ಅಮರಾವತಿ ಯೋಜನೆಗೆ 2.5 ಸಾವಿರ ಕೋಟಿ ಸಾಲ ನೀಡಲು ವಿಶ್ವಬ್ಯಾಂಕ್ ಹಿಂದೇಟು

Public TV
2 Min Read

ಅಮರಾವತಿ: ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆಯನ್ನು ವಿಶ್ವಬ್ಯಾಂಕ್ ಕೈ ಬಿಟ್ಟಿದ್ದು, ಇದರಿಂದ ಆಂಧ್ರದ ರಾಜಧಾನಿ ಅಮರಾವತಿ ಅಭಿವೃದ್ಧಿಗೆ ಅಡ್ಡಿ ಎದುರಾಗಿದೆ.

ಈ ಹಿಂದೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆಗೆ ವಿಶ್ವಬ್ಯಾಂಕ್ ಸುಮಾರು 300 ಮಿಲಿಯನ್ ಡಾಲರ್(2.5 ಸಾವಿರ ಕೋಟಿ ರೂ.) ಸಾಲ ನೀಡಲು ಒಪ್ಪಿಕೊಂಡಿತ್ತು. ಆದರೆ ಈಗ ಈ ಯೋಜನೆಯನ್ನು ಕೈಬಿಡಲಾಗಿದೆ ಎಂದು ವಿಶ್ವಬ್ಯಾಂಕ್ ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ತೋರಿಸುತ್ತಿದೆ. ಅಲ್ಲದೆ ಯೋಜನೆಗೆ ಸಂಬಂಧಿಸಿದಂತೆ ವಿಶ್ವಬ್ಯಾಂಕ್ ಅಧಿಕಾರಿಗಳು ಕೂಡ ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ, ಜೊತೆಗೆ ಈ ಬಗ್ಗೆ ಯಾವುದೇ ಕಾರಣವನ್ನು ಸ್ಪಷ್ಟಪಡಿಸಿಲ್ಲ.

ರಾಜಧಾನಿ ಅಭಿವೃದ್ಧಿಗಾಗಿ ಅಮರಾವತಿ ವಲಯದಲ್ಲಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂದು ರೈತರು ದೂರು ದಾಖಲಿಸಿದ್ದರು. ಈ ದೂರನ್ನು ವಿಶ್ವಬ್ಯಾಂಕ್ ಪರಿಗಣನೆಗೆ ತೆಗೆದುಕೊಂಡಿದ್ದು, ಸಾಲ ನೀಡುವ ಒಪ್ಪಂದ ಕೈ ಬಿಡುವ ಬಂದಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.

ಟಿಡಿಪಿ(ತೆಲುಗು ದೇಶಂ ಪಕ್ಷ) ಸರ್ಕಾರವಿದ್ದಾಗ ಕೃಷ್ಣ ನದಿಗೆ ಹತ್ತಿರವಾಗಿರುವ ಅಮರಾವತಿ ಪ್ರದೇಶ ಅಭಿವೃದ್ಧಿ ಯೋಜನೆಗಾಗಿ ಬಲವಂತವಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದನ್ನು ವಿರೋಧಿಸಿ ಅನೇಕ ಎನ್‍ಜಿಓಗಳು ಹಾಗೂ ಪರಿಸರವಾದಿಗಳು ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿ, ವಿರೋಧ ವ್ಯಕ್ತಪಡಿಸಿದ್ದರು.

ಚಂದ್ರಬಾಬು ನಾಯ್ಡು ಸರ್ಕಾರವು ಇದನ್ನು ನರೇಂದ್ರ ಮೋದಿ ಸರ್ಕಾರ 2016 ರಲ್ಲಿ ಘೋಷಿಸಿದ ವಿಶೇಷ ಸಹಾಯ ಕ್ರಮಗಳ ಅಡಿಯಲ್ಲಿ, ಬಾಹ್ಯ ನೆರವಿನ ಯೋಜನೆಗಳ ಅಡಿಯಲ್ಲಿ ಪಟ್ಟಿಮಾಡಿದೆ ಎಂದು ವರದಿಯಾಗಿದೆ, ಆದ್ದರಿಂದಾಗಿ ಸಾಲ ಮರುಪಾವತಿ ಹೊರೆಯನ್ನು ಕೇಂದ್ರವು ತೆಗೆದುಕೊಳ್ಳಬೇಕಿತ್ತು.

ಬಾಹ್ಯ ನೆರವಿನ ಯೋಜನೆಯ ಪ್ರಸ್ತಾವನೆಯಂತೆ ಅಮರಾವತಿ ಯೋಜನೆಗೆ ವಿಶ್ವಬ್ಯಾಂಕ್ 300 ಮಿಲಿಯನ್ ಡಾಲರ್ (ಸುಮಾರು 2.5 ಸಾವಿರ ಕೋಟಿ) ಹಾಗೂ ಎಐಐಬಿ 200 ಮಿಲಿಯನ್ ಡಾಲರ್ ಸಾಲ ನೀಡಲು ಒಪ್ಪಿಗೆ ಸೂಚಿಸಿದ್ದವು. ಆದರೆ ಇತ್ತ ವಿಶ್ವಬ್ಯಾಂಕ್ ಈ ಯೋಜನೆ ಕೈ ಬಿಟ್ಟಿದೆ, ಅತ್ತ ಎಐಐಬಿ ಇನ್ನೂ ತನ್ನ ನಿರ್ಧರದ ಬಗ್ಗೆ ಸ್ಪಷ್ಟಪಡಿಸಿಲ್ಲ. ಹೀಗಾಗಿ ಅಮರಾವತಿ ಯೋಜನೆ ಕಾರ್ಯರೂಪಕ್ಕೆ ಬರುವುದು ಕೊಂಚ ಅನುಮಾನವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *