ಸೂಪರ್ ಓವರ್ ಟೈ – ಐಸಿಸಿಗೆ ಸಲಹೆ ಕೊಟ್ಟ ಸಚಿನ್

Public TV
2 Min Read

ಮುಂಬೈ: ಬೌಂಡರಿ ಆಧಾರದಲ್ಲಿ ವಿಶ್ವಕಪ್ ಚಾಂಪಿಯನ್ ಆಯ್ಕೆ ನಿರ್ಧಾರಕ್ಕೆ ಹಲವು ಹಿರಿಯ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಐಸಿಸಿಗೆ ಸಲಹೆ ನೀಡಿದ್ದಾರೆ.

ಒಂದು ವೇಳೆ ಸೂಪರ್ ಓವರ್ ಟೈ ಆದರೆ ಮತ್ತೊಂದು ಸೂಪರ್ ಓವರ್ ಆಡಿಸಬೇಕು. ಬೌಂಡರಿ ಆಧಾರದಲ್ಲಿ ಒಂದು ತಂಡ ಜಯಗಳಿಸಿದೆ ಎಂದು ಹೇಳುವುದು ನ್ಯಾಯಸಮ್ಮತವಲ್ಲ. ವಿಶ್ವಕಪ್ ಒಂದೇ ಅಲ್ಲ ಎಲ್ಲ ಪಂದ್ಯಗಳು ಮುಖ್ಯವೇ. ಫುಟ್ ಬಾಲಿನಲ್ಲಿ ಹೇಗೆ ಹೆಚ್ಚುವರಿ ಸಮಯವನ್ನು ನಿಡಲಾಗುತ್ತೋ ಅದೇ ರೀತಿ ನೀಡಬೇಕು ಎಂದು ಸಚಿನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಚಿನ್ ಅಲ್ಲದೇ ರೋಹಿತ್ ಶರ್ಮಾ, ಯುವರಾಜ್ ಸಿಂಗ್ ಸಹ ಈ ನಿಯಮ ಬದಲಾಗಬೇಕು ಎಂದು ಹೇಳಿದ್ದಾರೆ.

ಸೂಪರ್ ಓವರಿನ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 15 ರನ್ ಹೊಡೆಯಿತು. ನ್ಯೂಜಿಲೆಂಡ್ ತಂಡಕ್ಕೆ ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಈ ವೇಳೆ ಎರಡು ರನ್ ಕದಿಯಲು ಮುಂದಾಗಿದ್ದ ಗುಪ್ಟಿಲ್ ರನ್ ಔಟ್ ಆದರು. ಟ್ರೆಂಟ್ ಬೌಲ್ಟ್ ಎಸೆದ ಓವರ್ ನಲ್ಲಿ ಬೆನ್ ಸ್ಟೋಕ್ಸ್ ಮತ್ತು ಬಟ್ಲರ್ ಒಂದೊಂದು ಬೌಂಡರಿ ಹೊಡೆದಿದ್ದರು. ಜೋಫ್ರಾ ಅರ್ಚರ್ ಎಸೆದ ಓವರ್ ನಲ್ಲಿ ನಿಶಮ್ ಒಂದು ಸಿಕ್ಸರ್ ಹೊಡೆದರೆ ಯಾವುದೇ ಬೌಂಡರಿ ಬಂದಿರಲಿಲ್ಲ. ಎರಡು ತಂಡಗಳ ರನ್ ಸಮವಾಗಿದ್ದರೂ ಒಟ್ಟು 24 ಬೌಂಡರಿ ಸಿಡಿದ ಪರಿಣಾಮ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿತು. ನ್ಯೂಜಿಲೆಂಡ್ 17 ಬೌಂಡರಿ ಹೊಡೆದಿತ್ತು.

ಫೈನಲ್ ಪಂದ್ಯದಲ್ಲಿ ಓವರ್ ಥ್ರೋಗೆ ಅಂಪೈರ್ ಗಳು 6 ರನ್ ನೀಡಿದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ವಿಚಾರದ ಬಗ್ಗೆ ಎಚ್ಚೆತ್ತುಕೊಂಡ ಐಸಿಸಿ ಅಂಪೈರ್ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿ ಈ ಪ್ರಕರಣದಿಂದ ಜಾರಿಕೊಂಡಿದೆ.

ಓವರ್ ಥ್ರೋ ಕುರಿತು ಫಾಕ್ಸ್ ನ್ಯೂಸ್‍ಗೆ ಐಸಿಸಿಯ ವಕ್ತಾರರು ಪ್ರತಿಕ್ರಿಯಿಸಿ, ಮೈದಾನದಲ್ಲಿರುವ ಅಂಪೈರ್ ಗಳು ಐಸಿಸಿಯ ನಿಯಮಗಳ ಪುಸ್ತಕವನ್ನು ಆಧಾರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಅಂಪೈರ್‍ ಗಳು ತೆಗೆದುಕೊಳ್ಳುವ ಈ ತೀರ್ಮಾನಗಳ ಬಗ್ಗೆ ನಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಅಂಪೈರ್ ನಿರ್ಣಯದ ಬಗ್ಗೆ ಸೋಮವಾರವೇ ಪ್ರತಿಕ್ರಿಯೆ ನೀಡಿದ್ದ ಆಸ್ಟ್ರೇಲಿಯಾದ ಖ್ಯಾತ ಮಾಜಿ ಅಂಪೈರ್ ಸೈಮನ್ ಟಫೆಲ್ ಅವರು, ಫೈನಲ್ ಪಂದ್ಯದಲ್ಲಿ ಆನ್ ಫೀಲ್ಡ್ ಅಂಪೈರ್‍ ಗಳು ಓವರ್ ಥ್ರೋ ಕಾರಣಕ್ಕೆ 6 ರನ್ ನೀಡಿದ್ದು ತಪ್ಪು. ನಿಯಮಗಳ ಅನ್ವಯ ಅಲ್ಲಿ 5 ರನ್ ಮಾತ್ರ ನೀಡಬೇಕಿತ್ತು ಎಂದು ಹೇಳಿದ್ದರು.

ವಿಶ್ವಕಪ್ ಪಂದ್ಯ ಟೈನಲ್ಲಿ ಅಂತ್ಯಗೊಂಡ ಬಳಿಕ ಅಂಪೈರ್ ಓವರ್ ಥ್ರೋಗೆ 6 ರನ್ ನೀಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಫಾಕ್ಸ್ ಸ್ಪೋರ್ಟ್ಸ್ ಗೆ ಪ್ರತಿಕ್ರಿಯೆ ನೀಡಿದ ಟಫೆಲ್, ಇದರಲ್ಲಿ ತಪ್ಪು ಸ್ಪಷ್ಟವಾಗಿದೆ. 6 ರನ್ ನೀಡುವಂತಿಲ್ಲ. 5 ರನ್ ಮಾತ್ರ ನೀಡಬೇಕಿತ್ತು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *