ಗೊಂದಲದಲ್ಲಿ ಆರಂಭವಾದ ಕಾರ್ಮಿಕರ ಮುಷ್ಕರ ಗಲಾಟೆಯಲ್ಲಿ ಅಂತ್ಯ

Public TV
2 Min Read

– ಕಾರ್ಮಿಕರ ಗಲಾಟೆಗೆ ಕಾರಣವಾಯ್ತು ಸಿಎಎ ವಿರೋಧಿ ಹೇಳಿಕೆ

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಇಂದು ವಿವಿಧ ಕಾರ್ಮಿಕ ಸಂಘಟನೆಗಳು ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದವು. ಟೌನ್ ಹಾಲ್‍ನಿಂದ ರ‍್ಯಾಲಿಗೆ ಅವಕಾಶ ಕೊಡದ ಹಿನ್ನೆಲೆ ಎಲ್ಲಿ ಹೋಗಬೇಕು ಎನ್ನುವ ಗೊಂದಲದಲ್ಲಿ ಕಾರ್ಮಿಕರು ಇದ್ದರು. ಕೊನೆಗೆ ಎಲ್ಲಾ ಸಂಘಟನೆಗಳ ಕಾರ್ಮಿಕರು ಬೃಹತ್ ಬಹಿರಂಗ ಸಮಾವೇಶ ನಡೆಸಿದರು. ಈ ವೇಳೆ ಕಾರ್ಮಿಕ ಮುಖಂಡರು ಸಿಎಎ ಹಾಗೂ ಎನ್​ಆರ್​ಸಿ ಬಗ್ಗೆ ಮಾತನಾಡಿದ್ದಕ್ಕೆ ಆಕ್ಷೇಪ ಕೂಡ ವ್ಯಕ್ತವಾಯಿತು.

ಸಮಾವೇಶದಲ್ಲಿ ಕಾರ್ಮಿಕ ವಿರೋಧಿ ನೀತಿಗಳ ಕುರಿತು ಮುಖಂಡರು ಮಾತನಾಡುತ್ತಿದ್ದರು. ಈ ವೇಳೆ ಎಐಟಿಯುಸಿ ಮುಖಂಡ ವಿಜಯ್ ಭಾಸ್ಕರ್ ಮಾತನಾಡುತ್ತಿದ್ದ ಭರದಲ್ಲಿ ಸಿಎಎ ಹಾಗೂ ಎನ್​ಆರ್​ಸಿ ಕುರಿತು ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಸ್ಥಳದಲ್ಲಿ ನೆರೆದಿದ್ದ ಟೊಯೋಟಾ ಕಂಪನಿಯ ಕಾರ್ಮಿಕರು ಆಕ್ಷೇಪ ವ್ಯಕ್ತಪಡಿಸಿದರು. ಇದು ಕಾರ್ಮಿಕರ ಹಕ್ಕುಗಳನ್ನ ಕೇಳುವ ಮುಷ್ಕರ. ಇಲ್ಲಿ ಸಿಎಎ ಹಾಗೂ ಎನ್​ಆರ್​ಸಿ ಬಗ್ಗೆ ಮಾತನಾಡಬೇಡಿ. ಬೇರೆ ವೇದಿಕೆಯಲ್ಲಿ ಮಾತನಾಡಿಕೊಳ್ಳಿ ಎಂದರು. ಇದಕ್ಕೆ ಅಲ್ಲಿದ್ದ ಕೆಲವರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಕಾರ್ಮಿಕರು ಕೈ, ಕೈ ಮಿಲಾಯಿಸಿದರು. ಒಬ್ಬರನ್ನೊಬ್ಬರು ತಳ್ಳಾಡಿದರು. ಒಂದು ಹಂತದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಕಾರ್ಮಿಕರನ್ನು ಇತರೆ ಕಾರ್ಮಿಕರು ಸಮಾವೇಶದಿಂದ ಹೊರ ದಬ್ಬಿದ್ದರು. ಆಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಬಹಿರಂಗ ಸಮಾವೇಶದಲ್ಲಿ ಕಾರ್ಮಿಕರು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಮೆರವಣಿಗೆಗೆ ಅವಕಾಶ ನೀಡದಿದ್ದಕ್ಕೂ ಆಕ್ರೋಶ ವ್ಯಕ್ತಪಡಿಸಿದರು. ಕಾನೂನು ಓದಿದವರು ಯಾರೂ ಈ ರೀತಿ ಮಾಡುವುದಿಲ್ಲ. ಬೆಂಗಳೂರು ಪೊಲೀಸ್ ಆಯುಕ್ತರು ಐಪಿಎಸ್ ನಿಜವಾಗಿಯೂ ಓದಿದ್ದಾರೆಯೇ ಎಂಬ ಅನುಮಾನ ಇದೆ ಎಂದು ವ್ಯಂಗ್ಯವಾಡಿದರು. ಸಮಾವೇಶದ ಕೊನೆಯಲ್ಲಿ ಹಿರಿಯೂರಿನ ಬಿಸಿಯೂಟ, ಕಾರ್ಮಿಕರ ಮೇಲೆ ಲಾಠಿ ಜಾರ್ಚ್ ಖಂಡಿಸುವ ನಿರ್ಣಯ ಮೆರವಣಿಗೆಗೆ ಅವಕಾಶ ನೀಡದೇ ಇರುವ ಆಯುಕ್ತರ ವಿರುದ್ಧ ಖಂಡನಾ ನಿರ್ಣಯಗಳನ್ನು ತೆಗೆದುಕೊಂಡರು.

ಈ ವೇಳೆ ನಾವು ಕರೆಕೊಟ್ಟಿದ್ದು ಸಾರ್ವತ್ರಿಕ ಮುಷ್ಕರಕ್ಕಷ್ಟೇ, ಬಂದ್‍ಗೆ ಅಲ್ಲ ಅನ್ನೋ ಸ್ಪಷ್ಟನೆಯೂ ಕೇಳಿ ಬಂತು. ಬಂದ್ ಅನ್ನೋದು ಮಾಧ್ಯಮಗಳ ಸೃಷ್ಟಿ ಅನ್ನೋ ಗೂಬೆ ಕೂರಿಸುವ ಕೆಲಸವೂ ನಡೆಯಿತು. ಬಂದ್ ಯಶಸ್ವಿಯಾಗದೇ ಇದ್ದರೂ ಸಮಾವೇಶ ಮಾತ್ರ ಯಶಸ್ವಿಯಾಗಿ ನೆರವೇರಿತು.

ಇತ್ತ ಬೆಳಗ್ಗೆ ಪೀಣ್ಯ ಸೆಕೆಂಡ್ ಸ್ಟೇಜ್‍ನಲ್ಲಿ ಒಟ್ಟುಗೂಡಿದ ಪ್ರತಿಭಟನಾಕಾರರು ಸಿಐಟಿಯು ಬಾವುಟ ಹಿಡಿದು ರಸ್ತೆಯಲ್ಲಿ ಪ್ರತಿಭಟನೆಗೆ ಕೂತಿದ್ದರು. ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪೀಣ್ಯ ಸೆಕೆಂಡ್ ಸ್ಟೇಜ್‍ನಿಂದ ಜಾಲಹಳ್ಳಿ ಕ್ರಾಸ್‍ವರೆಗೆ ಐದು ಕಿ.ಮೀವರೆಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಿದರು. ಜಾಲಹಳ್ಳಿ ಕ್ರಾಸ್‍ನಲ್ಲಿ ಎನ್.ಎಚ್ 4ಕ್ಕೆ ಹೋಗದಂತೆ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ನಿಯಂತ್ರಿಸಿದರು.

ಗಾರ್ಮೆಂಟ್ಸ್ ಗಳಲ್ಲಿ ಮಹಿಳೆಯರು ಮ್ಯಾನೇಜರ್ ಗಳಿಂದ ಲೈಂಗಿಕ ಕಿರುಕುಳ ಅನುಭವಿಸ್ತಿದ್ದಾರೆ. ಹೀಗಾಗಿ ಸಾವಿರಾರು ಮಹಿಳೆಯರು ಉದ್ಯೋಗ ಕಳೆದುಕೊಂಡು ಮನೆ ಸೇರಿದ್ದಾರೆ. ಕೇಂದ್ರ ಈ ಕೂಡಲೇ ಕಾರ್ಮಿಕರ ಬೇಡಿಕೆಗಳನ್ನ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸದ್ಯ ಕಾರ್ಮಿಕ ಮುಷ್ಕರ ಮಿಶ್ರ ಪ್ರತಿಕ್ರಿಯೆ, ಗೊಂದಲ, ಆಕ್ರೋಶ, ಜಟಾಪಟಿಯಲ್ಲಿ ಮುಕ್ತಾಯವಾಗಿದೆ. ಕಾರ್ಮಿಕರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಪರಿಶೀಲಿಸಿ ನ್ಯಾಯ ಒದಗಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *