ವಿಶ್ವಕಪ್‌ನಲ್ಲಿ `Timed Out’ ಟಾಕ್‌ ವಾರ್‌ ಜೋರು – ವೀಡಿಯೋ ಪ್ರೂಫ್‌ ಕೊಟ್ಟ ಮಾಥ್ಯೂಸ್

By
3 Min Read

ನವದೆಹಲಿ: ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶ್ರೀಲಂಕಾದ ಕ್ರಿಕೆಟಿಗ ಏಂಜಲೋ ಮಾಥ್ಯೂಸ್ (Angelo Mathews) ಒಂದೇ ಒಂದು ಎಸೆತ ಎದುರಿಸದೇ ಟೈಮ್ಡ್‌ ಔಟ್‌ಗೆ (Timed Out) ಬಲಿಯಾದ ಘಟನೆ ಬಳಿಕ ಟಾಕ್‌ ವಾರ್‌ ಶುರುವಾಗಿದೆ. ಈ ನಡುವೆ ಮಾಥ್ಯೂಸ್ ತಾವು ಕ್ರೀಸ್‌ಗೆ ಬಂದ ಸಮಯವನ್ನೂ ವೀಡಿಯೋ ಫ್ರೂಫ್‌ ಸಮೇತ ಹಂಚಿಕೊಂಡಿದ್ದಾರೆ.

ಬಾಂಗ್ಲಾ (Bangladesh) ವಿರುದ್ಧ ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಶ್ರೀಲಂಕಾ 24.2ನೇ ಓವರ್‌ನಲ್ಲಿ 135 ರನ್‌ಗಳಿಸಿದ್ದಾಗ ಸದೀರ ಸಮರವಿಕ್ರಮ ಔಟಾದರು. ಈ ವೇಳೆ ಮಾಥ್ಯೂಸ್ ತಾವು 2 ನಿಮಿಷದ ಒಳಗೆಯೇ ಕ್ರೀಗೆ ಬಂದಿರುವುದಾಗಿ ವೀಡಿಯೋ ಸಾಕ್ಷಿಯೊಂದನ್ನ ತಮ್ಮ ಸೋಶಿಯಲ್‌ ಮೀಡಿಯಾ (Social Media) X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಇಲ್ಲಿ 4ನೇ ಅಂಪೈರ್‌ ಇಲ್ಲಿ ತಪ್ಪಾಗಿದೆ. ಹೆಲ್ಮೆಟ್‌ ನೀಡಿದ ನಂತರವೂ ನಾನು ಇನ್ನೂ 5 ಸೆಕೆಂಡ್‌ ಮುಂಚಿತವಾಗಿಯೇ ಕ್ರೀಸ್‌ಗೆ ಬಂದಿದ್ದೇನೆ. ರೆಕಾರ್ಡ್‌ ಆಗಿರುವ ವೀಡಿಯೋ ಸಾಕ್ಷಿಯೇ ಇದನ್ನು ತೋರಿಸುತ್ತದೆ. 4ನೇ ಅಂಪೈರ್‌ ದಯವಿಟ್ಟು ಇದನ್ನು ಸರಿಪಡಿಸಬಹುದೇ? ನನ್ನ ಪ್ರಕಾರ ಹೆಲ್ಮೆಟ್‌ ಸುರಕ್ಷತೆ ಅತಿ ಮುಖ್ಯವಾದದ್ದು. ನಾನು ಹೆಲ್ಮೆಟ್‌ ಇಲ್ಲದೇ ಬೌಲರ್‌ ಅನ್ನು ಎದುರಿಸಲು ಸಾಧ್ಯವಾಗಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಶ್ರೀಲಂಕಾದ ಮಾಜಿ ಕ್ರಿಕೆಟಿಗ ರಸ್ಸೆಲ್ ಅರ್ನಾಲ್ಡ್, ಐಸಿಸಿ ಆಟದ ಪರಿಸ್ಥಿತಿಗಳನ್ನು ಹೈಲೈಟ್‌ ಮಾಡಿದಾಗ, ಮುಂದಿನ ಬ್ಯಾಟರ್‌ 2 ನಿಮಿಷಗಳಲ್ಲಿ ಕ್ರೀಸ್‌ಗೆ ಬಂದು ಬೌಲರ್‌ ಎದುರಿಸಲು ಸಿದ್ಧವಾಗಬೇಕು ಎಂದು ಐಸಿಸಿ ನಿಯಮವನ್ನು ನೆನಪಿಸಿದ್ದಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿರುವ ಮಾಥ್ಯೂಸ್ ಹೌದು, ನಾನು ಹೆಲ್ಮೆಟ್‌ ಇಲ್ಲದೇ ಬೌಲಿಂಗ್‌ ಎದುರಿಸಲು ಸಾಧ್ಯವಾಗಿರಲಿಲ್ಲ. ಆದ್ರೆ 2 ನಿಮಿಷಗಳಲ್ಲೇ ನಾನು ಮತ್ತೆ ಕ್ರೀಸ್‌ನಲ್ಲಿ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಒಂದು ಎಸೆತ ಎದುರಿಸದೇ ಏಂಜಲೋ ಮಾಥ್ಯೂಸ್ ಔಟ್‌ – ಏನಿದು ಟೈಮ್ಡ್‌ ಔಟ್‌ ನಿಯಮ?

ಏನಿದು ವಿವಾದ..?
ಬಾಂಗ್ಲಾ (Bangladesh) ವಿರುದ್ಧ ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಶ್ರೀಲಂಕಾ 24.2ನೇ ಓವರ್‌ನಲ್ಲಿ 135 ರನ್‌ಗಳಿಸಿದ್ದಾಗ ಸಮರವಿಕ್ರಮ ಔಟಾದರು. ಈ ವೇಳೆ ಏಂಜಲೋ ಮಾಥ್ಯೂಸ್ ಕ್ರೀಸ್‌ಗೆ ಬಂದರು. ಆದ್ರೆ ಬಾಲ್‌ ಎದುರಿಸಲು ಮುಂದಾದಾಗ ಹೆಲ್ಮೆಟ್‌ ಪಟ್ಟಿ ತುಂಡಾಗಿರುವುದು ಗೊತ್ತಾಯಿತು. ಹೀಗಾಗಿ ಬೇರೆ ಹೆಲ್ಮೆಟ್‌ ತರುವಂತೆ ಮಾಥ್ಯೂಸ್ ತಂಡಕ್ಕೆ ಸೂಚಿಸಿದರು. ಈ ಸಂದರ್ಭದಲ್ಲಿ ಬಾಂಗ್ಲಾ ನಾಯಕ ಶಕೀಬ್‌ ಅಲ್‌ ಹಸನ್‌ ಅಂಪೈರ್‌ ಜೊತೆ ಬ್ಯಾಟರ್‌ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿ ಟೈಮ್ಡ್‌ ಔಟ್‌ಗೆ ಮನವಿ ಮಾಡಿದರು. ಈ ಮನವಿಯನ್ನು ಅಂಪೈರ್‌ ಪುರಸ್ಕರಿಸಿದರು. ಈ ವೇಳೆ ಮ್ಯಾಥ್ಯೂಸ್‌ ಅವರು, ನನ್ನ ಹೆಲ್ಮೆಟ್‌ ಪಟ್ಟಿ ಮುರಿದು ಹೋಗಿದೆ. ಹೀಗಾಗಿ ಬೇರೆ ಹೆಲ್ಮೆಟ್‌ ತರುವಂತೆ ಹೇಳಿದ್ದೇನೆ ಎಂದು ಅಂಪೈರ್‌ಗೆ ಸಮಸ್ಯೆಯನ್ನು ವಿವರಿಸಿದರು. ಅಂಪೈರ್‌ ಮತ್ತು ಬಾಂಗ್ಲಾ ಆಟಗಾರರ ಜೊತೆಗೆ ಹೆಲ್ಮೆಟ್‌ ದೋಷದ ಬಗ್ಗೆ ಮನವರಿಕೆ ಮಾಡಿದರೂ ಶಕೀಬ್‌ ಮಾತ್ರ ತಮ್ಮ ಟೈಮ್ಡ್‌ ಔಟ್‌ ಮನವಿಯಿಂದ ಹಿಂದಕ್ಕೆ ಸರಿಯಲಿಲ್ಲ. ಕೊನೆಗೆ ಏಂಜಲೋ ಮಾಥ್ಯೂಸ್ ಬಾಂಗ್ಲಾ ವಿರುದ್ಧ ಗೊಣಗುತ್ತಲೇ ಪೆವಿಲಿಯನ್‌ಗೆ ಮರಳಿದರು. ಬೌಂಡರಿ ಗೆರೆ ದಾಟುತ್ತಿದ್ದಂತೆ ಹೆಲ್ಮೆಟ್‌ ಎಸೆದು ಸಿಟ್ಟು ಹೊರಹಾಕಿದರು.

ಟೈಮ್ಡ್‌ ಔಟ್‌ ನಿಯಮ ಏನು ಹೇಳುತ್ತದೆ?
ವಿಕೆಟ್‌ ಪತನದ ನಂತರ ಅಥವಾ ಬ್ಯಾಟರ್‌ ನಿವೃತ್ತಿ ಹೊಂದಿದ ಬಳಿಕ 2 ನಿಮಿಷದ ಒಳಗಡೆ ಮುಂದಿನ ಎಸೆತವನ್ನು ಎದುರಿಸಬೇಕು. ಈ ಅವಧಿಯಲ್ಲಿ ಚೆಂಡು ಸ್ವೀಕರಿಸದೇ ಇದ್ದರೇ ಫೀಲ್ಡಿಂಗ್‌ ನಡೆಸುವ ತಂಡದ ನಾಯಕ ಟೈಮ್ಡ್‌ ಔಟ್‌ಗೆ ಮನವಿ ಮಾಡಬಹುದು. ಅಂಪೈರ್‌ ನೇರವಾಗಿ ಔಟ್‌ ನೀಡಲು ಬರುವುದಿಲ್ಲ. ಬೌಲಿಂಗ್‌ ನಡೆಸುವ ತಂಡದ ನಾಯಕ ಮನವಿ ಮಾಡಿದ್ರೆ ಮಾತ್ರ ಟೈಮ್ಡ್‌ ಔಟ್‌ ನೀಡಬಹುದು. ಬ್ಯಾಟರ್‌ ಟೈಮ್ಡ್‌ ಔಟಾದರೆ ಬೌಲರ್‌ಗೆ ವಿಕೆಟ್‌ ಸಿಗುವುದಿಲ್ಲ. ಇದನ್ನೂ ಓದಿ: ಬಾಂಗ್ಲಾಗೆ 3 ವಿಕೆಟ್‌ ಜಯ – ಟೈಮ್ಡ್‌ ಔಟಾಗಿದ್ದಕ್ಕೆ ಶಕೀಬ್‌ ವಿರುದ್ಧ ಸೇಡು ತೀರಿಸಿಕೊಂಡ ಮ್ಯಾಥ್ಯೂಸ್‌

Share This Article