29 ಎಸೆತಗಳಲ್ಲಿ ಹ್ಯಾಟ್ರಿಕ್ ಸೇರಿ 10 ವಿಕೆಟ್ ಕಿತ್ತ ಕಾಶ್ವಿ ಗೌತಮ್ – ವಿಡಿಯೋ

Public TV
2 Min Read

– ಇತಿಹಾಸ ಬರೆದ ಚಂಡೀಗಢದ ವೇಗದ ಬೌಲರ್

ಹೈದರಾಬಾದ್: ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ನಲ್ಲಿ ಎಲ್ಲಾ 10 ವಿಕೆಟ್‍ಗಳನ್ನು ದಾಖಲೆ ನಿರ್ಮಿಸಿದ್ದರು. ಈಗ ಚಂಡೀಗಢದ 16 ವರ್ಷದ ವೇಗದ ಬೌಲರ್ ಕಾಶ್ವಿ ಗೌತಮ್ ಸೀಮಿತ ಓವರಿನಲ್ಲಿ 10 ವಿಕೆಟ್ ಕಿತ್ತು ಕಿರಿಯರ ವಿಭಾಗದಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಆಂಧ್ರ ಪ್ರದೇಶದ ಕೆಎಸ್‌ಆರ್‌ಎಂ ಕಾಲೇಜು ಮೈದಾನದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಮಂಗಳವಾರ ನಡೆದ ದೇಶಿಯ ಕ್ರಿಕೆಟ್‍ನ ಅಂಡರ್-19 ಏಕದಿನ ಟ್ರೋಫಿಯಲ್ಲಿ 10 ವಿಕೆಟ್ ಗಳಿಸಿ ಕಾಶ್ವಿ ಗೌತಮ್ ಮಿಂಚಿದ್ದಾರೆ. ಜೊತೆಗೆ ಇದೇ ಪಂದ್ಯದಲ್ಲಿ ಕಾಶ್ವಿ ಗೌತಮ್ ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿದ್ದಾರೆ.

ಕಾಶ್ವಿ 4.5 ಓವರ್ ಬೌಲಿಂಗ್ ಮಾಡಿ ಕೇವಲ 12 ರನ್‍ಗಳನ್ನು ಬಿಟ್ಟುಕೊಟ್ಟರು. ಈ ಪಂದ್ಯದಲ್ಲಿ ಚಂಡೀಗಢ ತಂಡವು ಅರುಣಾಚಲ ಪ್ರದೇಶವನ್ನು ಕೇವಲ 25 ರನ್‍ಗಳಿಗೆ ಆಲೌಟ್ ಮಾಡಿತು. ಸೀಮಿತ ಓವರ್‍ಗಳ ಕ್ರಿಕೆಟ್‍ನಲ್ಲಿ 10 ವಿಕೆಟ್ ಪಡೆದ ಮೊದಲ ಮಹಿಳಾ ಬೌಲರ್ ಎಂಬ ಹೆಗ್ಗಳಿಕೆಗೆ ಕಾಶ್ವಿ ಗೌತಮ್ ಪಾತ್ರರಾಗಿದ್ದಾರೆ.

ಬಿಸಿಸಿಐ ಅಂಡರ್ -19 ಏಕದಿನ ಟೂರ್ನಿಯಲ್ಲಿ ಚಂಡೀಗಢ ಮೊದಲು ಬ್ಯಾಟಿಂಗ್ ಮಾಡಿ 4 ವಿಕೆಟ್‍ಗಳಿಗೆ 186 ರನ್ ಗಳಿಸಿತ್ತು. ಈ ಸಮಯದಲ್ಲಿ ಚಂಡೀಗಢ ಕ್ಯಾಪ್ಟನ್ ಕಾಶ್ವಿ 68 ಎಸೆತಗಳಲ್ಲಿ 49 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. 187 ರನ್ ಗುರಿ ಬೆನ್ನಟ್ಟಿದ ಅರುಣಾಚಲ ಪ್ರದೇಶ ತಂಡವು 8.5 ಓವರ್‍ಗಳಲ್ಲಿ 25 ರನ್ ಗಳಿಸಿ ಸರ್ವಪತನ ಕಂಡಿತು.

ಬಿಸಿಸಿಐ ಮಹಿಳಾ ಟ್ವಿಟ್ಟರ್ ಖಾತೆ ಹಾಗೂ ಐಸಿಸಿ, ಕಾಶ್ವಿ ಗೌತಮ್ 10 ವಿಕೆಟ್ ಪಡೆದ ವಿಡಿಯೋವನ್ನು ಟ್ವೀಟ್ ಮಾಡಿ ಅಭಿನಂದಿಸಿದೆ. ಭಾರತವು ತನ್ನ ರಾಷ್ಟ್ರೀಯ ತಂಡಕ್ಕೆ 16 ವರ್ಷದ ಕಾಶ್ವಿ ಅವರನ್ನು ಸೇರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಕೇಳಿದೆ.

ಬಿಸಿಸಿಐ ಅಂಡರ್ -19 ಏಕದಿನ ಟೂರ್ನಿಯಲ್ಲಿ ಕಾಶ್ವಿ ಇದುವರೆಗೆ ಮೂರು ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಇದಕ್ಕೂ ಮೊದಲು ಅವರು ಜಮ್ಮು ಮತ್ತು ಕಾಶ್ಮೀರ ವಿರುದ್ಧ 7 ವಿಕೆಟ್ ಪಡೆದಿದ್ದರು.

ಅಂತರರಾಷ್ಟ್ರೀಯ ಪಂದ್ಯವೊಂದರ ಇನ್ನಿಂಗ್ಸ್‍ನಲ್ಲಿ 10 ವಿಕೆಟ್:
ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಸಂಬಂಧಿಸಿದಂತೆ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್‍ಗಳನ್ನು ಪಡೆದ ಬೌಲರ್‍ಗಳ ಪಟ್ಟಿಯಲ್ಲಿ ಭಾರತದ ಅನಿಲ್ ಕುಂಬ್ಳೆ ಹಾಗೂ ಇಂಗ್ಲೆಂಡ್‍ನ ಜಿಮ್ ಲೇಕರ್ ಮಾತ್ರ ಇದ್ದಾರೆ. 1956ರಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ವಿರುದ್ಧ ಲೇಕರ್ 10 ವಿಕೆಟ್ ಕಿತ್ತಿದ್ದರು. ಈ ಸಮಯದಲ್ಲಿ ಅವರು 51.2 ಓವರ್ ಬೌಲಿಂಗ್ ಮಾಡಿದ್ದರು. 1999ರಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ 26.3 ಓವರ್ ಬೌಲಿಂಗ್ ಮಾಡಿ 10 ವಿಕೆಟ್ ಪಡೆದು ದಾಖಲೆ ಬರೆದಿದ್ದರು.

ಟೆಸ್ಟ್ ಸ್ವರೂಪದಲ್ಲಿ ಅನಿಲ್ ಕುಂಬ್ಳೆ ಹಾಗೂ ಜಿಮ್ ಲೇಕರ್ ದಾಖಲೆ ಬರೆದಿದ್ದಾರೆ. ಆದರೆ ಇದುವರೆಗೂ ಅಂತರರಾಷ್ಟ್ರೀಯ ಏಕದಿನ ಅಥವಾ ಟಿ20ಗಳಲ್ಲಿ ಯಾವುದೇ ಬೌಲರ್ ಇದುವರೆಗೆ ಎಲ್ಲಾ 10 ವಿಕೆಟ್‍ಗಳನ್ನು ಪಡೆದಿಲ್ಲ. ಏಕದಿನ ಪಂದ್ಯವೊಂದರಲ್ಲಿ ಅತ್ಯುತ್ತಮ ವ್ಯಕ್ತಿಗಳ ದಾಖಲೆಯನ್ನು ಶ್ರೀಲಂಕಾದ ಚಮಿಂಡ ವಾಸ್ ಅವರು ಜಿಂಬಾಬ್ವೆ ವಿರುದ್ಧ ಮಾಡಿದ್ದರು. ಅವರು ಕೇವಲ 19 ರನ್ ನೀಡಿ 8 ವಿಕೆಟ್ ಪಡೆಸಿದ್ದರು. ಮತ್ತೊಂದೆಡೆ ಟಿ20ಯಲ್ಲಿ ಬಾಂಗ್ಲಾದೇಶ ವಿರುದ್ಧ ನಾಗ್ಪುರದಲ್ಲಿ ಟೀಂ ಇಂಡಿಯಾ ಬೌಲರ್ ದೀಪಕ್ ಚಹರ್ 7 ರನ್ ನೀಡಿ 6 ವಿಕೆಟ್ ಕಿತ್ತಿದ್ದರು.

Share This Article
Leave a Comment

Leave a Reply

Your email address will not be published. Required fields are marked *