49 ರನ್‌ಗಳಿಗೆ 10 ವಿಕೆಟ್‌; 113ಕ್ಕೆ ಡೆಲ್ಲಿ ಆಲೌಟ್‌ – ಆರ್‌ಸಿಬಿ ಕಪ್‌ ಗೆಲುವಿಗಾಗಿ ಅಭಿಮಾನಿಗಳ ಪ್ರಾರ್ಥನೆ!

Public TV
3 Min Read

– ಆರ್‌ಸಿಬಿಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದೆಲ್ಲಿ?

ನವದೆಹಲಿ: ಮಹಿಳಾ ಪ್ರೀಮಿಯರ್‌ ಲೀಗ್‌ನ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 113 ರನ್‌ ಗಳಿಗೆ ಆಲೌಟ್‌ ಆಗಿ, ಆರ್‌ಸಿಬಿಗೆ 114 ರನ್‌ಗಳ ಗುರಿ ನೀಡಿದೆ.

ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡಬ್ಲ್ಯೂಪಿಎಲ್‌ ಫೈನಲ್‌ನಲ್ಲಿ ಸ್ಫೋಟಕ ಆರಂಭ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬಳಿಕ ಆರ್‌ಸಿಬಿ ಬೌಲರ್‌ಗಳ ದಾಳಿಗೆ ತತ್ತರಿಸಿ, ಅಲ್ಪಮೊತ್ತಕ್ಕೆ ಆಲೌಟ್‌ ಆಗಿದೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಆರ್‌ಸಿಬಿ, ಆರ್‌ಸಿಬಿಯಲ್ಲಿ ಕೊಹ್ಲಿ, ಗೇಲ್‌ ನಂ.1 – ಟಾಪ್‌ ದಾಖಲೆಗಳಿವು

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಡೆಲ್ಲಿ ತಂಡದ ಪರ ನಾಯಕಿ ಮೆಗ್‌ ಲ್ಯಾನ್‌, ಶಫಾಲಿ ವರ್ಮಾ ಸ್ಫೋಟಕ ಪ್ರದರ್ಶನ ತೋರಿದ್ದರು. ಪವರ್‌ ಪ್ಲೇನಲ್ಲಿ 6 ಓವರ್‌ಗಳಿಗೆ ಯಾವುದೇ ವಿಕೆಟ್‌ ನಷ್ಟವಿಲ್ಲದೇ 61 ರನ್‌ ಬಾರಿಸಿದ್ದರು. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 200 ರನ್‌ಗಳ ಗಡಿ ದಾಟಲಿದೆ ಎಂದು ನಿರೀಕ್ಷಿಸಲಾಯಿತು. ಆದ್ರೆ ಪವರ್‌ ಪ್ಲೇ ಮುಗಿಯುತ್ತಿದ್ದಂತೆ ವಿಕೆಟ್‌ ಪಥನ ಶುರುವಾಯಿತು. ಆರ್‌ಸಿಬಿ ಆಟಗಾರ್ತಿಯರು ಡೆಲ್ಲಿ ತಂಡದ ಅಬ್ಬರಕ್ಕೆ ಬ್ರೇಕ್‌ ಹಾಕಿದರು. ಇದನ್ನೂ ಓದಿ: ಐಪಿಎಲ್‌ ಸಂಪೂರ್ಣ ಲೀಗ್‌ ಭಾರತದಲ್ಲೇ ನಡೆಯುತ್ತೆ – ಜಯ್‌ ಶಾ ಸ್ಪಷ್ಟನೆ

ಆರ್‌ಸಿಬಿಗೆ ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
ಪವರ್‌ಪ್ಲೇ ನಲ್ಲಿ ಕಳಪೆ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಪ್ರದರ್ಶನದಿಂದಾಗಿ 6 ಓವರ್‌ಗಳಲ್ಲಿ 61 ರನ್‌ ಚಚ್ಚಿಸಿಕೊಂಡಿದ್ದ ಆರ್‌ಸಿಬಿ, ನಂತರ ಡೆಲ್ಲಿ ಆಟಕ್ಕೆ ಬ್ರೇಕ್‌ ಹಾಕಿತು. 8ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಸೋಫಿ ಮೊಲಿನೆಕ್ಸ್ ಮೊದಲ 4 ಎಸೆತಗಳಲ್ಲೇ 3 ವಿಕೆಟ್‌ (ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್‌, ಅಲಿಸ್‌ ಕ್ಯಾಪ್ಸಿ) ಉರುಳಿಸಿ, ಕೇವಲ 1 ರನ್‌ ಬಿಟ್ಟುಕೊಟ್ಟರು. ಇದರಿಂದ 7 ಓವರ್‌ಗಳಲ್ಲಿ 64 ರನ್‌ ಗಳಿಸಿದ್ದ ಡೆಲ್ಲಿ ತಂಡ 81 ರನ್‌ ಗಳಿಸುವ ವೇಳೆಗೆ ಕೇವಲ 17 ರನ್‌ಗಳ ಅಂತರದಲ್ಲೇ ಪ್ರಮುಖ 6 ವಿಕೆಟ್‌ ಕಳೆದುಕೊಂಡಿತ್ತು. ಇದು ಆರ್‌ಸಿಬಿಗೆ ಬಹುದೊಡ್ಡ ಲಾಭವಾಯಿತು. ಅಲ್ಲಿಂದ ಒಂದೊಂದು ರನ್‌ ಕದಿಯುವುದಕ್ಕೂ ಹೆಣಗಾಡುತ್ತಿದ್ದ ಡೆಲ್ಲಿ ತಂಡ ವಿಕೆಟ್‌ಗಳನ್ನು 113 ರನ್‌ಗಳಿಗೆ ಆಲೌಟ್‌ ಆಯಿತು.

ಡೆಲ್ಲಿ ಕ್ಯಾಪಿಟಲ್ಸ್‌ ಪರ ಸ್ಫೋಟಕ ಪ್ರದರ್ಶನ ನೀಡಿದ ಶಫಾಲಿ ವರ್ಮಾ 27 ಎಸೆತಗಳಲ್ಲಿ 44 ರನ್‌ ಚಚ್ಚಿದರೆ (3 ಸಿಕ್ಸರ್‌, 2 ಬೌಂಡರಿ), ಮೆಗ್‌ ಲ್ಯಾನಿಂಗ್‌ 23 ರನ್‌, ರಾಧಾ ಯಾಧವ್‌ 12 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಜೆಮಿಮಾ ರೊಡ್ರಿಗ್ಸ್‌, ಅಲಿಸ್‌ ಕ್ಯಾಪ್ಸಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ರೆ, ಜೆಸ್‌ ಜೊನಾಸೆನ್‌ 3 ರನ್‌, ಮಾರಿಜಾನ್ನೆ ಕಪ್‌ 8 ರನ್‌, ಮಿನ್ನು ಮಣಿ 5 ರನ್‌, ಅರುಂಧತಿ ರೆಡ್ಡಿ 10 ರನ್‌, ಶಿಖಾ ಪಾಂಡೆ 5 ರನ್‌ ಗಳಿಸಿದರು.

ಆರ್‌ಸಿಬಿ ಪರ ಶ್ರೇಯಾಂಕಾ ಪಾಟೀಲ್ 3.3 ಓವರ್‌ಗಳಲ್ಲಿ ಕೇವಲ 12 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಿತ್ತರೆ, ಸೋಫಿ ಮೊಲಿನೆಕ್ಸ್ 3 ವಿಕೆಟ್‌ ಹಾಗೂ ಆಶಾ ಸೋಭನಾ 2 ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: RCB – CSK ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ – ಸೋಮವಾರದಿಂದಲೇ ಟಿಕೆಟ್‌ ಮಾರಾಟ ಶುರು, ದರ ಎಷ್ಟು?

Share This Article