ಅಮ್ಮ ನನ್ನ ಬಗ್ಗೆ ಚಿಂತಿಸಬೇಡ, ಸಮಯಕ್ಕೆ ಸರಿಯಾಗಿ ಊಟ ಮಾಡಿ – ಸುರಂಗದಲ್ಲಿ ಸಿಲುಕಿದ ಕಾರ್ಮಿಕನ ಭಾವುಕ ಸಂದೇಶ

Public TV
2 Min Read

ಡೆಹ್ರಾಡೂನ್‌: ʻʻಅಮ್ಮ ನನ್ನ ಬಗ್ಗೆ ಚಿಂತಿಸಬೇಡ, ನಾನು ಚೆನ್ನಾಗಿದ್ದೇನೆ, ದಯವಿಟ್ಟು ನೀವು ಮತ್ತು ಅಪ್ಪ, ಸಮಯಕ್ಕೆ ಸರಿಯಾಗಿ ಊಟ ಮಾಡಿ, ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ…ʼʼ ಕಳೆದ 10 ದಿನಗಳಿಂದ ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರೊಬ್ಬರು (Labor) ತಮ್ಮ ತಾಯಿಗೆ ತಲುಪಿಸಿದ ಭಾವುಕ ಸಂದೇಶ ಇದಾಗಿತ್ತು.

ಸಿಲ್ಕಿಯಾರ ಸುರಂಗದೊಳಗೆ (Silkyara Tunnel) ಸಿಲುಕಿರುವ 41 ಕಾರ್ಮಿಕರಿಗೆ ಕಳೆದ 10 ದಿನಗಳಿಂದ 6 ಇಂಚಿನ ಪೈಪ್ ಮೂಲಕ ನೀರು, ಆಹಾರ ಕಳುಹಿಸಲಾಗುತ್ತಿದೆ. ಇದೀಗ ಕಾರ್ಮಿಕರು ಸುರಕ್ಷಿತರಾಗಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ಇದೇ ಪೈಪ್ ಮೂಲಕ ಎಂಡೋಸ್ಕೋಪಿ ಕ್ಯಾಮೆರಾವನ್ನ ಸುರಂಗದೊಳಗೆ ಕಳುಸಿದ್ದು, ಕಾರ್ಮಿಕರ ದೃಶ್ಯಗಳನ್ನ ಸೆರೆಹಿಡಿಯಲಾಗಿದೆ. ಸ್ವಲ್ಪ ಸಮಯದ ನಂತ್ರ ಕಾರ್ಮಿಕರೊಂದಿಗೆ ಸಂವಹನ ನಡೆಸಲಾಗಿದ್ದು, ಇದರಿಂದ ಕಾರ್ಮಿಕರ ರಕ್ಷಣೆಗೆ ಬಹುತೇಕ ಪರಿಹಾರ ಸಿಕ್ಕಂತಾಗಿದೆ. ಇದನ್ನೂ ಓದಿ: ಭಾರತೀಯರ ಹತ್ಯೆಗೆ ಈ ಸಂಘಟನೆಯೇ ಹೊಣೆ: ಲಷ್ಕರ್‌-ಎ-ತೊಯ್ಬಾ ಬ್ಯಾನ್‌ ಮಾಡಿದ ಇಸ್ರೇಲ್‌

ರಕ್ಷಣಾ ತಂಡದ ಅಧಿಕಾರಿಗಳು ಸುರಂಗದಲ್ಲಿ ಸಿಲುಕಿಕೊಂಡವರೊಂದಿಗೆ ಸಂವಹನ ನಡೆಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈ ವೇಳೆ ಸುರಂಗದಲ್ಲಿ ಸಿಲುಕಿದ ಕಾರ್ಮಿಕರಲ್ಲಿ ಒಬ್ಬರಾದ ಜೈದೇವ್‌, ಮೇಲ್ವಿಚಾರಕರೊಂದಿಗೆ ಮಾತನಾಡುತ್ತಾ ತನ್ನ ಹೇಳಿಕೆಯನ್ನ ರೆಕಾರ್ಡ್‌ ಮಾಡುವಂತೆ ಕೇಳಿಕೊಂಡಿದ್ದಾರೆ. ಬಳಿಕ ಹೇಳಿಕೆಯನ್ನು ತನ್ನ ತಾಯಿಗೆ ತಲುಪಿಸುವಂತೆ ಕೋರಿಕೊಂಡಿದ್ದಾರೆ. ಮೇಲ್ವಿಚಾರಕರು ಕಾರ್ಮಿಕನ ಹೇಳಿಕೆ ರೆಕಾರ್ಡ್‌ ಮಾಡುತ್ತಿದ್ದಂತೆ, ಅಮ್ಮ ನನ್ನ ಬಗ್ಗೆ ಚಿಂತಿಸಬೇಡ, ನಾನು ಚೆನ್ನಾಗಿದ್ದೇನೆ, ದಯವಿಟ್ಟು ನೀವು ಮತ್ತು ಅಪ್ಪ ಸಮಯಕ್ಕೆ ಸರಿಯಾಗಿ ಊಟ ಮಾಡಿ ಆರೋಗ್ಯ ನೋಡಿಕೊಳ್ಳಿ ಎಂದು ಭಾವುಕ ನುಡಿಗಳನ್ನಾಡಿದ್ದಾರೆ. ಬಳಿಕ ಮೇಲ್ವಿಚಾರಕರು ಚಿಂತಿಸಬೇಡಿ ಶೀಘ್ರದಲ್ಲೇ ಸ್ಥಳಾಂತರಿಸುವುದಾಗಿ ಅಭಯ ನೀಡಿದ್ದಾರೆ.

ಕಾರ್ಮಿಕರ ಸುರಕ್ಷತೆಗೆ ಹವನ ಯಾಗ: ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ಸುರಕ್ಷತೆಗಾಗಿ ಜಮ್ಮು ಮತ್ತು ಕಾಶ್ಮೀರ ವಿಭಾಗದ ಬಜರಂಗದಳ ಹವನ ಯಾಗ ನಡೆಸಿ ಪ್ರಾರ್ಥಿಸಿದೆ. ಇದನ್ನೂ ಓದಿ: ಹಸು ಸಗಣಿ ಕೆಜಿಗೆ 2 ರೂ., ರಾಜ್ಯದ ಪ್ರತಿ ಮಗುವಿಗೂ ಇಂಗ್ಲಿಷ್‌ ಶಿಕ್ಷಣ – ರಾಜಸ್ಥಾನಕ್ಕೆ ಕಾಂಗ್ರೆಸ್‌ ಗ್ಯಾರಂಟಿ

ಸದ್ಯ ರಕ್ಷಣಾ ಅಧಿಕಾರಿಗಳು ವಾಕಿ ಟಾಕೀಸ್ ಮೂಲಕ ಕೆಲ ಕಾರ್ಮಿಕರೊಂದಿಗೆ ಮಾತನಾಡಿದ್ದಾರೆ. ಸೆರೆಹಿಡಿಯಲಾದ ವೀಡಿಯೋದಲ್ಲಿ ರಕ್ಷಣಾ ಅಧಿಕಾರಿಗಳು ಕಾರ್ಮಿಕರಿಗೆ ಕ್ಯಾಮೆರಾ ಮುಂದೆ ಬರುವಂತೆ ಕೇಳಿರುವುದು ಕಂಡುಬಂದಿದೆ. ಕಾರ್ಮಿಕರಿಗೆ ಮೊಬೈಲ್, ಚಾರ್ಜರ್‌ಗಳನ್ನು ಪೈಪ್ ಮೂಲಕ ಕಳುಹಿಸಲಾಗುವುದು ಎಂದು ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ಕರ್ನಲ್ ದೀಪಕ್ ಪಾಟೀಲ್ ಹೇಳಿದ್ದಾರೆ.

ಕಾರ್ಮಿಕರು ಸುರಂಗದೊಳಗೆ ಸಿಲುಕಿದಾಗಿನಿಂದ ಅವರಿಗೆ ಸೇವಿಸಲು ಪೈಪ್ ಮೂಲಕ ಒಣ ಹಣ್ಣುಗಳನ್ನು ಮಾತ್ರವೇ ಕಳುಹಿಸಲಾಗಿತ್ತು. ಕಳೆದ ರಾತ್ರಿ ಗಾಜಿನ ಬಾಟಲಿಗಳಲ್ಲಿ ಕಿಚಡಿಯನ್ನು ತುಂಬಿ ಕಳುಹಿಸಲಾಗಿದೆ. ಈ ಮೂಲಕ 10 ದಿನಗಳ ಬಳಿಕ ಕಾರ್ಮಿಕರಿಗೆ ಬಿಸಿ ಊಟ ದೊರಕಿದಂತಾಗಿದೆ. ಇದನ್ನೂ ಓದಿ: ಸುರಂಗದೊಳಗೆ ಸಿಲುಕಿ 10 ದಿನ – ಪೈಪ್ ಮೂಲಕ ಕ್ಯಾಮೆರಾ ಕಳುಹಿಸಿ ಕಾರ್ಮಿಕರ ಮೊದಲ ವೀಡಿಯೋ ಸೆರೆ

Share This Article