ನವದೆಹಲಿ: ದೆಹಲಿಯ (Delhi) ಸಾಕೇತ್ ಕೋರ್ಟ್‌ನಲ್ಲಿ (Saket Court) ಕೆಲಸ ಮಾಡುತ್ತಿದ್ದ ಕ್ಲರ್ಕ್ ಒಬ್ಬರು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸದ ಅಪಾರ ಒತ್ತಡ ಮತ್ತು ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಹರೀಶ್ ಸಿಂಗ್ ಎಂದು ಗುರುತಿಸಿದ್ದು, ಹರೀಶ್ ಸಿಂಗ್ ಕೋರ್ಟ್ ದಾಖಲೆಗಳ ನಿರ್ವಹಣೆ ಮತ್ತು ನ್ಯಾಯಾಧೀಶರಿಗೆ ಸಹಾಯ ಮಾಡುವ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಸರ್ಕಾರಿ ನಿಯಮಗಳ ಪ್ರಕಾರ ಶೇ.60ರಷ್ಟು ದೈಹಿಕ ಅಂಗವಿಕಲತ್ವ (ದಿವ್ಯಾಂಗತೆ) ಪ್ರಮಾಣಪತ್ರವಿತ್ತು. ಇದರಿಂದಾಗಿ ಕೆಲಸದ ಒತ್ತಡವನ್ನು ಸಹಿಸಿಕೊಳ್ಳುವುದು ಇವರಿಗೆ ಇನ್ನಷ್ಟು ಕಷ್ಟಕರವಾಗಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ದಂಪತಿ ಏಕಾಂತದಲ್ಲಿದ್ದಾಗ ಮಾಸ್ಟರ್ ಕೀ ಬಳಸಿ ರೂಮ್‌ಗೆ ನುಗ್ಗಿದ ಸಿಬ್ಬಂದಿ; ಲೀಲಾ ಪ್ಯಾಲೇಸ್ ಹೋಟೆಲ್‌ಗೆ 10 ಲಕ್ಷ ದಂಡ
ಇಂದು ಕೋರ್ಟ್ ಕಾರ್ಯಕಲಾಪಗಳು ನಡೆಯುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದ್ದು, ಘಟನೆಯಿಂದ ಕೋರ್ಟ್‌ನಲ್ಲಿ ಕೆಲ ಕಾಲ ಕಾರ್ಯಗಳು ಸ್ಥಗಿತಗೊಂಡವು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಅಪರಾಧದ ಆರೋಪವಿಲ್ಲದೆ, ಕೆಲಸದ ಒತ್ತಡದಿಂದಾಗಿ ನಡೆದ ಆತ್ಮಹತ್ಯೆ ಎಂದು ವರ್ಗೀಕರಿಸಲಾಗಿದೆ.

