ಸ್ಮೃತಿ, ಪೆರ್ರಿ ಸ್ಫೋಟಕ ಫಿಫ್ಟಿ; ಆರ್‌ಸಿಬಿ ಅಬ್ಬರಕ್ಕೆ ಸುಸ್ತಾದ ವಾರಿಯರ್ಸ್ – ಯುಪಿ ಗೆಲುವಿಗೆ 199 ರನ್‌ಗಳ ಗುರಿ

Public TV
2 Min Read

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯವು ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿದೆ. ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ 198 ರನ್ ಗಳಿಸಿದೆ. ಇದು ಈ ಆವೃತ್ತಿಯಲ್ಲಿ ತಂಡವೊಂದು ಬ್ಯಾಟಿಂಗ್‌ನಲ್ಲಿ ಗಳಿಸಿದ ಅಧಿಕ ಸ್ಕೋರ್ ಆಗಿದೆ.

ನಾಯಕಿ ಸ್ಮೃತಿ ಮಂಧಾನ ಹಾಗೂ ಎಲ್ಲಿಸ್ ಪರ‍್ರಿ ಅವರ ಸ್ಫೋಟಕ ಅರ್ಧಶತಕದೊಂದಿಗೆ ಆರ್‌ಸಿವಿ ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ರನ್ ಗಳಿಸಿದೆ. ಈ ಮೂಲಕ ಎದುರಾಳಿ ತಂಡದ ಗೆಲುವಿಗೆ 199ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದೆ. ಇದನ್ನೂ ಓದಿ: T20 World Cup: ಅಬ್ಬಬ್ಬಾ! ಇಂಡೋ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ ಕೇಳಿದ್ರೆ ಎದೆಬಡಿತ ಜೋರಾಗುತ್ತೆ

ಟಾಸ್ ಸೋತೊ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ಅಗ್ರಕ್ರಮಾಂಕದ ಬ್ಯಾಟರ್‌ಗಳು ಹೊಡಿಬಡಿ ಆಟಕ್ಕೆ ಮುಂದಾದರು. ಮೊದಲ ವಿಕೆಟ್‌ಗೆ ಸಬ್ಬಿನೇನಿ ಮೇಘನಾ ಮತ್ತು ಸ್ಮೃತಿ ಮಂಧಾನ ಜೋಡಿ 5.3 ಓವರ್‌ಗಳಲ್ಲಿ 51 ರನ್‌ಗಳ ಜೊತೆಯಾಟ ನೀಡಿದ್ರೆ, 2ನೇ ವಿಕೆಟ್‌ಗೆ ಮಂಧಾನ ಮತ್ತು ಎಲ್ಲಿಸ್ ಪರ‍್ರಿ 64 ಎಸೆತಗಳಲ್ಲಿ 94 ರನ್‌ಗಳ ಜೊತೆಯಾಟ ನೀಡಿದರು. ಕೊನೆಯಲ್ಲಿ ಸ್ಫೋಟಕ ಪ್ರದರ್ಶನದೊಂದಿಗೆ ಪರ‍್ರಿ ಹಾಗೂ ರಿಚಾ ಘೋಷ್ ಜೋಡಿ ಕೇವಲ 18 ಎಸೆತಗಳಲ್ಲಿ 42 ರನ್‌ಗಳ ಜೊತೆಯಾಟ ನೀಡಿತು. ಇದು ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಇದನ್ನೂ ಓದಿ: ಚೆನ್ನೈ ತಂಡದ ಆರಂಭಿಕ ಆಟಗಾರ ಐಪಿಎಲ್‌ನಿಂದ ಔಟ್‌ – ಸಿಎಸ್‌ಕೆಗೆ ಭಾರೀ ಆಘಾತ

ಆರಂಭದಿಂದಲೇ ಯುಪಿ ವಾರಿಯರ್ಸ್ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದ ಆರ್‌ಸಿಬಿ ಮಹಿಳಾ ಬ್ಯಾರ್‌ಗಳು ಅಭಿಮಾನಿಗಳಿಗೆ ರಸದೌತಣ ನೀಡಿದರು. 160 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ 50 ಎಸೆತಗಳಲ್ಲಿ 80 ರನ್ (3 ಸಿಕ್ಸರ್, 10 ಬೌಂಡರಿ) ಚಚ್ಚಿದರೆ, ಎಲ್ಲಿಸ್ ಪರ‍್ರಿ 58 ರನ್ (37 ಎಸೆತ, 4 ಬೌಂಡರಿ, 4 ಸಿಕ್ಸರ್), ಮೇಘನಾ 28 ರನ್ (21 ಎಸೆತ, 5 ಬೌಂಡರಿ), ರಿಚಾ ಘೋಷ್ 21 ರನ್ (10 ಎಸೆತ, 2 ಬೌಂಡರಿ, 1 ಸಿಕ್ಸರ್), ಸೋಫಿ ಡಿವೈನ್ 2 ರನ್ ಗಳಿಸಿದರು.

ಯುಪಿ ವಾರಿಯರ್ಸ್ ಪರ ಅಂಜಲಿ ಸರ್ವಾನಿ, ದೀಪ್ತಿ ಶರ್ಮಾ, ಸೋಫಿ ಎಕ್ಲಿಸ್ಟೋನ್ ತಲಾ ಒಂದೊಂದು ವಿಕೆಟ್ ಪಡೆದರು.

Share This Article