ಜೊನಾಸೆನ್‌ ಆಲ್‌ರೌಂಡರ್‌ ಆಟ, ತಾಲಿಯಾ ಏಕಾಂಗಿ ಹೋರಾಟ – ಡೆಲ್ಲಿ ಕ್ಯಾಪಿಟಲ್ಸ್‌ಗೆ 42 ರನ್‌ಗಳ ಭರ್ಜರಿ ಜಯ

Public TV
3 Min Read

ಮುಂಬೈ: ನಾಯಕಿ ಮೆಗ್‌ ಲ್ಯಾನಿಂಗ್‌ (Meg Lanning) ಹಾಗೂ ಜೆಸ್ ಜೊನಾಸೆನ್ (Jess Jonassen) ಹೊಡಿಬಡಿ ಆಟದಿಂದ ಡೆಲ್ಲಿ ತಂಡವು ಯುಪಿ ವಾರಿಯರ್ಸ್‌ (UP Warriorz)ವಿರುದ್ಧ 42 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಯುಪಿ ವಾರಿಯರ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ನಡುವಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮಳೆ ಅಡ್ಡಿಯ ಹೊರತಾಗಿಯೂ 211 ರನ್‌ ಬಾರಿಸಿತ್ತು. 212 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಯುಪಿ ವಾರಿಯರ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 169 ರನ್‌ ಗಳಿಸಿ ಸೋಲೊಪ್ಪಿಕೊಂಡಿದೆತು.

ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್‌ ನಡೆಸಲು ಮುಂದಾದ ಯುಪಿ ವಾರಿಯರ್ಸ್‌ ತಂಡಕ್ಕೆ ಆಘಾತ ಎದುರಾಯಿತು. 3ನೇ ಓವರ್‌ನಲ್ಲಿ ಕ್ಯಾಪ್ಟನ್‌ ಅಲಿಸ್ಸಾ ಹೀಲಿ ಔಟಾಗುತ್ತಿದ್ದಂತೆ ಒಂದೊಂದೇ ವಿಕೆಟ್‌ ಪತನಗೊಂಡಿತು. ನಾಯಕಿ ಹೀಲಿ 17 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 24 ರನ್‌ ಗಳಿಸಿದರೆ ಶ್ವೇತಾ ಸೆಹ್ರಾವತ್ ಕೇವಲ 1 ರನ್‌ಗಳಿಗೆ ಔಟಾದರು. ಈ ಬೆನ್ನಲ್ಲೇ ಕಿರಣ್ ನವಗಿರೆ 2 ರನ್‌, ದೀಪ್ತಿ ಶರ್ಮಾ 12 ರನ್‌, ದೇವಿಕಾ ವೈದ್ಯ 23 ರನ್‌ ಗಳಿಸಿ ಪೆವಿಲಿಯನ್‌ನತ್ತ ಮುಖ ಮಾಡಿದರು.

ತಾಲಿಯಾ ಏಕಾಂಗಿ ಹೋರಾಟ: ಯುಪಿ ವಾರಿಯರ್ಸ್‌ ತಂಡದ ಗೆಲುವಿಗಾಗಿ ತಾಲಿಯಾ ಮೆಕ್‌ಗ್ರಾತ್ (Tahlia McGrath) ಕೊನೆಯವರೆಗೂ ಏಕಾಂಗಿಯಾಗಿ ಹೋರಾಡಿದರು. 50 ಎಸೆತಗಳಲ್ಲಿ ಬರೋಬ್ಬರಿ 90 ರನ್‌ (11 ಬೌಂಡರಿ, 4 ಸಿಕ್ಸರ್‌) ಚಚ್ಚಿದರು, ಸಿಮ್ರಾನ್ ಶೇಖ್ 6 ರನ್‌ ಗಳಿಸಿ ಅಜೇಯರಾಗುಳಿದರು.

ಡೆಲ್ಲಿ ತಂಡದ ಪರ ಜೊನಾಸೆನ್‌ 3 ವಿಕೆಟ್‌ ಪಡೆದು ಮಿಂಚಿದರು. ಶಿಖಾ ಪಾಂಡೆ, ಮರಿಜಾನ್ನೆ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಕೊಹ್ಲಿ ಪರಂಪರೆ ಮುಂದುವರಿಸಿದ ಮಂದಾನ – ಹೀನಾಯ ಸೋಲಿನ ಬೆನ್ನಲ್ಲೇ ಅಭಿಮಾನಿಗಳಿಂದ ಕಿಡಿ

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿತು. ನಾಯಕಿ ಮೆಗ್‌ ಲ್ಯಾನಿಂಗ್‌ ಸಿಕ್ಸರ್‌, ಬೌಂಡರಿಗಳ ಮಳೆ ಸುರಿಸುತ್ತಾ ವಾರಿಯರ್ಸ್‌ ಬೌಲರ್‌ಗಳನ್ನು ಬೆಂಡೆತ್ತಿದರು.

ಆರಂಭಿಕರಾಗಿ ಕಣಕ್ಕಿಳಿಸ ಮೆಗ್‌ ಲ್ಯಾನಿಂಗ್‌ ಹಾಗೂ ಶಫಾಲಿ ವರ್ಮಾ ಜೋಡಿ ಉತ್ತಮ ಆರಂಭ ನೀಡಿತು. ಮೊದಲ ವಿಕೆಟ್‌ ಜೊತೆಯಾಟಕ್ಕೆ 6.3 ಓವರ್‌ಗಳಲ್ಲಿ 67 ರನ್‌ ಚಚ್ಚಿತ್ತು. ಈ ವೇಳೆ 17 ರನ್‌ ಗಳಿಸಿದ್ದ ಶಫಾಲಿ ಸಿಕ್ಸರ್‌ ಸಿಡಿಸುವ ಬರದಲ್ಲಿ ಬೌಂಡರಿ ಲೈನ್‌ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದ್ರು. ಈ ವೇಳೆ ಕೆಲಹೊತ್ತು ಮಳೆ ಅಡ್ಡಿಯಾಗಿತ್ತು. ಬಳಿಕ ತನ್ನ ಆರ್ಭಟ ಮುಂದುವರಿಸಿದ ಲ್ಯಾನಿಂಗ್‌ 42 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 70 ರನ್‌ ಚಚ್ಚಿ ವಿಕೆಟ್‌ ಒಪ್ಪಿಸಿದರು. ಇದನ್ನೂ ಓದಿ: ಶಫಾಲಿ, ಲ್ಯಾನಿಂಗ್‌ ಬೆಂಕಿ ಬ್ಯಾಟಿಂಗ್‌ – ಡೆಲ್ಲಿಗೆ 60 ರನ್‌ಗಳ ಭರ್ಜರಿ ಜಯ; RCBಗೆ ಹೀನಾಯ ಸೋಲು

ನಂತರ ಕ್ರೀಸ್‌ಗಿಳಿದ ಜೆಮಿಮಾ ರೊಡ್ರಿಗಸ್‌ ಹಾಗೂ ಜೆಸ್‌ ಜೊನಾಸೆನ್‌ ಸಹ ಸ್ಫೋಟಕ ಬ್ಯಾಟಿಂಗ್‌ ನಡೆಸಿ ತಂಡದ ಮೊತ್ತ 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಜೆಮಿಮಾ, ಜೊನಾಸೆನ್‌ ಜೋಡಿ ಮುರಿಯದ 5ನೇ ವಿಕೆಟ್‌ ಜೊತೆಯಾಟಕ್ಕೆ 34 ಎಸೆತಗಳಲ್ಲಿ ಬರೋಬ್ಬರಿ 67 ರನ್‌ ಕಲೆಹಾಕಿತ್ತು. ಜೆಮಿಮಾ 22 ಎಸೆತಗಳಲ್ಲಿ 4 ಬೌಂಡರಿ ಸಹಿತ 34 ರನ್‌ ಗಳಿಸಿದ್ರೆ, ಜೊನಾಸೆನ್‌ 20 ಎಸೆತಗಳಲ್ಲಿ ಸ್ಫೋಟಕ 42 ರನ್‌ (3 ಸಿಕ್ಸರ್‌, 3 ಬೌಂಡರಿ) ಚಚ್ಚಿದರು. ಈ ನಡುವೆ ಆಲಿಸ್‌ ಕ್ಯಾಪ್ಸಿ ಸಹ 10 ಎಸೆತಗಳಲ್ಲಿ 21 ರನ್‌, ಮರಿಜಾನ್ನೆ ಕಪ್ 16 ರನ್‌ ಗಳಿಸಿ ತಂಡಕ್ಕೆ ನೆರವಾದರು. ಪರಿಣಾಮ ಡೆಲ್ಲಿ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 211 ರನ್‌ ಗಳಿಸಿತು.

ಯುಪಿ ವಾರಿಯರ್ಸ್‌ ಪರ ಶಬ್ನಿಮ್ ಇಸ್ಮಾಯಿಲ್, ತಹ್ಲಿಯಾ ಮೆಕ್‌ಗ್ರಾತ್, ಸೋಫಿ ಎಕ್ಲೆಸ್ಟೋನ್ ಹಾಗೂ ರಾಜೇಶ್ವರಿ ಗಾಯಕ್ವಾಡ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ರನ್‌ ಏರಿದ್ದು ಹೇಗೆ?
50 ರನ್‌ 32 ಎಸೆತ
100 ರನ್‌ 64 ಎಸೆತ
153 ರನ್‌ 96 ಎಸೆತ
211 ರನ್‌ 120 ಎಸೆತ

Share This Article
Leave a Comment

Leave a Reply

Your email address will not be published. Required fields are marked *