ಸೋಫಿ ಬೆಂಕಿ ಬ್ಯಾಟಿಂಗ್‌ – RCBಗೆ 8 ವಿಕೆಟ್‌ಗಳ ಭರ್ಜರಿ ಜಯ

Public TV
3 Min Read

ಮುಂಬೈ: ಆಲ್‌ರೌಂಡರ್‌ ಸೋಫಿ ಡಿವೈನ್‌ (Sophie Devine) ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಆರ್‌ಸಿಬಿ (RCB) ತಂಡವು, ಗುಜರಾತ್‌ ಜೈಂಟ್ಸ್‌ (Gujarat Giants) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಮುಂಬೈನ ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಜೈಂಟ್ಸ್‌ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 188 ರನ್‌ ಬಾರಿಸಿತ್ತು. 189 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಆರ್‌ಸಿಬಿ ತಂಡ 15.3 ಓವರ್‌ಗಳಲ್ಲೇ 189 ರನ್‌ ಚಚ್ಚಿ ನಿರಾಯಾಸವಾಗಿ ಗೆಲುವು ಸಾಧಿಸಿತು. ಆ ಮೂಲಕ ಸತತ ಎರಡನೇ ಗೆಲುವು ಪಡೆದುಕೊಂಡಿತು. ಜೊತೆಗೆ ಆರ್‌ಸಿಬಿ ಪಾಯಿಂಟ್ಸ್‌ ಟೇಬಲ್‌ನಲ್ಲಿ 4 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೇರಿತು.

ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಸ್ಮೃತಿ ಮಂದಾನ (Smriti Mandhana), ಸೋಫಿ ಡಿವೈನ್‌ ಜೋಡಿ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ ಪತನಕ್ಕೆ ಈ ಜೋಡಿ 57 ಎಸೆತಗಳಲ್ಲಿ ಸ್ಫೋಟಕ 125 ರನ್‌ ಚಚ್ಚಿ ಗುಜರಾತ್‌ ಬೌಲರ್‌ಗಳ ಬೆವರಿಳಿಸಿತ್ತು. ಇದನ್ನೂ ಓದಿ: ಬಲಿಷ್ಠ ಮುಂಬೈಗೆ ಮೊದಲ ಸೋಲು – ಯುಪಿ ವಾರಿಯರ್ಸ್‌ಗೆ 5 ವಿಕೆಟ್‌ಗಳ ರೋಚಕ ಜಯ

2ನೇ ಓವರ್‌ನಿಂದಲೇ ಸಿಕ್ಸರ್‌, ಬೌಂಡರಿಗಳೊಂದಿಗೆ ಅಬ್ಬರಿಸಲು ಶುರು ಮಾಡಿದ ಸೋಫಿ ಕೇವಲ 36 ಎಸೆತಗಳಲ್ಲಿ 99 ರನ್‌ (9 ಬೌಂಡರಿ, 8 ಸಿಕ್ಸರ್‌) ಚಚ್ಚಿದರು. ಶತಕ ಬಾರಿಸಿ ಚೊಚ್ಚಲ ಡಬ್ಲ್ಯೂಪಿಎಲ್‌ ಆವೃತ್ತಿಯಲ್ಲೇ ದಾಖಲೆ ಬರೆಯುವ ಸನಿಹದಲ್ಲಿದ್ದಾಗ ಮೆಕ್‌ಗ್ರಾತ್‌ ಬೌಲಿಂಗ್‌ ದಾಳಿಗೆ ಔಟಾಗಿ ನಿರಾಸೆ ಅನುಭವಿಸಿದರು. ಇದನ್ನೂ ಓದಿ: IPL 2023: RCB ತಂಡಕ್ಕೆ ಆನೆ ಬಲ – ವಿಲ್‌ ಜಾಕ್ಸ್‌ ಬದಲಿಗೆ ಕಿವೀಸ್‌ ಸ್ಟಾರ್‌ ಆಲ್‌ರೌಂಡರ್‌ ಸೇರ್ಪಡೆ

ನಂತರ ಏಲ್ಲಿಸ್‌ ಪೆರ್ರಿ 19 ರನ್‌ ಹಾಗೂ ಹೀದರ್‌ ನೈಟ್‌ 22 ರನ್‌ ಅಜೇಯ ಆಟವಾಡಿ ತಂಡವನ್ನು ಗೆಲುವಿನ ಹಾದಿಗೆ ತಲುಪಿಸಿದರು. ನಾಯಕಿ ಸ್ಮೃತಿ ಮಂದಾನ ಮತ್ತೊಮೆ ಬೃಹತ್‌ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. 31 ಎಸೆತಗಳಲ್ಲಿ 37 ರನ್‌ (5 ಬೌಂಡರಿ, 1 ಸಿಕ್ಸರ್‌) ಗಳಿಸಿ ಪೆವಿಲಿಯನ್‌ ಸೇರಿದರು. ಗುಜರಾತ್‌ ಪರ ಕಿಮ್‌ ಗಾರ್ತ್‌ ಹಾಗೂ ಸ್ನೇಹ ರಾಣ ತಲಾ ಒಂದೊಂದು ವಿಕೆಟ್‌ ಪಡೆದರು.

ರನ್‌ ಹೊಳೆ ಹರಿಸಿದ ಆಟಗಾರರು ಇವರೇ: ಪುರುಷರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಇತಿಹಾಸದಲ್ಲಿ ಕ್ರಿಸ್‌ಗೇಲ್‌ 175 ರನ್‌ ಸಿಡಿಸಿರುವುದು ಈವರೆಗೆ ಯಾರೂ ಮುರಿಯದ ದಾಖಲೆಯಾಗಿದೆ. ಇದರೊಂದಿಗೆ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ 36 ಎಸೆತಗಳಲ್ಲಿ 99 ರನ್‌ ಗಳಿಸಿರುವ ಸೋಫಿ ಡಿವೈನ್‌ ಅತಿಹೆಚ್ಚು ರನ್‌ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಇಬ್ಬರೂ ಆರ್‌ಸಿಬಿ ತಂಡದ ಆಟಗಾರರೇ ಎಂಬುದು ವಿಶೇಷ.

ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ ಜೈಂಟ್ಸ್ ಅತ್ಯುತ್ತಮ ಆರಂಭ ಪಡೆಯಿತು. 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿ ಆರ್‌ಸಿಬಿಗೆ ಬೃಹತ್‌ ಮೊತ್ತದ ಗುರಿ ನೀಡಿತ್ತು. ಸೋಫಿಯಾ ಡಂಕ್ಲಿ 16 ರನ್ ಗಳಿಸಿ ಔಟಾದ ನಂತರ ಲಾರಾ ವೊಲ್ವಾರ್ಡ್ ಮಾತ್ರ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು. 42 ಎಸೆತಗಳಲ್ಲಿ 68 ರನ್ (9 ಬೌಂಡರಿ 2 ಸಿಕ್ಸರ್) ಚಚ್ಚಿ ತಂಡದ ರನ್‌ ಮೊತ್ತ ಹೆಚ್ಚಿಸುವಲ್ಲಿ ಕಾರಣರಾದರು. ಇದರೊಂದಿಗೆ ಸಬ್ಬಿನೇನಿ ಮೇಘನಾ 32 ಎಸೆತಗಳಲ್ಲಿ 31 ರನ್, ಆಲ್‌ರೌಂಡರ್ ಆಶ್ಲೀ ಗಾರ್ಡ್ನರ್ 26 ಎಸೆತಗಳಲ್ಲಿ ಸ್ಫೋಟಕ 41 ರನ್ (6 ಬೌಂಡರಿ, 1 ಸಿಕ್ಸರ್) ಹಾಗೂ ದಯಾಳ್ ಹೇಮಲತಾ 6 ಎಸೆತಗಳಲ್ಲಿ 16 ರನ್ ಗಳಿಸಿ ಮಿಂಚಿದರು. ಕೊನೆಯಲ್ಲಿ ಹರ್ಲೀನ್ ಡಿಯೋಲ್ ಸಹ 5 ಎಸೆತಗಳಲ್ಲಿ 12 ರನ್ ಗಳಿಸುವ ಮೂಲಕ ತಂಡದ ಬೃಹತ್‌ ಮೊತ್ತಕ್ಕೆ ಸಹಾಯ ಮಾಡಿದ್ದರು. ಆದರೆ ಕಳಪೆ ಬೌಲಿಂಗ್‌ನಿಂದ ತಂಡ ಸೋಲನುಭವಿಸಿತು.

ಆರ್‌ಸಿಬಿ ಪರ ಶ್ರೇಯಾಂಕ ಪಾಟೀಲ್‌ 2 ವಿಕೆಟ್‌ ಕಿತ್ತರೆ, ಸೋಫಿ ಡಿವೈನ್‌, ಪ್ರೀತಿ ಬೋಸ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *