ಮೆಜೆಸ್ಟಿಕ್‌ನಲ್ಲಿ ಮಹಿಳೆಯರ ʼಶಕ್ತಿʼ ಪ್ರದರ್ಶನ – ಮಧ್ಯರಾತ್ರಿಯೂ ಇತ್ತು ಬುಕ್ಕಿಂಗ್‌ ಸಾಲು!

By
1 Min Read

ಬೆಂಗಳೂರು: ಸರ್ಕಾರಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಸಂಪರ್ಕ (Free Bus Service) ಕಲ್ಪಿಸುವ ಶಕ್ತಿ ಯೋಜನೆಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಶನಿವಾರ ತಡರಾತ್ರಿ ಮೆಜೆಸ್ಟಿಕ್‍ನಲ್ಲಿರುವ (Majestic) ಕೆಂಪೇಗೌಡ ಬಸ್ಸು ನಿಲ್ದಾಣಕ್ಕೆ ಭಾರೀ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಆಗಮಿಸಿದ್ದರು.

ರಾತ್ರಿ 12 ಗಂಟೆಯಾದರೂ ಕೆಂಪು ಬಸ್ಸುಗಳಿಗೆ ಭಾರೀ ಬೇಡಿಕೆ ಇತ್ತು. ಶಿವಮೊಗ್ಗ,ತುಮಕೂರು, ಚಿತ್ರದುರ್ಗ ಬಸ್ಸುಗಳು ಜನ ನಿಂತುಕೊಂಡೇ ಸಂಚರಿಸಿದ್ದಾರೆ. ಬಂದ ಬಸ್ಸುಗಳಲ್ಲೇ ತೆರಳುವಂತೆ ಕೆಎಸ್‌ಆರ್‌ಟಿಸಿ (KSRTC) ಸಿಬ್ಬಂದಿ ಮಹಿಳಾ ಪ್ರಯಾಣಿಕರನ್ನು ಮನ ಒಲಿಸುವ ದೃಶ್ಯ ಕಂಡುಬಂತು.  ಇದನ್ನೂ ಓದಿ: ಫ್ರೀ ಬಸ್ ಟಿಕೆಟ್ ಎಫೆಕ್ಟ್; ಚಾಮರಾಜನಗರದಲ್ಲಿ ಬಸ್ ಡೋರ್ ಮುರಿದ ಮಹಿಳೆಯರು!

ಸಿಗಂದೂರು ದೇವಸ್ಥಾನಕ್ಕೆ ತೆರಳುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಕಡೆ ಸಂಚರಿಸುವ ಬಸ್ಸುಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಈ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ಸು ವ್ಯವಸ್ಥೆ ಮಾಡಿತ್ತು. ಮಧ್ಯರಾತ್ರಿಯಾದರೂ ಮಹಿಳೆಯರು ಸಾಲಿನಲ್ಲಿ ನಿಂತು ಮುಂಗಡ ಬುಕ್ಕಿಂಗ್‌ ಮಾಡಿ ಟಿಕೆಟ್‌ ಪಡೆದು ಸಂಚರಿಸಿದ್ದು ವಿಶೇಷವಾಗಿತ್ತು.

 


ಶಕ್ತಿ ಯೋಜನೆ ಜಾರಿಯಾದ ನಂತರದ ಮೊದಲ ವೀಕೆಂಡ್‍ನಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು ಸೇರಿ ಹತ್ತು ಹಲವು ಪುಣ್ಯಕ್ಷೇತ್ರಗಳಿಗೆ ಸರ್ಕಾರಿ ಬಸ್‍ಗಳಲ್ಲಿ ಮಹಿಳೆಯರು ದಾಂಗುಡಿ ಇಟ್ಟಿದ್ದರು. ಮಹಿಳೆಯರು ಗುಂಪು ಗುಂಪಾಗಿ ತೀರ್ಥಯಾತ್ರೆ ಕೈಗೊಂಡಿದ್ದಾರೆ. ಬೆಂಗಳೂರು, ಮೈಸೂರು, ತುಮಕೂರು, ಕೋಲಾರ, ದಾವಣಗೆರೆ, ಹುಬ್ಬಳ್ಳಿ ಸೇರಿ ಹಲವು ಕಡೆಗಳಿಂದ ತೀರ್ಥ ಕ್ಷೇತ್ರಗಳಿಗೆ ಹೆಚ್ಚುವರಿ ಬಸ್ ಬಿಟ್ಟರೂ ರಶ್‌ ಮಾತ್ರ ಕಡಿಮೆ ಆಗುತ್ತಿರಲಿಲ್ಲ.

Share This Article