WPL 2025 | ಇಂದಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ – ಪಂದ್ಯ ಎಲ್ಲಿ, ಯಾವಾಗ ಪ್ರಸಾರ?

By
2 Min Read

– ಚಾಂಪಿಯನ್‌ ಆರ್‌ಸಿಬಿಗೆ ಕಠಿಣ ಸವಾಲು, ಫೈನಲ್‌ ಸೋಲಿನ ಹಣೆಪಟ್ಟಿ ಕಳಚಲು ಡೆಲ್ಲಿ ಸಜ್ಜು

ವಡೋದರಾ: 2024ರ ಆವೃತ್ತಿಯ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಗುಜರಾತ್‌ ಜೈಂಟ್ಸ್‌ ತಂಡಗಳು ಮಹಿಳಾ ಪ್ರೀಮಿಯರ್‌ ಲೀಗ್‌ 3ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಶುಕ್ರವಾರ ಮುಖಾಮುಖಿಯಾಗಲಿವೆ.

ರಾತ್ರಿ 7:30ಕ್ಕೆ ಗುಜರಾತ್‌ನ ವಡೋದರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ಆರಂಭವಾಗಲಿದೆ. ಇದರೊಂದಿಗೆ ಭಾರತದ ಉದಯೋನ್ಮುಖ ಕ್ರಿಕೆಟ್‌ ಪ್ರತಿಭೆಗಳ ಪೋಷಣೆಗೆ ವೇದಿಗೆ ಸಜ್ಜುಗೊಂಡಿದೆ.

ಜಾಗತಿಕ ಸೂಪರ್‌ ಸ್ಟಾರ್‌ಗಳು ಸ್ಪರ್ಧೆಗೆ ಅಪಾರ ಮೌಲ್ಯವನ್ನು ತಂದಿದ್ದರೂ ಲೀಗ್‌ನ ನಿಜವಾದ ಯಶಸ್ಸು ದೇಶೀಯ ಆಟಗಾರ್ತಿಯರ ಏಳಿಗೆಯಲ್ಲಡಗಿದೆ. ಮೊದಲ ಎರಡು ಋತುಗಳಲ್ಲಿ ಕನ್ನಡತಿ ಶ್ರೇಯಂಕಾ ಪಾಟೀಲ್‌ ಮತ್ತು ಸೈಕಾ ಇಶಾಕ್‌ ಅವರಂತಹ ಹಲವಾರು ದೇಶೀಯ ಪ್ರತಿಭೆಗಳು ಹೊರಹೊಮ್ಮಿದ್ದು, ರಾಷ್ಟ್ರೀಯ ತಂಡದಿಂದಲೂ ಕರೆ ಸ್ವೀಕರಿಸಿದ್ದಾರೆ.

ಪ್ರಮುಖ ಆಟಗಾರ್ತಿಯರ ಅನುಪಸ್ಥಿತಿ
ಪ್ರತಿ ಡಬ್ಲ್ಯೂಪಿಎಲ್‌ ಋತುವಿನಲ್ಲಿ, ಉದಯೋನ್ಮುಖ ಭಾರತೀಯ ಆಟಗಾರ್ತಿಯರ ಪಟ್ಟಿ ಬೆಳೆಯುತ್ತಲೇ ಇದೆ. ಅಲಿಸ್ಸಾ ಹೀಲಿ, ಸೋಫಿ ಮೊಲಿನೆಕ್ಸ್‌ ಮತ್ತು ಕೇಟ್‌ ಕ್ರಾಸ್‌ ಅವರಂತಹ ವಿದೇಶಿ ತಾರೆಯರು ಗಾಯಗಳಿಂದಾಗಿ ಈ ಆವೃತ್ತಿಯಿಂದ ಹೊರಗುಳಿದಿರುವುದರಿಂದ, ಮುಂಬರುವ ಋತುವು ಅನುಭವಿ ದೇಶೀಯ ಆಟಗಾರ್ತಿಯರಿಗೆ ಮತ್ತು ಹೊಸ ಪ್ರತಿಭೆಗಳಿಗೆ ಮಿಂಚಲು ಸುವರ್ಣಾವಕಾಶ ಕಲ್ಪಿಸುತ್ತದೆ.

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಜುಲೈನಲ್ಲಿ ಇಂಗ್ಲೆಂಡ್‌ ಪ್ರವಾಸ ಮತ್ತು ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನೊಂದಿಗೆ ರಾಷ್ಟ್ರೀಯ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಉತ್ತಮ ಪ್ರದರ್ಶನ ನೀಡಲು ಅವರು ಉತ್ಸುಕರಾಗಿದ್ದಾರೆ. ಇನ್ನೂ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ ವೇಗದ ಬೌಲಿಂಗ್‌ ಆಲ್‌ರೌಂಡರ್‌ ಕಾಶ್ವೀ ಗೌತಮ್‌ ಸಹ ಅತ್ಯುತ್ತಮ ಆಟಗಾರ್ತಿಯರ ವಿರುದ್ಧ ತಮ್ಮನ್ನು ಸಾಬೀತುಪಡಿಸುವ ಅವಕಾಶ ಹೊಂದಿದ್ದಾರೆ. ಟೂರ್ನಿಯಲ್ಲಿ ಮೊದಲ ಬಾರಿಗೆ ವಡೋದರಾ ಮತ್ತು ಲಕ್ನೋ ತಾಣಗಳನ್ನು ಹೊಸದಾಗಿ ಪರಿಚಯಿಸಲಾಗಿದೆ.

ಚಾಂಪಿಯನ್‌ ಆರ್‌ಸಿಬಿಗೆ ಕಠಿಣ ಸವಾಲು:
ಕಳೆದ ಬಾರಿಯ ಚಾಂಪಿಯನ್‌ ಆರ್‌ಸಿಬಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಕಠಿಣ ಸವಾಲನ್ನು ಎದುರಿಸುತ್ತಿದೆ. ಕಳೆದ ಋತುವಿನ ಪ್ರಮುಖ ಆಟಗಾರ್ತಿಯರಾದ ಆಲ್‌ರೌಂಡರ್‌ ಸೋಫಿ ಡಿವೈನ್‌, ಆರೋಗ್ಯಕ್ಕೆ ಆದ್ಯತೆ ನೀಡಲು ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದಾರೆ. ಗಾಯಗೊಂಡಿರುವ ಸೋಫಿ ಮೊಲಿನೆಕ್ಸ್‌ ಮತ್ತು ಕೇಟ್‌ ಕ್ರಾಸ್‌ ಈ ಆವೃತ್ತಿಯಿಂದ ಹೊರಗುಳಿದಿದ್ದಾರೆ. ಸ್ಟಾರ್‌ ಆಲ್‌ರೌಂಡರ್‌ ಎಲಿಸ್‌ ಪೆರ್ರಿ, ಶ್ರೇಯಂಕಾ ಪಾಟೀಲ್‌ ಮತ್ತು ಆಶಾ ಶೋಭನಾ ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇದು ಸಹಜವಾಗಿ ಆರ್‌ಸಿಬಿ ತಂಡದ ಆತಂಕಕ್ಕೆ ಕಾರಣವಾಗಿದ್ದು, ಪ್ರಶಸ್ತಿ ಉಳಿಸಿಕೊಳ್ಳಲು ಯಶಸ್ವಿಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ ವರ್ಷ 11 ರ ಬಳಗದಲ್ಲಿದ್ದ ನಮ್ಮ ಹೆಚ್ಚಿನ ಆಟಗಾರ್ತಿಯರು ಗಾಯಗಳಿಂದಾಗಿ ಈ ಋತುವಿನಲ್ಲಿ ಅಲಭ್ಯರಾಗಿದ್ದಾರೆ. ಅದರಲ್ಲೂ ಸೋಫಿ ಅಲಭ್ಯತೆ ಖಂಡಿತವಾಗಿಯೂ ತಂಡವನ್ನು ಕಾಡಲಿದೆ ಎಂದು ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ ಹೇಳಿದ್ದಾರೆ.

ಈ ಮಧ್ಯೆ, ಎರಡು ಬಾರಿ ರನ್ನರ್‌ ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ ಟೂರ್ನಿಯಲ್ಲಿ ಅತ್ಯಂತ ಸ್ಥಿರ ತಂಡವಾಗಿದ್ದು, ಫೈನಲ್‌ನಲ್ಲಿ ಸೋತ ದಾಖಲೆಯನ್ನು ಮುರಿಯಲು ಉತ್ಸುಕವಾಗಿದೆ. ಟೂರ್ನಿಯು ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದೆ.

ಯಾವುದರಲ್ಲಿ ನೇರ ಪ್ರಸಾರ?
ಎಲ್ಲಾ ಪಂದ್ಯಗಳು ರಾತ್ರಿ 7:30ಕ್ಕೆ ಸರಿಯಾಗಿ ಪ್ರಾರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಚಾನಲ್‌ನಲ್ಲಿ ನೇರ ಪ್ರಸಾರ ಇರಲಿದೆ. ಇನ್ನು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್‌ಗಳಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.

Share This Article