ತೇಜಸ್ವಿ ಸೂರ್ಯ ಜೊತೆ ಸೆಲ್ಫಿಗೆ ಮುಗಿಬಿದ್ದ ಕಾರ್ಯಕರ್ತರು

Public TV
1 Min Read

ಬೆಂಗಳೂರು: ರಾಜ್ಯದ ನೂತನ ಸಂಸದರಲ್ಲಿ ಬೆಂಗಳೂರು ದಕ್ಷಿಣ ಕೇತ್ರದ ಸಂಸದ ತೇಜಸ್ವಿ ಸೂರ್ಯ ಯುವ ಎಂಪಿಯಾಗಿದ್ದಾರೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗಿನಿಂದಲೂ ಗಮನ ಸೆಳೆಯುತ್ತಿದ್ದ ತೇಜಸ್ವಿ ಈಗ ಎಂಪಿಯಾಗಿ, ಲೋಕಸಭೆಯಲ್ಲಿನ ಪ್ರಥಮ ಭಾಷಣದ ಬಳಿಕ ಮತ್ತಷ್ಟು ಗಮನ ಸೆಳೆಯುತ್ತಿದ್ದಾರೆ.

ತಮ್ಮ ವಾಕ್ ಚಾತುರ್ಯದಿಂದಲೇ ಫೇಮಸ್ ಆಗಿರುವ ತೇಜಸ್ವಿ ಸಂಸದರಾಗಿ ಆಯ್ಕೆಯಾದ ಮೇಲೂ ಒಂದಿಲ್ಲೊಂದು ವಿಚಾರದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ. ಹಾಗೆಯೇ ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂಡ ತೇಜಸ್ವಿ ಸೂರ್ಯ ಅವರಿಗೆ ಡಿಮ್ಯಾಂಡ್ ಜಾಸ್ತಿಯಾಗಿತ್ತು.

ನಗರದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮಕ್ಕೆ ಬಂದ ಕಾರ್ಯಕರ್ತರು ತೇಜಸ್ವಿ ಸೂರ್ಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಒಂದೇ ಒಂದು ಸೆಲ್ಫಿ ಎಂದು ತೇಜಸ್ವಿಯನ್ನ ಹಿಡಿದು ಜಗ್ಗಾಡುವುದರೊಂದಿಗೆ ಸೆಲ್ಫಿಗಾಗಿ ಕಿತ್ತಾಡಿಕೊಂಡ ಪ್ರಸಂಗವೂ ನಡೆಯಿತು.

ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ನಡೆದ ಮೊದಲ ಅಧಿವೇಶನದಲ್ಲಿಯೇ ಮೊದಲ ಭಾಷಣದಲ್ಲಿಯೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ರಾಜ್ಯದ ಜನತೆಯನ್ನು ಹುಬ್ಬೇರಿಸುವಂತೆ ಮಾಡಿದ್ದರು. ಸಂಸತ್ತಿನಲ್ಲಿ ಕನ್ನಡಲ್ಲೇ ಭಾಷಣ ಮಾಡಿದ ತೇಜಸ್ವಿ, ಇಡೀ ದೇಶವೇ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ನಮ್ಮ ರಾಜ್ಯ ಮಾತ್ರ ಹಿಂದೆ ಉಳಿಯುತ್ತಿದೆ. ಕರ್ನಾಟಕಕ್ಕೆ ತನ್ನದೆಯಾದ ವಿಶೇಷ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ಹಕ್ಕ-ಬುಕ್ಕ, ಕೃಷ್ಣದೇವರಾಯ, ಮೈಸೂರು ಮಹಾರಾಜ ಮನೆತನ ಅನೇಕ ರಾಜರು ಆಳ್ವಿಕೆ ನಡೆಸಿದ್ದಾರೆ. ಆದರೆ ಈಗ ಅತ್ಯಂತ ಭ್ರಷ್ಟ ಸರ್ಕಾರ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಹೊರ ಬೀಳುತ್ತಿರುವ ಹಗರಣಗಳಲ್ಲಿ ಆಡಳಿತ ಪಕ್ಷದ ನಾಯಕರು ಹೆಸರುಗಳು ಕೇಳಿಬರುತ್ತಿವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತಿಲ್ಲ ಎಂದು ದೂರಿದ್ದರು.

ನಮ್ಮ ಆಸೆ, ಅನುಭಗಳನ್ನು ಈಡೇರಿಸಲು ಬರುವಂತಹ ನವ ಸರ್ಕಾರದ ಕಡೆಗೆ ನಾವೆಲ್ಲರೂ ಒಲವು ತೋರಬೇಕಿದೆ. ಹೊಸ ಕರ್ನಾಟಕದ ಉದಯ ಯುವಕರ ಮೇಲಿದೆ ಎಂದು ತೇಜಸ್ವಿ ಸೂರ್ಯ ಅವರು ಸಂಸತ್‍ನಲ್ಲಿ ಕನ್ನಡದ ಕಹಳೆ ಮೊಳಗಿಸಿದ್ದರು. ತೇಜಸ್ವಿ ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಎಲ್ಲರ ಪ್ರಶಂಸೆಗೆ ಕಾರಣವಾಗಿತ್ತು.

ಈ ಭಾಷಣದ ಬಳಿಕ ಕನ್ನಡಿಗರಿಗೆ ಐಬಿಪಿಎಸ್(ಇನ್‍ಸ್ಟಿಟ್ಯೂಟ್ ಆಫ್ ಬ್ಯಾಕಿಂಗ್ ಪರ್ಸನಲ್ ಸೆಲೆಕ್ಷನ್)ನಿಂದ ಆಗಿರುವ ಸಮಸ್ಯೆಯ ಬಗ್ಗೆ ಮಾತನಾಡಿ ತೇಜಸ್ವಿ ರಾಜ್ಯದ ಗಮನ ಸೆಳೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *