ಮಹಿಳಾ ಟಿ20 ವಿಶ್ವಕಪ್‍ನಿಂದ ಎಚ್ಚೆತ್ತ ಐಸಿಸಿ- ಸೆಮಿಫೈನಲ್‍ಗೂ ಮೀಸಲು ದಿನ ಫಿಕ್ಸ್

Public TV
2 Min Read

– 2021ರ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ

ದುಬೈ: ಮಹಿಳಾ ಏಕದಿನ ವಿಶ್ವಕಪ್ 2021ರ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬುಧವಾರ ಬಿಡುಗಡೆ ಮಾಡಿದೆ.

2021ರ ಏಕದಿನ ವಿಶ್ವಪಕ್ ಟೂರ್ನಿ ನ್ಯೂಜಿಲೆಂಡ್‍ನಲ್ಲಿ ನಡೆಯಲಿದ್ದು, ಫೈನಲ್ಸ್ ಜೊತೆಗೆ ಸೆಮಿಫೈನಲ್ ಪಂದ್ಯಗಳಿಗೂ ಮೀಸಲು ದಿನ ಇರಲಿದೆ. 2020ರ ಮಹಿಳಾ ವಿಶ್ವಕಪ್ ಟೂರ್ನಿಯ ಭಾಗವಾಗಿ ಮಾರ್ಚ್ 3ರಂದು ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯ ನಡೆಯಬೇಕಿತ್ತು. ಆದರೆ ಭಾರೀ ಮಳೆಯಿಂದ ಪಂದ್ಯ ರದ್ದಾಗಿತ್ತು. ಆಗ ನೆಟ್ ರನ್ ರೇಟ್ ಹಾಗೂ ಎ ಗುಂಪಿನಲ್ಲಿ ಹೆಚ್ಚು ಪಾಯಿಂಟ್ ಹೊಂದಿದ್ದ ಭಾರತ ನೇರವಾಗಿ ಫೈನಲ್‍ಗೆ ಲಗ್ಗೆ ಇಟ್ಟಿತ್ತು.

ಈ ನಿಯಮವನ್ನು ಮಾಜಿ ಆಟಗಾರರು ಸೇರಿದಂತೆ ಅನೇಕ ಕ್ರಿಕೆಟ್ ಅಭಿಮಾನಿಗಳು ಟೀಕಿಸಿದ್ದರು. ಫೈನಲ್ ಪ್ರವೇಶಿಸಿದ್ದ ಭಾರತದ ಮಹಿಳಾ ತಂಡವನ್ನು ಆಸ್ಟ್ರೇಲಿಯಾ ಮಾರ್ಚ್ 8ರಂದು ನಡೆದ ಪಂದ್ಯದಲ್ಲಿ ಸೋಲಿಸಿ 5ನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

ವೇಳಾಪಟ್ಟಿಯ ಪ್ರಕಾರ 2021ರ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 10 ತಂಡಗಳ ನಡುವೆ 31 ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳು ನ್ಯೂಜಿಲೆಂಡ್‍ನ ಆಂಕ್ಲೆಂಡ್, ಹ್ಯಾಮಿಲ್ಟನ್, ಮೌಂಟ್ ಮಾಂಗನುಯಿ, ಕ್ರೈಸ್ಟ್ ಚರ್ಚ್ ಹಾಗೂ ಡುನೆಡಿನ್‍ನಲ್ಲಿ ನಡೆಯಲಿವೆ. ಮೊದಲ ಸೆಮಿಫೈನಲ್ 2021ರ ಮಾರ್ಚ್ 3ರಂದು ಮೌಂಟ್ ಮಾಂಗನುಯಿ ಮತ್ತು ಎರಡನೇ ಪಂದ್ಯ ಮಾರ್ಚ್ 4ರಂದು ಹ್ಯಾಮಿಲ್ಟನ್‍ನಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಮಾರ್ಚ್ 7ರಂದು ಕ್ರೈಸ್ಟ್ ಚರ್ಚ್ ನಲ್ಲಿ ನಡೆಯಲಿದ್ದು, ವಿಜೇತ ತಂಡಕ್ಕೆ ಟ್ರೋಫಿ ಜೊತೆಗೆ 25 ಕೋಟಿ ರೂ. ಬಹುಮಾನ ನಿಗದಿಯಾಗಿದೆ.

ಭಾರತಕ್ಕೆ ಅರ್ಹತಾ ಪಂದ್ಯ:
ಟೂರ್ನಿಗೂ ಮುನ್ನ ಫೆಬ್ರವರಿ 6ರಂದು ಆಕ್ಲೆಂಡ್‍ನಲ್ಲಿ ಆತಿಥೇಯ ನ್ಯೂಜಿಲೆಂಡ್ ಹಾಗೂ ಭಾರತದ ನಡುವೆ ನಡುವೆ ಅರ್ಹತಾ ಪಂದ್ಯ ನಡೆಯಲಿದೆ. ಕಿವೀಸ್ ತಂಡದ ಹೊರತಾಗಿ ಕೇವಲ 3 ತಂಡಗಳಾದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಟೂರ್ನಿಯಲ್ಲಿ ಆಡಲಿವೆ. ಇವುಗಳಲ್ಲದೆ ಉಳಿದ 6 ತಂಡಗಳ ಆಯ್ಕೆಯನ್ನು ಮಹಿಳಾ ಚಾಂಪಿಯನ್‍ಶಿಪ್ ಮತ್ತು ಅರ್ಹತಾ ಪಂದ್ಯಗಳ ನಂತರ ನಿರ್ಧರಿಸಲಾಗುತ್ತದೆ. ಈ ಎರಡೂ ಟೂರ್ನಿಗಳು ಜುಲೈನಿಂದ ಶ್ರೀಲಂಕಾದಲ್ಲಿ ನಡೆಯಲಿದೆ.

ಮೀಸಲು ದಿನ ಅಂದ್ರೇನು?:
ಒಂದು ವೇಳೆ ಪಂದ್ಯವೊಂದು ಮಳೆಯಿಂದ ರದ್ದಾದರೆ ಅದನ್ನು ಮತ್ತೊಂದು ದಿನದಲ್ಲಿ ಆಡಿಸಲು ವೇಳಾ ಪಟ್ಟಿಯಲ್ಲಿ ಅವಕಾಶ ಕಲ್ಪಿಸುವುದು. 2020ರ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನ ಇರಲಿಲ್ಲ. ಹೀಗಾಗಿ ಭಾರತವನ್ನು ನೇರವಾಗಿ ಫೈನಲ್‍ಗೆ ಆಯ್ಕೆ ಮಾಡಲಾಯಿತು. ಇದಕ್ಕೆ ಟೀಕೆ ವ್ಯಕ್ತವಾಗಿದ್ದರಿಂದ ಮುಂದೆ ಸೆಮಿಫೈನಲ್‍ಗೂ ಮೀಸಲು ದಿನ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *