ಮಹಿಳಾ ಟಿ20 ಚಾಲೆಂಜ್ ಫೈನಲ್ – ವೆಲಾಸಿಟಿ ವಿರುದ್ಧ ಗೆದ್ದ ಸೂಪರ್ನೋವಾಸ್ ಚಾಂಪಿಯನ್

Public TV
1 Min Read

ಪುಣೆ: ಮಹಿಳಾ ಟಿ20 ಚಾಲೆಂಜ್ ಫೈನಲ್ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ ಸೂಪರ್ನೋವಾಸ್ 4 ರನ್‌ಗಳ ರೋಚಕ ಜಯ ದಾಖಲಿಸಿ ಚಾಂಪಿಯನ್ ಆಗಿದೆ.

ಗೆಲ್ಲಲು 166 ರನ್ ಗುರಿ ಪಡೆದ ವೆಲಾಸಿಟಿ ಪರ ಲಾರಾ ವೊಲ್ವಾರ್ಡ್ಟ್ ಅಜೇಯ 65 ರನ್‌ (44 ಎಸೆತ, 5 ಬೌಂಡರಿ, 3 ಸಿಕ್ಸ್) ಸಿಡಿಸಿ ಕೊನೆಯ ಎಸೆತದವರೆಗೆ ಗೆಲುವಿಗಾಗಿ ಕೆಚ್ಚೆದೆಯ ಹೋರಾಟ ನಡೆಸಿದರು. ಇವರಿಗೆ ಉಳಿದ ಬ್ಯಾಟರ್‌ಗಳು ಉತ್ತಮ ಸಾಥ್‌ ನೀಡಲು ವಿಫಲರಾದರು. ಇತರ ಬ್ಯಾಟರ್‌ಗಳನ್ನು ಅಬ್ಬರಿಸಲು ಸೂಪರ್ನೋವಾಸ್ ತಂಡದ ಬೌಲರ್ಸ್ ಅವಕಾಶ ನೀಡಲಿಲ್ಲ. ಸ್ಲಾಗ್‌ ಓವರ್‌ಗಳಲ್ಲಿ ಸಿಮ್ರಾನ್ ಬಹದ್ದೂರ್ ಗೆಲುವಿಗಾಗಿ ಹೋರಾಡಿದರೂ ಗೆಲುವಿನ ದಡ ಸೇರಿಸಲು ಸಾಧ್ಯವಾಗದೆ ಅಂತಿಮವಾಗಿ ವೆಲಾಸಿಟಿ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 161 ರನ್ ಪೇರಿಸಲಷ್ಟೇ ಶಕ್ತವಾಗಿ ಫೈನಲ್‍ನಲ್ಲಿ ಮುಗ್ಗರಿಸಿತು. ಸೂಪರ್ನೋವಾಸ್ ಪರ ಅಲಾನಾ ಕಿಂಗ್ ಪ್ರಮುಖ 3 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಬಾರಿ ಮಹಿಳಾ ಟಿ20 ಚಾಲೆಂಲ್‍ಗೆ ಸೂಪರ್ನೋವಾಸ್, ಟ್ರೈಲ್ಬ್ಲೇಜರ್ಸ್ ಮತ್ತು ವೆಲಾಸಿಟಿ ಮೂರು ತಂಡಗಳು ಭಾಗವಹಿಸಿದ್ದವು. ಸೂಪರ್ನೋವಾಸ್‍ಗೆ ಹರ್ಮನ್ ಪ್ರೀತ್ ಕೌರ್, ಟ್ರೈಲ್ಬ್ಲೇಜರ್ಸ್‍ಗೆ ಸ್ಮೃತಿ ಮಂದಾನ ಮತ್ತು ವೆಲಾಸಿಟಿ ತಂಡಕ್ಕೆ ದೀಪ್ತಿ ಶರ್ಮಾ ನಾಯಕಿಯಾಗಿದ್ದರು. ಪುಣೆಯ ಎಮ್‍ಸಿಎ ಮೈದಾನದಲ್ಲಿ ಎಲ್ಲಾ ಪಂದ್ಯಗಳು ನಡೆಯಿತು. ಸೂಪರ್ನೋವಾಸ್ ಮತ್ತು ವೆಲಾಸಿಟಿ ತಂಡಗಳು ಫೈನಲ್‍ನಲ್ಲಿ ಮುಖಾಮುಖಿಯಾಗಿ ಸೂಪರ್ನೋವಾಸ್ ತಂಡ ಪ್ರಶಸ್ತಿಗೆ ಮುತ್ತಿಕ್ಕಿದೆ.

ಈ ಮೊದಲು ಟಾಸ್ ಗೆದ್ದ ವೆಲಾಸಿಟಿ ಎದುರಾಳಿ ತಂಡ ಸೂಪರ್ನೋವಾಸ್ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಬ್ಯಾಟರ್ಸ್ ವೆಲಾಸಿಟಿ ಬೌಲರ್‌ಗಳ ಬೆವರಿಳಿಸಿದರು.

ಆರಂಭಿಕ ಆಟಗಾರ್ತಿ ಪ್ರಿಯಾ ಪುನಿಯಾ 28 ರನ್ (29 ಎಸೆತ, 2 ಸಿಕ್ಸ್), ಡಿಯಾಂಡ್ರಾ ಡಾಟಿನ್ 62 ರನ್ (44 ಎಸೆತ, 1 ಬೌಂಡರಿ, 4 ಸಿಕ್ಸ್) ಮತ್ತು ಹರ್ಮನ್‍ಪ್ರೀತ್ ಕೌರ್ 43 ರನ್ (29 ಎಸೆತ, 1 ಬೌಂಡರಿ, 3 ಸಿಕ್ಸ್) ನೆರವಿನಿಂದ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 165 ರನ್‍ಗಳ ಉತ್ತಮ ಮೊತ್ತ ಕಲೆಹಾಕಿತು.

Share This Article
Leave a Comment

Leave a Reply

Your email address will not be published. Required fields are marked *