲೆಂಡ್‌ 17 ಬೌಂಡರಿ ಹೊಡೆದಿತ್ತು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್