ಭಾರತೀಯ ಕ್ರಿಕೆಟ್ ಆಟಗಾರ್ತಿಯರಿಗೆ ಏರ್‌ಪೋರ್ಟಿನಲ್ಲಿ ಅವಮಾನ

Public TV
2 Min Read

– ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಮುಂಬೈ: ಭಾರತದಲ್ಲಿ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ಸ್ವಾಗತದ ವಿಚಾರವಾಗಿ ಮತ್ತೊಮ್ಮೆ ಭಾರೀ ಚರ್ಚೆ ಆರಂಭವಾಗಿದೆ. ಕಳೆದ ಭಾನುವಾರ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‍ನಲ್ಲಿ ಸೋಲಿನ ಬಳಿಕ ನಾಯಕಿ ಹರ್ಮನ್‍ಪ್ರೀತ್ ಕೌರ್ ಪಡೆ ಮಂಗಳವಾರ ಮುಂಬೈ ವಿಮಾನ ನಿಲ್ದಾಣಕ್ಕೆ ಮರಳಿತು. ಆದರೆ ಈ ವೇಳೆ ಯಾರೊಬ್ಬರೂ ಅವರನ್ನು ಸ್ವಾಗತಿಸಲಿಲ್ಲ. ಇದು ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಮಾಡಿದ ಅವಮಾನ ಎಂಬ ಮಾತು ಕೇಳಿ ಬರುತ್ತಿದೆ.

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೇಂದ್ರ ಕಚೇರಿ ಇರುವ ನಗರದಲ್ಲೇ ಮಹಿಳಾ ಆಟಗಾರ್ತಿಯರಿಗೆ ಅವಮಾನ ಮಾಡಲಾಗಿದೆ. ಟೀಂ ಇಂಡಿಯಾ ಪುರುಷ ಕ್ರಿಕೆಟರ್ ಹಾಗೂ ಮಹಿಳಾ ಆಟಗಾರ್ತಿಯರ ಮಧ್ಯೆ ಬಿಸಿಸಿಐ ತಾರತಮ್ಯ ತೋರುತ್ತಿದೆ ಎಂದು ಕ್ರಿಕೆಟ್ ಅಭಿಮಾನಿಗಳು ದೂರಿದ್ದಾರೆ.

ಆದರೆ ಕೆಲ ಅಭಿಮಾನಿಗಳು, ಕೊರೊನಾ ಭೀತಿ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಹೋಗದಿರಬಹುದು. ಒಂದು ವೇಳೆ ಕೊರೊನಾ ಆತಂಕ ಇಲ್ಲದೇ ಇದ್ದಲ್ಲಿ ಪ್ರಶ್ನಿಸುವುದು ಸರಿಯಾಗಿದೆ. ಆದರೆ ಈ ಪರಿಸ್ಥಿತಿಯಲ್ಲಿ ಅವಮಾನ ಎಂದು ಹೇಳುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2009ರಿಂದ ಆರಂಭವಾದ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಇದೇ ಮೊದಲ ಬಾರಿ ಭಾರತ ಫೈನಲ್ ತಲುಪಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಚೊಚ್ಚಲ ಚಾಂಪಿಯನ್‍ಶಿಪ್ ಪಟ್ಟವನ್ನು ಕೈಚೆಲ್ಲಿಕೊಂಡಿತು. ಇತ್ತ ಆತಿಥೇಯ ಆಸ್ಟ್ರೇಲಿಯಾ ತಂಡವು ಏಳು ಆವೃತ್ತಿಗಳಲ್ಲಿ ಐದನೇ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.

ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಫೈನಲ್ ತಲುಪಿದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಇದಕ್ಕೂ ಮುನ್ನ ಎ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು 17 ರನ್‍ಗಳಿಂದ ಸೋಲಿಸಿತ್ತು. ಆದರೆ ಫೈನಲ್‍ನಲ್ಲಿ ಗೆಲುವು ದಾಖಲಿಸುವಲ್ಲಿ ವಿಫಲವಾಯಿತು.

ದೇಶ, ವಿದೇಶಗಳಲ್ಲಿ ಹರಡಿರುವ ಕೊರೊನಾ ವೈರಸ್‍ನಿಂದಾಗಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರು ದೇಶಕ್ಕೆ ಮರಳಲು ಭಾರೀ ಸಂಕಷ್ಟ ಎದುರಿಸುವಂತಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ತಾಯ್ನಾಡಿಗೆ ಮರಳಿ ಮನೆಗೆ ಹಿಂದಿರುಗುವಾಗ ಸ್ವಾಗತ ಕೋರಲು ಯಾರೊಬ್ಬರೂ ಇಲ್ಲದೆ ಇರುವುದನ್ನು ನೋಡಿ ಆಟಗಾರ್ತಿಯರು ಇನ್ನಷ್ಟು ನಿರಾಶೆಗೊಂಡಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ನಾಯಕಿ ಹರ್ಮನ್‍ಪ್ರೀತ್ ಮತ್ತು ಆಲ್‍ರೌಂಡರ್ ವೇದ ಕೃಷ್ಣಮೂರ್ತಿ ಅವರು ಅಸಮಾಧಾನ ಹಾಗೂ ನಿರಾಶೆ ವ್ಯಕ್ತಪಡಿಸಿದ ಫೋಟೋಗಳು ಟ್ವಿಟರ್‌ನಲ್ಲಿ ವೈರಲ್ ಆಗಿವೆ.

ಪ್ರಶಸ್ತಿ ಘೋಷಿಸಿಲ್ಲ:
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಆಟಗಾರ್ತಿಯರು ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಈವರೆಗೂ ಯಾವುದೇ ರಾಜ್ಯದ ಸರ್ಕಾರವೂ ಆಟಗಾರ್ತಿಯರಿಗೆ ಯಾವುದೇ ರೀತಿಯ ಬಹುಮಾನವನ್ನು ಘೋಷಿಸಿಲ್ಲ. ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ತೋರಿದ ಹರಿಯಾಣದ ಶಫಾಲಿ ವರ್ಮಾ ಅವರಿಗೆ ಅಲ್ಲಿನ ಸರ್ಕಾರವು ಯಾವುದೇ ಗೌರವವನ್ನು ಇನ್ನೂ ನೀಡಿಲ್ಲ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *