ಮಹಿಳಾ ವಿಶ್ವಕಪ್‌ | ಭಾರತದ ವನಿತೆಯರ ಪರಾಕ್ರಮ – ಪಾಕ್‌ ವಿರುದ್ಧ 88 ರನ್‌ಗಳ ಭರ್ಜರಿ ಜಯ

Public TV
2 Min Read

ಕೊಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡ ಪಾಕ್‌ ವಿರುದ್ಧ 88 ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್‌ ಬೀಸಿದ ಟೀಂ ಇಂಡಿಯಾ ಪಾಕ್‌ಗೆ 248 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಎದುರಾಳಿ ತಂಡ 43 ಓವರ್‌ಗಳಲ್ಲಿ 159 ರನ್‌ ಗಳಿಸಿ ಆಲೌಟ್‌ ಆಯಿತು.

ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಹಾಗೂ ಪ್ರತಿಕಾ ರಾವಲ್‌ ಜೋಡಿ 54 ಎಸೆತಗಳಲ್ಲಿ 48 ರನ್‌ ಸೇರಿಸಿತು. ಸ್ಮೃತಿ ಮಂಧಾನ 4 ಬೌಂಡರಿ ನೆರವಿನಿಂದ 23 ರನ್‌, ಪ್ರತಿಕಾ ರಾವಲ್‌ 5 ಬೌಂಡರಿ ಸಹಾಯದಿಂದ 31 ರನ್ ಗಳಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಹರ್ಲಿನ್‌ ಡಿಯೋಲ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ಮಾಡಿದರು. ಇವರಿಗೆ ಹರ್ಮನ್‌ ಪ್ರೀತ್ ಕೌರ್ ಉತ್ತಮ ಸಾಥ್ ನೀಡಲಿಲ್ಲ. 5ನೇ ವಿಕೆಟ್‌ಗೆ ಹರ್ಲಿನ್ ಜೊತೆಗೂಡಿದ ಜೆಮಿಮಾ ರೋಡ್ರಿಗ್ಸ್‌ ಉತ್ತಮ ಬ್ಯಾಟ್ ಮಾಡಿದರು. ಈ ಜೋಡಿ 52 ಎಸೆತಗಳಲ್ಲಿ 45 ರನ್‌ ಸೇರಿಸಿತು. ಈ ವೇಳೆ ಜೇಮಿಮಾ 32 ರನ್‌ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ಸ್ನೇಹಾ ರಾಣಾ 20 ರನ್‌ ಸಿಡಿಸಿದರು. ದೀಪ್ತಿ ಶರ್ಮಾ 25 ರನ್‌ ಸಿಡಿಸಿದರು.

 

ಮಧ್ಯಮ ಕ್ರಮಾಂಕದಲ್ಲಿ ಹರ್ಲಿನ್‌ ಡಿಯೋಲ್‌ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ 46 ರನ್‌ ಬಾರಿಸಿ ಔಟ್ ಆದರು. ವಿಕೆಟ್‌ ಕೀಪರ್ ರಿಚಾ ಘೋಷ್‌ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 35 ರನ್‌ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 247 ರನ್‌ಗಳಿಗೆ ಆಲೌಟ್ ಆಯಿತು.

ಪಾಕ್‌ ಪರ ಸಿದ್ರಾ ಅಮೀನ್ 106 ಎಸೆತಗಳಲ್ಲಿ 81‌ ರನ್, ನಟಾಲಿಯಾ ಪೆರ್ವೈಜ್ 46 ಎಸೆತಗಳಲ್ಲಿ 33 ರನ್,‌ ಸಿದ್ರಾ ನವಾಜ್‌ 22 ಎಸೆತಗಳಲ್ಲಿ 14 ರನ್‌ ಸಿಡಿಸಿದರು. ಉಳಿದ ಬ್ಯಾಟರ್‌ಗಳ ಒಂದಂಕಿಯನ್ನು ಮೀರದಂತೆ ಭಾರತದ ಬೌಲರ್‌ಗಳು ತಡೆದರು.

ಇನ್ನೂ ಪಂದ್ಯದ ವೇಳೆ ವಿಪರೀತ ಸೊಳ್ಳೆಗಳ ಕಾಟ ಎದುರಾಗಿತ್ತು. ಈ ವೇಳೆ ಕ್ರಿಮಿನಾಶಕ ಸಿಂಪಡಿಸಲಾಯಿತು. ಇದರಿಂದ 15 ನಿಮಿಷಗಳ ಕಾಲ ಪಂದ್ಯ ನಿಂತು, ಪುನರಾರಂಭಗೊಂಡಿತು.

Share This Article