ಬಾನಲ್ಲಿ ಹಾರುವ ಕನಸು ಈಡೇರಿಸಿಕೊಂಡ ಛಲಗಾತಿ

Public TV
2 Min Read

– ಕರ್ನಾಟಕದ ಎರಡನೇ ಮಹಿಳಾ ಪೈಲಟ್
– ಮಗಳ ಕನಸಿಗಾಗಿ ಜಮೀನು, ಹಣ, ಮನೆ ಅಡಮಾನ

ಚಾಮರಾಜನಗರ: ಕೊಡಗು ಜಿಲ್ಲೆ ವಿರಾಜಪೇಟೆಯ ಯುವತಿಯೊಬ್ಬಳು ತನ್ನ ಕಠಿಣ ಪರಿಶ್ರಮದ ಫಲವಾಗಿ ರಾಜ್ಯದ ಎರಡನೇ ಮಹಿಳಾ ಪೈಲಟ್ ಆಗಿ, ಫಿಲಿಪೈನ್ಸ್ ದೇಶದ ಮೊದಲ ಮಹಿಳಾ ಪೈಲಟ್ ಆಗಿದ್ದಾರೆ. ಅಲ್ಲದೇ ಕಳೆದ 12 ವರ್ಷಗಳಿಂದ ಯಶಸ್ವಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಮಾನ ಮುನ್ನಡೆಸುತ್ತಿದ್ದಾರೆ.

ಪೊನ್ನಮ್ಮ ಉತ್ತಯ್ಯ ಚಿಂದಮಾಡ ತನ್ನ ಕನಸಿನಂತೆ ಪೈಲಟ್ ಆಗಿದ್ದಾರೆ. ಪೊನ್ನಮ್ಮ 6ನೇ ವಯಸ್ಸಿನಲ್ಲಿಯೇ ತಾನು ಕೂಡ ಪೈಲಟ್ ಆಗಬೇಕು ಎಂದು ಕನಸು ಕಂಡಿದ್ದರು. ನಂತರ ಪೊನ್ನಮ್ಮ ಬೆಂಗಳೂರಿನ ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಎಸ್‍ಸಿ ಪದವಿ ಓದುತ್ತಿದ್ದರು. ಬಳಿಕ ಎರಡು ವರ್ಷಗಳ ಕಾಲ ಪೈಲಟ್ ತರಬೇತಿ ಪಡೆದುಕೊಂಡಿದ್ದರು. ಇತ್ತ ಪೊನ್ನಮ್ಮರ ತಂದೆ ಮಗಳ ಕನಸು ನನಸು ಮಾಡಲು ಕಷ್ಟಪಟ್ಟು ಖರೀದಿಸಿದ್ದ ಮನೆಯನ್ನೇ ಬ್ಯಾಂಕಿಗೆ ಅಡಮಾನ ಇಟ್ಟಿದ್ದರು.

ಆದರೆ ಮಹಿಳಾ ಪೈಲಟ್‍ಗೆ ಭಾರತದಲ್ಲಿ ಹೆಚ್ಚಿನ ಅವಕಾಶ ಇಲ್ಲದೇ ಇದ್ದುದ್ದರಿಂದ ಪೊನ್ನಮ್ಮ ವಿದೇಶಗಳಲ್ಲಿ ಮಹಿಳಾ ಪೈಲಟ್ ಆಗಿ ಕಾರ್ಯನಿರ್ವಹಿಸಲು ಪ್ರಯತ್ನಿಸಿದ್ದರು. ಪೊನ್ನಮ್ಮರ ಸತತ ಪ್ರಯತ್ನದ ಫಲವಾಗಿ ಫಿಲಿಪೈನ್ಸ್ ದೇಶದಲ್ಲಿ ಪೈಲಟ್ ಹುದ್ದೆ ಸಿಕ್ಕಿತ್ತು. ಇದರೊಂದಿಗೆ ಪೊನ್ನಮ್ಮ ಕರ್ನಾಟಕದ ಎರಡನೇ ಮಹಿಳಾ ಪೈಲಟ್ ಎಂಬ ಖ್ಯಾತಿ ಗಳಿಸಿದ್ದಾರೆ. ಫಿಲಿಪೈನ್ಸ್ ದೇಶದಲ್ಲಿ ಪ್ರಥಮ ಭಾರತೀಯ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪೊನ್ನಮ್ಮ ಕಳೆದ 12 ವರ್ಷಗಳಿಂದ ಅಂತರಾಷ್ಟ್ರೀಯ ಮಹಿಳಾ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಧ್ಯಮ ವರ್ಗದವರ ಪಾಲಿಗೆ ಪೈಲಟ್ ಎಂಬುದು ಗಗನ ಕುಸುಮವೇ ಆಗಿತ್ತು. ಅದರಲ್ಲೂ ಮಹಿಳಾ ಪೈಲಟ್ ಎಂದರೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಮಗಳು ಚಿಕ್ಕ ವಯಸ್ಸಿನಿಂದಲೇ ಪೈಲಟ್ ಆಗಬೇಕು ಎಂದುಕೊಂಡಿದ್ದಳು. ಆಕೆಯ ಕನಸು ನನಸು ಮಾಡುವ ಸಲುವಾಗಿ ಊರಿನಲ್ಲಿದ್ದ ಜಮೀನು, ಪಿಂಚಣಿ ಹಣ ಮತ್ತು ವಾಸವಿರಲು ಇದ್ದ ಪ್ಲಾಟ್ ಕೂಡ ಕಳೆದುಕೊಂಡೆ. ಕಳೆದುಕೊಂಡಿದ್ದನ್ನ ಇವತ್ತು ಪಡೆದುಕೊಂಡಿದ್ದೇನೆ. ಎಲ್ಲದ್ದಕ್ಕಿಂತ ಹೆಣ್ಣು ಮಗಳು ಪೈಲಟ್ ಆಗಬಹುದು ಎಂಬುದನ್ನ ಸಾಧಿಸಿ ತೋರಿಸಿದ ಖುಷಿ ನಮಗೆ ಇದೆ ಎಂದು ತಂದೆ ಉತ್ತಯ್ಯ ಹೆಮ್ಮೆಯಿಂದ ಹೇಳಿದ್ದಾರೆ.

ಪೊನ್ನಮ್ಮ ಹಾಗೂ ಅವರ ತಂದೆ ಉತ್ತಯ್ಯ ಇದೀಗ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಬಳಿ ಜಮೀನು ಖರೀದಿಸಿ ಮನೆ ಕಟ್ಟಿ ವಾಸಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *